Wednesday, January 28

ಇಡೀ ಕರ್ನಾಟಕವನ್ನೇ ‘ಪೂರ್ವಜರ ಆಸ್ತಿ’ ಎಂದು ಬರೆಸಿಕೊಳ್ಳುವ ಮುನ್ನ ಕಂದಾಯ ಸಚಿವರ ವಿರುದ್ಧ ಕ್ರಮ ಕೈಗೊಳ್ಳಿ; ಬಿಜೆಪಿ ಆಗ್ರಹ

ಬೆಂಗಳೂರು: ಕರ್ನಾಟಕ ಹಾಗೂ ಕೇರಳ ಸರ್ಕಾರಗಳ ನಡುವೆ ಬುಲ್ಡೋಜರ್ ಬಡಿದಾಟ ನಡೆಯುತ್ತಿದೆ. ತನ್ನ ನಡೆ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಸಮರ್ತಿಸಿಕೊಂಡಿದ್ದು, ಕಾನೂನು ರೀತಿಯ ಕ್ರಮವನ್ನೇ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಹೊರವಲಯದ ಕೋಗಿಲು ಬಳಿ ಸರ್ಕಾರಿ ಜಮೀನಿನಲ್ಲಿ ಮುಸ್ಲಿಂ ಸಮುದಾಯದವರು ಅಕ್ರಮವಾಗಿ ಕಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಒತ್ತುವರಿ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾರ್ಯಾಚರಣೆ ನಡೆಸಿದೆ.

ಈ ಬುಲ್ಡೋಜರ್ ಕಾರ್ಯಚರಣೆ ಹಾಗೂ ಸಿದ್ದರಾಮಯ್ಯ ಸರ್ಕಾರದ ಸಮರ್ಥನೆಯನ್ನು ತನ್ನದೇ ಶೈಲಿಯಲ್ಲಿ ಟೀಕಿಸಿರುವ ಪ್ರತಿಪಕ್ಷ ಬಿಜೆಪಿ, ಸಿದ್ದು ಸರ್ಕಾರದ ಕಾನೂನುಬದ್ಧ ಕ್ರಮ ಬಡವರ ಮೇಲಷ್ಟೇ ಯಾಕೆ? ಪ್ರಭಾವಿಗಳ ಮೇಲೆ ಕ್ರಮ ಯಾವಾಗ ಎಂದು ಪ್ರಶ್ನಿಸಿದೆ.

ಈ ವಿಚಾರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಕೇಳಿಬಂದಿರುವ ಒತ್ತುವರಿ ಆರೋಪವನ್ನು ಪ್ರಸ್ತಾಪಿಸಿದೆ.

‘ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಂಚನೆಯ ಮುಖ ಬಯಲಾಗಿದೆ. ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಗರುಡನಪಾಳ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ 21 ಎಕರೆ 16 ಗುಂಟೆಯ ಕೆರೆ ಮತ್ತು ಸ್ಮಶಾನ ಭೂಮಿ ನುಂಗಿ ನೀರು ಕುಡಿದಿದ್ದಾರೆ. ಕಬಳಿಸಿರುವ ಜಮೀನನ್ನು”ಪೂರ್ವಜರ ಆಸ್ತಿ” ಎಂದು
ಕಪಟ ಕಥೆ ಕಟ್ಟಿ ರಾಜ್ಯದ ಜನರ ದಾರಿ ತಪ್ಪಿಸಿರುವ “ಭೂಗಳ್ಳ” ಮಂತ್ರಿ ಎಂದು ಕೃಷ್ಣ ಬೈರೇಗೌಡರನ್ನು ಉಲ್ಲೇಖಿಸಿದೆ.

ಕೆರೆ-ಸ್ಮಶಾನದ ಭೂಮಿ ‘ಪೂರ್ವಜರ ಆಸ್ತಿ’ಯಾಗಿ ಬದಲಾಗಿದ್ದು ಹೇಗೆ? ಸರ್ಕಾರಿ ಭೂಮಿ ಹೊಡೆಯುವುದು ‘ಕಂದಾಯ ಇಲಾಖೆಯ’ ಕೆಲಸವೇ?ಸರ್ಕಾರದ ಜಮೀನು ರಕ್ಷಿಸಬೇಕಾದ ಕಂದಾಯ ಮಂತ್ರಿಯೇ ಭೂಗಳ್ಳನಾದರೆ ಭೂಮಿ ರಕ್ಷಣೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದೆ.

ಇಡೀ ಕರ್ನಾಟಕವನ್ನೇ “ಪೂರ್ವಜರ ಆಸ್ತಿ” ಎಂದು ಬರೆಸಿಕೊಳ್ಳುವ ಮುನ್ನ ಕಂದಾಯ ಸಚಿವರ ವಿರುದ್ಧದ ಭೂಹಗರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿ ಬಿಜೆಪಿ ಬರೆದುಕೊಂಡಿರುವ ವೈಖರಿ ಕುತೂಹಲ ಕೆರಳಿಸಿದೆ.