Thursday, January 29

ಪಂಚಾಯತ್‌ಗಳ ಅಭಿವೃದ್ಧಿ ಸ್ಥಗಿತದ ಭೀತಿ: ಕೇಂದ್ರ ಅನುದಾನ ತಕ್ಷಣ ಬಿಡುಗಡೆ ಅಗತ್ಯ

ಬೆಂಗಳೂರು: ಪಂಚಾಯತಿ ಮಟ್ಟದ ಆಡಳಿತವನ್ನು ಉಳಿಸಿಕೊಳ್ಳಲು ಹಾಗೂ ಅವುಗಳ ಅವಧಿ ಮುಗಿಯುವ ಮೊದಲೇ ನಿರ್ಣಾಯಕ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ಸಕಾಲಕ್ಕೆ ಅನುದಾನಗಳನ್ನು ಬಿಡುಗಡೆ ಮಾಡುವುದು ಅತ್ಯಗತ್ಯವಾಗಿದೆ. ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಗ್ರಾಮ ಪಂಚಾಯತಿಗಳ ಪ್ರಸ್ತುತ ಅವಧಿ 2026ರ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದ್ದು, ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕರ್ನಾಟಕವು ಗ್ರಾಮೀಣ ವಿಕೇಂದ್ರೀಕರಣದಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದೆ ಮತ್ತು ಪಂಚಾಯತಿ ಮಟ್ಟದ ಆಡಳಿತವನ್ನು ಉಳಿಸಿಕೊಳ್ಳಲು ಹಾಗೂ ಅವುಗಳ ಅವಧಿ ಮುಗಿಯುವ ಮೊದಲೇ ನಿರ್ಣಾಯಕ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ಸಕಾಲಕ್ಕೆ ಅನುದಾನಗಳನ್ನು ಬಿಡುಗಡೆ ಮಾಡುವುದು ಅತ್ಯಗತ್ಯವಾಗಿದೆ ಎಂದಿದ್ದಾರೆ.

ಈ ಕುರಿತು ಕರ್ನಾಟಕದ ಗ್ರಾಮ ಪಂಚಾಯತಿಗಳಿಗೆ ಕೇಂದ್ರ ಸರ್ಕಾರದಿಂದ ಬಾಕಿ ಇರುವ 15ನೇ ಹಣಕಾಸು ಆಯೋಗದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲು ಗಮನಹರಿಸಬೇಕೆಂದು ಕೇಂದ್ರ ಪಂಚಾಯತ್ ರಾಜ್ ಸಚಿವರಾದ ರಾಜೀವ್ ರಂಜನ್ ಸಿಂಗ್ ಅವರಿಗೆ ಪತ್ರ ಬರೆದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

2025–26ನೇ ಹಣಕಾಸು ವರ್ಷದ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಲ್ಲಿನ ನಿರಂತರ ವಿಳಂಬದ ಕುರಿತು 2025ರ ಡಿಸೆಂಬರ್ 08 ರಂದು ಬರೆದ ಪತ್ರವನ್ನು ಬರೆಯಲಾಗಿತ್ತು. 2025ರ ಆಗಸ್ಟ್ ತಿಂಗಳಿನಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆಗಳನ್ನು (GPDP ಗಳು) ಸಕಾಲಿಕವಾಗಿ ಅಪ್ಲೋಡ್ ಮಾಡಿರುವುದನ್ನು ಖಚಿತಪಡಿಸಿಕೊಂಡು, 2025ರ ಜುಲೈ 08 ಮತ್ತು ಸೆಪ್ಟೆಂಬರ್ 24ರಂದು ಅಗತ್ಯವಿರುವ ಅನುದಾನ ವರ್ಗಾವಣೆ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರೂ ಸಹ ಕೇಂದ್ರ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದವರು ಪ್ರತಿಕ್ರಿಯಿಸಿದ್ದಾರೆ.

ಗ್ರಾಮಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಬಾಕಿ ಇರುವ 15ನೇ ಹಣಕಾಸು ಆಯೋಗದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡುವ ಮೂಲಕ ಗ್ರಾಮಗಳ ಸಬಲೀಕರಣಕ್ಕೆ ಸಹಕರಿಸಬೇಕು ಎಂದು ಸಚಿವರಿಗೆ ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ಕೋರಿದ್ದಾರೆ.