
ಬೆಂಗಳೂರು: ಕೊಟ್ಟ ಭರವಸೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಡಿಸೆಂಬರ್ ೧೦ರಂದು “ಬೃಹತ್ ಬೆಳಗಾವಿ ಚಲೋ” ಹೋರಾಟ ಹಮ್ಮಿಕೊಂಡಿದೆ. ಅಂದು ಬೆಳಗಾವಿ ಸುವರ್ಣ ಸೌಧ ಬಳಿ ರಾಜ್ಯದ ವಿವಿಧೆಡೆಯ ಆಶಾ ಕಾರ್ಯಕರ್ತೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಹಾಗೂ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು 2008-9ನೇ ಸಾಲಿನಿಂದ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿಗೆ ಕೆಲವೇ ಸಾವಿರ ಸಂಖ್ಯೆಯಲ್ಲಿ ಇದ್ದ ಈ ಕಾರ್ಯಕರ್ತೆಯರ ಸಂಖ್ಯೆ ಕೆಲವೇ ವರ್ಷಗಳಲ್ಲಿ, 42000ಕ್ಕೂ ಹೆಚ್ಚಿನ ಸಂಖ್ಯೆಗೆ ಏರಿತು. ಅಲ್ಲಿಂದ ಇಲ್ಲಿಯವರೆಗೂ ಕಳೆದ 18 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಕುಟುಂಬಗಳ ತಾಯಿ-ಮಗು ಹಾಗೂ ಜನ ಸಾಮಾನ್ಯರಿಗೆ ಸರ್ಕಾರದ ಎಲ್ಲಾ ಆರೋಗ್ಯ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಮಾರಣಾಂತಿಕ ಸಾಂಕ್ರಾಮಿಕ ಕೊರೋನಾ ಹರಡಿದ ಸಂದರ್ಭದಲ್ಲಿ ಅವರು ನೀಡಿರುವ ಅನನ್ಯ ಸೇವೆಯನ್ನು ಯಾರೂ ಮರೆಯಲಾಗದು ಮತ್ತು ಈಗಲೂ ಅಮೂಲ್ಯ ಸೇವೆ ನೀಡುತ್ತಿದ್ದಾರೆ.
ಕಳೆದ 17 ವರ್ಷಗಳ ಹಿಂದೆ ಚಟುವಟಿಕೆ ಆಧಾರಿತ ಪ್ರೋತ್ಸಾಹ ಧನ ನೀಡುವುದಾಗಿ ಸೇವೆಗೆ ನೇಮಿಸಿಕೊಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಾವಾಗಿಯೇ ಏನನ್ನೂ ಕೊಡಲಿಲ್ಲ ಮತ್ತು ವರ್ಷ ವರ್ಷ ಪ್ರೋತ್ಸಾಹ ಧನ ಹೆಚ್ಚಿಸಲಿಲ್ಲ. ಆಶಾ ಕಾರ್ಯಕರ್ತೆಯರು ಪ್ರತಿ ವರ್ಷವೂ ಪದೇ ಪದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸಂಘರ್ಷಕ್ಕೆ ಇಳಿದು ಇಲಾಖೆ ಮೇಲೆ ಒತ್ತಡ ಹೇರಿ ಪ್ರೋತ್ಸಾಹ ಧನ, ಗೌರವ ಧನಗಳೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಮಾಡುವ ವಿವಿಧ ಚಟುವಟಿಕೆಗಳನ್ನು ಆನ್ಲೈನ್ ಪೋರ್ಟಲ್ ಒಂದಕ್ಕೆ ಅಪ್ಲೋಡ್ ಮಾಡಿದ ನಂತರ ಪಿಎಚ್ ಸಿ ಯಿಂದ ಆರಂಭವಾಗಿ ತಾಲೂಕು ಜಿಲ್ಲೆ ಮತ್ತು ರಾಜ್ಯ ಮಟ್ಟದವರೆಗೂ ವಿವಿಧ ಹಂತಗಳಲ್ಲಿ ದೃಢೀಕರಣಗೊಂಡು ಅವರಿಗೆ ಬರುವ ಪ್ರೋತ್ಸಾಹ ಧನ ಮಾಡಿರುವ ಚಟುವಟಿಕೆಗಳಿಗಿಂತಲೂ ತುಂಬಾ ತುಂಬಾ ಕಡಿಮೆ ಬರುತ್ತಿತ್ತು. ಕೆಲಸ ಮಾಡಿದಷ್ಟು ಹಣ ಬರುತ್ತಿಲ್ಲವೆಂದು ಹಲವಾರು ವರ್ಷಗಳಿಂದ ದೂರಿದರೂ ಇಲಾಖೆ ಅದನ್ನು ಸರಿಪಡಿಸಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ನೀಡುವ ಪ್ರೋತ್ಸಾಹ ಧನ ಹಾಗೂ ರಾಜ್ಯ ಸರ್ಕಾರ ನೀಡುವ ಮಾಸಿಕ ನಿಶ್ಚಿತ ಗೌರವ ಧನ 5,000 ರೂ.galannuವನ್ನು ಒಟ್ಟಿಗೆ ಸೇರಿಸಿದರೆ ಅಂದಾಜು ಮಾಸಿಕ ರೂ.