
ಬೆಂಗಳೂರು: ಬಜೆಟ್ ಅಧಿವೇಶನದ ಕೊನೆಯ ದಿನ ವಿಧಾನಸಭೆಯಲ್ಲಿ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಯನ್ನು ಸುಗ್ರೀವಾಜ್ಞೆಯ ಮೂಲಕ ಶೀಘ್ರದಲ್ಲಿ ಜಾರಿಗೊಳಿಸುವು ಡಿಸಿಎಂ ಡಿಕೆ ಶಿವಕುಮಾರ್ ಅವರ ಭರವಸೆಯನ್ನು ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್ (BAF) ಮುಕ್ತಕಂಠದಿಂದ ಸ್ವಾಗತಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಬಹುನಿರೀಕ್ಷಿತ ಈ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಕಾರಣೀಭೂತರಾಗಿರುವಂತಹ ಎಲ್ಲ ಪಕ್ಷದ ನಾಯಕರು ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದೆ.
“ಕರ್ನಾಟಕ ವಿಧಾನಸಭೆಯಲ್ಲಿ KAOMA ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಕ್ಕಾಗಿ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್, ಹಾಗೂ ಎಲ್ಲಾ ಪಕ್ಷಗಳ ನಾಯಕರಿಗೂ ನಾವು ಆಭಾರಿಯಾಗಿದ್ದೇವೆ. ಈ ಮಹತ್ವದ ಕಾಯ್ದೆಯನ್ನು ರೂಪಿಸುವಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರ ಪ್ರಯತ್ನಗಳನ್ನು ನಡೆಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳಿಗೆ, ನಗರಾಭಿವೃದ್ಧಿ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆಯ ಅಧಿಕಾರಿಗಳಿಗೂ ನಾವು ನಮ್ಮ ಧನ್ಯವಾದಗಳನ್ನು ತಿಳಿಸಲು ಇಚ್ಚಿಸುತ್ತೇವೆ,” ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಅಧ್ಯಕ್ಷರಾದ ಶ್ರೀ ಸತೀಶ್ ಮಲ್ಯ ತಿಳಿಸಿದ್ದಾರೆ.
‘KAOMAಕಾಯ್ದೆಯು ಕರ್ನಾಟಕದಾದ್ಯಂತ ಇರುವ ಲಕ್ಷಾಂತರ ಅಪಾರ್ಟ್‌ಮೆಂಟ್ ಗಳ ನಿರ್ವಹಣೆಯ ಮತ್ತು ಮಾಲೀಕತ್ವದಲ್ಲಿ ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಬಲೀಕರಣವನ್ನು ತರಲಿದೆ. ಈ ನಿಯಮಗಳು ಮತ್ತು ಮಾದರಿ ಬೈ-ಲಾಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಾವು ಸರ್ಕಾರದೊಂದಿಗೆ ನಿರಂತರವಾಗಿ ಸಹಕರಿಲಿದ್ದೇವೆ. ವಿಧಾನಸಭೆಯಲ್ಲಿ ನೀಡಿರುವ ಭರವಸೆಯಿಂತೆ ಈ ಕಾಯ್ದೆಯನ್ನು ತ್ವರಿತವಾಗಿ ಹಾಗೂ ಕಾಲಮಿತಿಯೊಳಗೆ ಜಾರಿಗೊಳಿಸುವ ತುರ್ತು ಅಗತ್ಯವಿದೆ. ಇದನ್ನು ಸರ್ಕಾರ ಮರೆಯಬಾರದು ಎಂದು ಫೆಡರೇಷನ್ ಮನವಿ ಮಾಡುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
