Saturday, December 6

ದೆಹಲಿ ಸ್ಫೋಟ ಹಿನ್ನೆಲೆ; ತುಮಕೂರಿನಲ್ಲಿ ವ್ಯಕ್ತಿಯ ವಿಚಾರಣೆ

ಬೆಂಗಳೂರು: ದೆಹಲಿಯಲ್ಲಿ ನವೆಂಬರ್ 10ರಂದು ಸಂಭವಿಸಿದ ಕಾರು ಸ್ಫೋಟದಲ್ಲಿ 12 ಜನರು ಮೃತಪಟ್ಟ ಪ್ರಕರಣದ ತನಿಖೆಯ ಭಾಗವಾಗಿ, ಕರ್ನಾಟಕ ಪೊಲೀಸರು ತುಮಕೂರಿನ ಮಾಜಿ ಭಯೋತ್ಪಾದಕ ಎಂದು ಹೇಳಲಾದ ವ್ಯಕ್ತಿಯನ್ನು ಗುರುವಾರ ವಿಚಾರಣೆಗೊಳಪಡಿಸಿದ್ದಾರೆ.

ಪೊಲೀಸರ ಮಾಹಿತಿಯ ಪ್ರಕಾರ, ಮುಜಾಹಿದ್ ಎಂಬಾತನನ್ನು ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ಎಸ್‌ಪಿ ಪುರುಷೋತ್ತಮ್ ಅವರ ನೇತೃತ್ವದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಹೊತ್ತು ವಿಚಾರಣೆ ನಡೆಸಲಾಯಿತು. ವಿಚಾರಣೆ ಬಳಿಕ ಯಾವುದೇ ನೇರ ಸಂಪರ್ಕ ಕಂಡುಬರದ ಹಿನ್ನೆಲೆಯಲ್ಲಿ, ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಜಾಹಿದ್ ಹಿಂದೆ ಭಯೋತ್ಪಾದಕ ಸಂಘಟನೆಗಾಗಿ ಸಭೆ ಆಯೋಜಿಸಿದ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿ ದೆಹಲಿಯ ತಿಹಾರ್ ಜೈಲಿಗೆ ಕಳುಹಿಸಿತ್ತು. ಆರು ವರ್ಷಗಳ ಶಿಕ್ಷೆ ಅನುಭವಿಸಿದ ಬಳಿಕ ಆತ ಬಿಡುಗಡೆಗೊಂಡಿದ್ದು, ಈಗ ತುಮಕೂರಿನ ಪಿಎಸ್ ಕಾಲೊನಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ಸಂಚುಕೋರರು ಅಥವಾ ಮಾಸ್ಟರ್ ಮೈಂಡ್ ಬೆಂಗಳೂರಿನ ಸಂಪರ್ಕದಲ್ಲಿರುವ ಸಾಧ್ಯತೆಗಳ ಬಗ್ಗೆ ತನಿಖಾ ಸಂಸ್ಥೆ ಶಂಕೆ ವ್ಯಕ್ತಪಡಿಸಿದೆ. ಈಗಾಗಲೇ ಬಂಧನದಲ್ಲಿರುವ ಕೆಲ ಶಂಕಿತರನ್ನು ವಿಚಾರಣೆಗೊಳಪಡಿಸಿರುವ ಎನ್‌ಐಎ ಅಧಿಕಾರಿಗಳು, ಬೆಂಗಳೂರು ಜಾಲದ ಸಂಪರ್ಕವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಮೂಲಗಳ ಪ್ರಕಾರ, ದೆಹಲಿ ಸ್ಫೋಟ ಮತ್ತು ಕರ್ನಾಟಕದ ಕೆಲ ವ್ಯಕ್ತಿಗಳು ಅಥವಾ ಚಟುವಟಿಕೆಗಳ ನಡುವೆ ಸಂಬಂಧವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಎನ್‌ಐಎ ತಂಡಗಳು ತನಿಖೆಯನ್ನು ಚುರುಕುಗೊಳಿಸಿದೆ.

ಇದೇ ವೇಳೆ, 2020ರ ಆಗಸ್ಟ್ 17ರಂದು ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟ ಅಬ್ದುರ್ ರೆಹಮಾನ್ ಅಲಿಯಾಸ್ ಡಾ. ಬ್ರೇವ್ ಎಂಬಾತನ ಮತ್ತು ಇತ್ತೀಚಿನ ದೆಹಲಿ ಸ್ಫೋಟ ಪ್ರಕರಣದ ನಡುವೆ ನಂಟಿದೆ ಎಂಬ ಅನುಮಾನಗಳ ಹಿನ್ನೆಲೆಯಲ್ಲಿ, ಪೊಲೀಸರು ಆಳವಾದ ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.