
ನವದೆಹಲಿ: ಚಳಿಗಾಲದ ಅಧಿವೇಶನ ಆರಂಭದ ದಿನವೇ ಕೇಂದ್ರ ಸರ್ಕಾರ 13ಕ್ಕೂ ಹೆಚ್ಚು ಪ್ರಮುಖ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲು ಸಜ್ಜಾಗಿದೆ. ಇದರಲ್ಲಿ ಕೇಂದ್ರ ಅಬಕಾರಿ ತಿದ್ದುಪಡಿ ಮಸೂದೆ–2025 ಮತ್ತು ಆರೋಗ್ಯ ಭದ್ರತಾ ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ–2025 ಪ್ರಮುಖವಾಗಿವೆ.
ತಂಬಾಕು, ಪಾನ್ ಮಸಾಲಾ ಸೇರಿದಂತೆ ‘ಪಾಪ’ ವಸ್ತುಗಳ ಮೇಲೆ ಈಗ ವಿಧಿಸುತ್ತಿರುವ ಜಿಎಸ್‌ಟಿ ಪರಿಹಾರ ಸೆಸ್‌ಗೆ ಬದಲಾಗಿ, ಅಬಕಾರಿ ಸುಂಕದ ರೂಪದಲ್ಲಿ ಹೆಚ್ಚುವರಿ ತೆರಿಗೆ ಮುಂದುವರಿಸಲು ಈ ಮಸೂದೆಗಳನ್ನು ತರಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ ಈ ವಸ್ತುಗಳ ಮೇಲೆ ಜಿಎಸ್‌ಟಿ 28% ವಿಧಿಸಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ವಿವಿಧ ದರಗಳಲ್ಲಿ ಪರಿಹಾರ ಸೆಸ್ ವಿಧಿಸಲಾಗುತ್ತಿದೆ.
ಕೋವಿಡ್ ಅವಧಿಯಲ್ಲಿ ರಾಜ್ಯಗಳ ಜಿಎಸ್‌ಟಿ ಆದಾಯ ನಷ್ಟವನ್ನು ಪೂರೈಸಲು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದ ಸಾಲ ಮರುಪಾವತಿಗಾಗಿ ಪರಿಹಾರ ಸೆಸ್ ಸಂಗ್ರಹವನ್ನು ಬಳಸಲಾಗುತ್ತಿತ್ತು. ಈ ಸಾಲ ಡಿಸೆಂಬರ್‌ಗೆ ಸಂಪೂರ್ಣ ಮರುಪಾವತಿಯಾಗಿರುವುದರಿಂದ, ಈಗ ಸೆಸ್ ಅನ್ನು ಹಂತಹಂತವಾಗಿ ತೆಗೆದು ಹಾಕುವ ಅವಶ್ಯಕತೆ ಬಂದಿದೆ. ಆದರೆ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ವೆಚ್ಚಗಳಿಗಾಗಿ ಪಾನ್ ಮಸಾಲಾ ಮತ್ತು ತಂಬಾಕು ಮೇಲಿನ ತೆರಿಗೆ ಬಿಗಿತವನ್ನು ಮುಂದುವರಿಸಲು ಹೊಸ ಸೆಸ್ ವ್ಯವಸ್ಥೆ ತರಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಐಷಾರಾಮಿ ಸರಕುಗಳ ಮೇಲಿನ ಪರಿಹಾರ ಸೆಸ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ರದ್ದುಪಡಿಸಲಾಗಿತ್ತು. GST ದರಗಳನ್ನು ಸರಳೀಕರಣಗೊಳಿಸುವ ಪ್ರಯತ್ನದಲ್ಲಿ ಕೇವಲ 5% ಮತ್ತು 18% ಎಂಬ ಎರಡು ಪ್ರಮುಖ ಸ್ಲ್ಯಾಬ್‌ಗಳು ಉಳಿಸಿಕೊಂಡಿವೆ. ಐಷಾರಾಮಿ ಸರಕುಗಳು ಹಾಗೂ ಸಕ್ಕರೆಯಿರುವ ಪಾನೀಯಗಳಿಗೆ ಮಾತ್ರ 40% ದರವನ್ನು ವಿಧಿಸಲಾಗುತ್ತಿದೆ.
