ಬಾಂಗ್ಲಾದೇಶ ಹಿಂಸಾಚಾರ ಬಗ್ಗೆ ಬ್ರಿಟೀಷ್ ಲೇಬರ್ ಪಾರ್ಟಿ ಕಳವಳ; ಶೀಘ್ರ ಶಾಂತಿ ಸ್ಥಾಪನೆಗೆ ಡಾ.ನೀರಜ್ ಪಾಟೀಲ್ ಕರೆ

📝 ಜಯ ಪ್ರಕಾಶ್

ಲಂಡನ್: ಭೀಕರ ಹಿಂಸಾಚಾರದಿಂದ ಬಾಂಗ್ಲಾದೇಶ ತ್ತರಿಸಿದೆ. ಉದ್ಯೋಗ ನೀತಿ ವಿರುದ್ದ ವಿದ್ಯಾರ್ಥಿಗಳು ಹಾಗೂ ವಿರೋಧ ಪಕ್ಷಗಳು ದಂಗೆ ಎದ್ದಿದ್ದು ನಿರಂತರ ಹಿಂಸಾಚಾರದಿಂದಾಗಿ ನೂರಾರು ಮಂದಿ ಬಲಿಯಾಗಿದ್ದಾರೆ. ಈ ಹಿಂಸಾಚರದಿಂದ ಬೆಚ್ಚಿದ ಶೇಖ್ ಹಸೀನಾ ಅವರು ಪ್ತಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನವಾಗಿದ್ದಾರೆ.

ಬಾಂಗ್ಲಾದೇಶದ ಈ ಪರಿಸ್ಥಿತಿ ಬಗ್ಗೆ ಲಂಡನ್‌‌ನಲ್ಲಿರುವ ಬ್ರಿಟಿಷ್ ಲೇಬರ್ ಪಾರ್ಟಿ ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬ್ರಿಟಿಷ್ ಲೇಬರ್ ಪಾರ್ಟಿ ನಾಯಕರೂ ಆದ, ಭಾರತ ಮೂಲದ ಮಾಜಿ ಲಂಡನ್ ಮೇಯರ್ ಡಾ.ನೀರಜ್ ಪಾಟೀಲ್, ಬಾಂಗ್ಲಾದೇಶದಲ್ಲಿ ಶೀಘ್ರ ಶಾಂತಿ ಮರುಸ್ಥಾಪಿಸಲು ವಿಶ್ವ ಸಮುದಾಯ ಸಹಕಾರ ನೀಡಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ಬಾಂಗ್ಲಾದೇಶ ಸಂಸತ್ತು ವಿಸರ್ಜನೆಯಾಗಿದೆ, ಅದರ ಪ್ರಧಾನಿ ಈಗ ದೆಹಲಿಯಲ್ಲಿದ್ದಾರೆ. ಮುಂದಿನ ಮೂರು ತಿಂಗಳೊಳಗೆ ಚುನಾಯಿತ ಸರ್ಕಾರವನ್ನು ಮರುಸ್ಥಾಪಿಸುವ ಭರವಸೆಯೊಂದಿಗೆ ಮಿಲಿಟರಿ ಸ್ವಾಧೀನವಿದೆ. ಇದು ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯಾಗಿದೆ ಮತ್ತು ಬ್ರಿಟಿಷ್ ವಿದೇಶಾಂಗ ಕಚೇರಿ ಕೂಡಾ ಕಳವಳ ವ್ಯಕ್ತಪಡಿಸಿದೆ ಎಂದವರು ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಜನಸಂಖ್ಯೆ 8% ರಷ್ಟಿದೆ. ಹಿಂದೂ ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರು ಉದ್ರಿಕ್ತರ ಗುರಿಯಾಗುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಇಂತಹಾ ಬೆಳವಣಿಗೆ ಒಳ್ಳೆಯದಲ್ಲ ಎಂದು ನೀರಜ್ ಪಾಟೀಲ್ ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂ, ಸಿಖ್, ಕ್ರಿಶ್ಚಿಯನ್, ಬೌದ್ಧ ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ಗಮನಹರಿಸಬೇಕಿದೆ. ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕಿದೆ. ಕಾನೂನುಬದ್ದ ಸರ್ಕಾರ ಮರುಸ್ಥಾಪನೆಯ ಪ್ರಯತ್ನ ಮುಂದುವರಿದಿರುವುದರಿಂದ ಆಶಾದಾಯಕ ಬೆಳವಣಿಗೆಯನ್ನು ನಿರೀಕ್ಷಿಸಬಹುದಾಗಿದೆ ಎಂದವರು ಹೇಳಿದ್ದಾರೆ.

ಜಗತ್ತು ನಿರೀಕ್ಷಿಸುತ್ತಿರುವ ಸುರಕ್ಷಾ ಕ್ರಮಗಳನ್ನು ಉಸ್ತುವಾರಿ ಸರ್ಕಾರ ತುರ್ತಾಗಿ ಕೈಹೊಳ್ಳಬೇಕೆಂದು ನಮ್ಮ ಲೇಬರ್ ಪಾರ್ಟಿ ಒತ್ತಾಯಿಸುತ್ತಿದೆ ಎಂದು ನೀರಜ್ ಪಾಟೀಲ್ ಹೇಳಿದ್ದಾರೆ.