೧೫,೦೦೦ ಗಳಷ್ಟು ಆಗುತ್ತಿದ್ದು, ಅದನ್ನು ನಿಶ್ಚಿತ ರೂಪದಲ್ಲಿ ನೀಡಬೇಕೆಂದು ಕೇಳುತ್ತಿದ್ದೇವೆ. ಹಲವಾರು ವರ್ಷಗಳಿಂದ ಪದೇ ಪದೇ ಮನವಿ ಪತ್ರಗಳನ್ನು ಸಲ್ಲಿಸಿ ಒತ್ತಾಯಿಸುತ್ತಿದ್ದರೂ ಸರ್ಕಾರ ಪರಿಗಣಿಸುತ್ತಿಲ್ಲ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರಮುಖರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈವರೆಗಿನ ಹೋರಾಟದ ಮುಂದುವರಿಕೆಯಾಗಿ 2025ರ ಜನವರಿ 7 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಯಿತು ರಾಜ್ಯದ 40,000 ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ರಾಜ್ಯ ಸರ್ಕಾರದ ಮಾಸಿಕ ನಿಶ್ಚಿತ ಗೌರವ ಧನ ರೂ.5,000 ಜೊತೆಗೆ ಕೇಂದ್ರ ಸರ್ಕಾರದ ಭಾಗಶಃ ಪ್ರೋತ್ಸಾಹ ಧನಗಳನ್ನು ಸೇರಿಸಿ, ಅಗತ್ಯ ಬಿದ್ದರೆ ರಾಜ್ಯ ಸರ್ಕಾರದಿಂದ ಇನ್ನಷ್ಟು ಹಣ ನೀಡಿ ಮಾಸಿಕ ರೂ.10,000 ಪ್ರತಿ ಆಶಾ ಕಾರ್ಯಕರ್ತೆಯರಿಗೆ ಲಭಿಸುವಂತೆ ಮಾಡುತ್ತೇವೆ” ಎಂದು ಭರವಸೆಯನ್ನು ನೀಡಿದರು. ಇದಕ್ಕೂ ಹೆಚ್ಚಿನ ಕೆಲಸ ಮಾಡುವ ಕಾರ್ಯಕರ್ತೆಯರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಮಾತುಕತೆಯಾಗಿತ್ತು. ಇತರ ಬೇಡಿಕೆಗಳ ಕುರಿತು ಮುಂದಿನ ಕೆಲವೇ ದಿನಗಳಲ್ಲಿ ಸಭೆ ಕರೆದು ನಿರ್ಣಯ ಮಾಡುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯಿಂದಾಗಿ ಅಂದಿನ ಅನಿರ್ದಿಷ್ಟ ಹೋರಾಟವನ್ನು ಹಿಂಪಡೆಯಲಾಯಿತು. ಆದರೆ ಈ ವರೆಗೂ ಸರ್ಕಾರದ ಆದೇಶ ಆಗಲಿಲ್ಲ ಎಂದು ಸಂಘದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ.10,000 ನೀಡುವುದು ಸರ್ಕಾರದ ಕನಿಷ್ಟ ಪರಿಹಾರ ಕ್ರಮವಾಗಿದೆ. ಈ ಕುರಿತು ಕೂಡಲೇ ಆದೇಶ ಮಾಡಬೇಕು. ಹಾಗೆಯೇ ಜೊತೆಗೆ ಕೇಂದ್ರ ಸರ್ಕಾರದಿಂದ ಹಲವಾರು ಕಾಂಪೋನೆಂಟ್’ಗಳ ಪ್ರೋತ್ಸಾಹಧನ ಕಳೆದ ಜೂನ್-ಜೂಲೈ-೨೦೨೫ ಹೆಚ್ಚಳ ಮಾಡಲಾಗಿದೆ. ಈ ಪ್ರೋತ್ಸಾಹಧನವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಳೆದ ಅಧಿವೇಶನದಲ್ಲಿ ಅಕ್ಟೋಬರ್‌ಯಿಂದ ಕೇಂದ್ರದಿಂದ ಹೆಚ್ಚಳವಾದ ಹಣ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲದಿದ್ದರೂ ರಾಜ್ಯದಿಂದ ಪ್ರೋತ್ಸಾಹಧನವನ್ನು ನೀಡುವುದಾಗಿ ತಿಳಿಸಿರುತ್ತಾರೆ. ಇದೂ ಸಹ ಕೂಡಲೇ ಬಿಡುಗಡೆ ಆಗಬೇಕಾಗಿದೆ. ಕೇಂದ್ರ ಸರ್ಕಾರ ಹೆಚ್ಚಿಸಿರುವ ರೂ.1,500 ಪ್ರೋತ್ಸಾಹ ಧನವನ್ನು ಕೂಡಲೇ ನೀಡಲು ಕ್ರಮವಹಿಸಬೇಕು ಎಂದು ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ಆಶಾ ಸುಗಮಕಾರರನ್ನು ಸೇವೆಯಿಂದ ಬಿಡುಗಡೆ ಮಾಡಿರುವುದರಿಂದ ಚಟುವಟಿಕೆಗಳಿಗೆ ಧಕ್ಕೆಯಾಗುತ್ತಿದ್ದು ಅವರನ್ನು ಸೇವೆಗೆ ಸೇರಿಸಿಕೊಳ್ಳಬೇಕು ಎನ್ನುವ ಬೇಡಿಕೆಯೂ ಸೇರಿದಂತೆ ಈ ವಿವಿಧ ಬೇಡಿಕೆಗಳನ್ನು ಈಡೇರಿಸಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಘೋಷಿಸಬೇಕೆಂದು ಒತ್ತಾಯಿಸಿ, ಡಿಸೆಂಬರ್ 10ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೃಹತ್ ಹೋರಾಟವನ್ನು ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ ಆಶಾ ಕಾರ್ಯಕರ್ತೆಯರು ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗಿಯಾಗಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಹಾಗೂ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು ಕರೆ ನೀಡಿದ್ದಾರೆ.
ಹಕ್ಕೊತ್ತಾಯಗಳು:
- ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಹಾಗೂ ರಾಜ್ಯ ಸರ್ಕಾರದ ಗೌರವ ಧನ ಸೇರಿ ಮಾಸಿಕ ರೂ.15,000 ಗೌರವ ಧನ ನೀಡಬೇಕು.
- ರಾಜ್ಯ ಸರ್ಕಾರ ಮಾತು ಕೊಟ್ಟಂತೆ, ಏಪ್ರೀಲ್‌ಯಿಂದ ಅನ್ವಯಿಸಿ ಮಾಸಿಕ ರೂ.10,000 ಗ್ಯಾರಂಟಿಯನ್ನು ಮತ್ತು ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಿರುವಂತೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಸಹ ಭರವಸೆ ಕೊಟ್ಟಂತೆ ರೂ.1,000 ಇದೇ ವರ್ಷದ ಏಪ್ರಿಲ್ ನಿಂದಲೇ ಅನ್ವಯಿಸಿ ಕೂಡಲೇ ಆದೇಶ ಮಾಡಬೇಕು
- ಕೇಂದ್ರ ಸರ್ಕಾರ ಹೆಚ್ಚಿಸಿರುವ ರೂ.1,500 ಪ್ರೋತ್ಸಾಹ ಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.
- ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು. ಆಶಾ ಸುಗಮಕಾರರಿಗೆ ಕಳೆದ ವರ್ಷ ಹೆಚ್ಚಳ ಆದ ಗೌರವಧನ ಒಂದು ವರ್ಷದ ಬಾಕಿ ಮಾಸಿಕ ರೂ.1500 ರಂತೆ ಎಲ್ಲಾ ಸುಗಮಕಾರರಿಗೆ ನೀಡಿ.(ಆರ್‌ಒಪಿ: 2025-26 ರಂತೆ ರೂ.7500)
- ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು.
- ನಗರ ಆಶಾಗಳಿಗೆ ರೂ.2000 ಗೌರವಧನ ಹೆಚ್ಚಿಸಬೇಕು.