“ಕರ್ನಾಟಕದಾದ್ಯಂತ ಅಪಾರ್ಟ್‌ಮೆಂಟ್ ಮತ್ತು ವಸತಿ ಸಮುದಾಯಗಳಲ್ಲಿ ವಾಸಿಸುವ ಲಕ್ಷಾಂತರ ನಾಗರಿಕರು ಹಳೆಯ ಮತ್ತು ನಿಷ್ಪರಿಣಾಮಕಾರಿ ನೀತಿಗಳ ಚೌಕಟ್ಟಿನಡಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. KAOMA ಕಾಯ್ದೆಯು ಸುಗ್ರೀವಾಜ್ಞೆಯತ್ತ ಸಾಗುತ್ತಿರುವುದು ಅತ್ಯಂತ ಸ್ವಾಗತಾರ್ಹ ಹೆಜ್ಜೆ, ಆದರೆ ಅದು ಈಗ ಸಕಾಲಿಕವಾಗಿ ಅನುಷ್ಠಾನಗೊಳ್ಳಬೇಕು, ಈ ಸುಗ್ರೀವಾಜ್ಞೆಯನ್ನು ಕಾಲಮಿತಿಯೊಳಗೆ ಜಾರಿಗೊಳಿಸಬೇಕು. ಇದರ ಜೊತೆಯಲ್ಲೇ, ಹೊಸ ಕಾಯ್ದೆಯ ನಿಯಮಗಳು ಹಾಗೂ ಮಾದರಿ ಬೈ-ಲಾಗಳ ಅಧಿಸೂಚನೆಯನ್ನು ತ್ವರಿತವಾಗಿ ಪ್ರಕಟಿಸಬೇಕು ಎಂದು BAF ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಅರುಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.”
“ಈ ಬಜೆಟ್ ಅಧಿವೇಶನದಲ್ಲಿ ಮತ್ತು ಈ ಹಿಂದೆಯೂ ಈ ನಿರ್ಣಾಯಕ ಚರ್ಚೆಯನ್ನು ಕೈಗೆತ್ತಿಕೊಂಡ ಜನಪ್ರತಿನಿಧಿಗಳಾದ ಶ್ರೀ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಶ್ರೀ ಎಸ್.ಆರ್. ವಿಶ್ವನಾಥ್, ಶ್ರೀ ರವಿ ಸುಬ್ರಮಣ್ಯ, ಶ್ರೀ ಸುರೇಶ್ ಕುಮಾರ್, ಶ್ರೀ ಗೋಪಿನಾಥ್ ರೆಡ್ಡಿ ಮತ್ತು ಇತರ ಹಲವರಿಗೆ ನಾವು ನಮ್ಮ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಉದ್ದೇಶವನ್ನು ಬೆಂಬಲಿಸಿದ ಎಲ್ಲಾ ರಾಜಕೀಯ ಪಕ್ಷಗಳ ಶಾಸಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ನಾವು ಆಭಾರಿಯಾಗಿದ್ದೇವೆ,” ಎಂದು BAF ಖಜಾಂಚಿ ಶ್ರೀ ಕಿರಣ್ ಹೆಬ್ಬಾರ್ ತಿಳಿಸಿದರು.
“ಈ ಪ್ರಕ್ರಿಯೆಯನ್ನು ಬೆಂಬಲಿಸಲು BAF ಸಂಪೂರ್ಣವಾಗಿ ಬದ್ಧವಾಗಿದೆ. KAOMA ಕಾಯ್ದೆಯ ಉತ್ತಮ ತಿಳುವಳಿಕೆ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಸಕ್ರಿಯಗೊಳಿಸಲು ಬೆಂಗಳೂರು ಮತ್ತು ರಾಜ್ಯದಾದ್ಯಂತ ಶಾಸಕರೊಂದಿಗೆ ಜೊತೆಗೂಡಿ ಕಾರ್ಯಾಗಾರಗಳನ್ನು ಆಯೋಜಿಸಲು ನಾವು ಸಿದ್ಧರಿದ್ದೇವೆ ಎಂದು BAF ನ ಆಡಳಿತ ಮಂಡಳಿ ಸದಸ್ಯ ಶ್ರೀ ವಿಶ್ವ ವೆಂಕಟ ರೆಡ್ಡಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
