
ದುಬೈ: ಇರಾನ್ನಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರಗೊಂಡಿದ್ದು, ಇದುವರೆಗೆ 35 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 29 ಪ್ರತಿಭಟನಾಕಾರರು, ನಾಲ್ಕು ಮಕ್ಕಳು ಮತ್ತು ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಸೇರಿದ್ದಾರೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಘಟನೆ ಮಾಹಿತಿ ನೀಡಿದೆ.
ಪ್ರತಿಭಟನೆಗಳಿಗೆ ಸಂಬಂಧಿಸಿ 1,200ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇರಾನ್ನ 31 ಪ್ರಾಂತ್ಯಗಳಲ್ಲಿ 27 ಪ್ರಾಂತ್ಯಗಳ 250ಕ್ಕೂ ಅಧಿಕ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಅರೆ–ಅಧಿಕೃತ ಫಾರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಪ್ರತಿಭಟನೆ ವೇಳೆ ಸುಮಾರು 250 ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಪಡೆಗೆ ಸಂಬಂಧಿಸಿದ ಬಸಿಜ್ ಸ್ವಯಂಸೇವಕ ಪಡೆಯ 45 ಸದಸ್ಯರು ಗಾಯಗೊಂಡಿದ್ದಾರೆ.
