Category: ಪ್ರಮುಖ ಸುದ್ದಿ

  • ಅಬಕಾರಿ ಲಂಚಾವತಾರ; ಲೂಟಿ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರು ಯಾವ ನಾಲಿಗೆಯಿಂದ ಹೇಳುತ್ತಿದ್ದಾರೆ?

    ಅಬಕಾರಿ ಲಂಚಾವತಾರ; ಲೂಟಿ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರು ಯಾವ ನಾಲಿಗೆಯಿಂದ ಹೇಳುತ್ತಿದ್ದಾರೆ?

    ರಾಮನಗರ: ಅಬಕಾರಿ ಇಲಾಖೆಯ ಹಗರಣದ ಬಗ್ಗೆ ದೂರು ಸಲ್ಲಿಕೆಯಾಗಿ ಜನರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಆದರೂ ಲೂಟಿ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರು ಯಾವ ನಾಲಿಗೆಯಿಂದ ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನೆ ಮಾಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆಯ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಅದು ಸುಳ್ಳು ಆರೋಪವೆಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇದರ ವಿರುದ್ಧ ದೂರು ದಾಖಲಾಗುವುದರ ಜೊತೆಗೆ, ಮದ್ಯ ಮಾರಾಟಗಾರರ ಸಂಘದವರು ಕೂಡ ಇದನ್ನು ಹೇಳಿದ್ದಾರೆ. ಮಾಧ್ಯಮಗಳಲ್ಲಿ ಕೂಡ ಇದು ವರದಿಯಾಗಿದೆ. ಜನರು ಕೂಡ ಈ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟಾದರೂ ನಾವು ಲೂಟಿ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರು ಯಾವ ನಾಲಿಗೆಯಿಂದ ಹೇಳುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

    ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಮಹಾರಾಷ್ಟ್ರಕ್ಕೆ 700 ಕೋಟಿ ರೂ. ಹೋಗಿದೆ. 200 ಕೋಟಿ ರೂ.ರಾಜ್ಯದ ಉಪಚುನಾವಣೆಗೆ ಬಳಸಲಾಗುತ್ತಿದೆ. ಇದು ಸುಳ್ಳು ಎನ್ನುವುದಾದರೆ ದೂರು ನೀಡಿದವರ ವಿರುದ್ಧ ಕಾಂಗ್ರೆಸ್ ಸರ್ಕಾರ ದೂರು ದಾಖಲಿಸಲಿ. ಕಾಂಗ್ರೆಸ್ ಬಳಿ ಓಡಾಡುತ್ತಿರುವ ಹಣ ಅಬಕಾರಿ ಇಲಾಖೆಯಿಂದಲೇ ಬಂದಿದ್ದು, ರಾಜ್ಯ ಸರ್ಕಾರ ಚುನಾವಣೆಯ ಎಟಿಎಂ ಆಗಿದೆ ಎಂದು ದೂರಿದರು.

    ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ, ಸರ್ಕಾರಿ ಹಣದಲ್ಲಿ ಜಾಹೀರಾತು ನೀಡಲಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಕೊಳ್ಳೆ ಹೊಡೆದಿರುವುದು ಸಾಬೀತಾಗಿದೆ. ಇದನ್ನು ಸ್ವತಃ ಸಿಎಂ ಒಪ್ಪಿಕೊಂಡಿದ್ದಾರೆ. ಶಾಲಾ ಮಕ್ಕಳಿಗೆ ಅಜೀಂ ಪ್ರೇಮ್ ಜಿ ಕಂಪನಿ ಮೊಟ್ಟೆ ಕೊಟ್ಟರೆ, ಅದನ್ನು ಸರ್ಕಾರ ಮಕ್ಕಳಿಗೆ ತಲುಪಿಸಿಲ್ಲ. ಈ ಸರ್ಕಾರದ ಯೋಗ್ಯತೆಯೇ ಇಷ್ಟು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಖ್ಯಮಂತ್ರಿಯಿಂದ ಪ್ರಗತಿ ಪರಿಶೀಲನೆ:

    ವಕ್ಫ್ ಬಳಿ 1.12 ಲಕ್ಷ ಎಕರೆ ಇದೆ ಎಂದು ಹೇಳಿದ್ದಾರೆ. ಇಷ್ಟು ಭೂಮಿ ಅವರ ಬಳಿ ಇದ್ದರೆ, ರಾಜ್ಯದಲ್ಲಿ ಯಾರಿಗೂ ಜಮೀನು ಇರುವುದಿಲ್ಲ. ಮುಸ್ಲಿಂ ಮುಖಂಡರೇ ವಕ್ಫ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಡಪ್ರಭು ಕೆಂಪೇಗೌಡರು ಅಕ್ಕಿಪೇಟೆ, ಬಳೆಪೇಟೆ ಮೊದಲಾದ ಪೇಟೆಗಳನ್ನು ನಿರ್ಮಿಸಿದ್ದರು. ಈ ಪೇಟೆಗಳು ಕೂಡ ತಮ್ಮದೇ ಎಂದು ವಕ್ಫ್ ಹೇಳುತ್ತಿದೆ. ಒಂದು ಕಡೆ ಸಿಎಂ ನೋಟಿಸ್‌ ಕೊಡಬೇಡಿ ಎನ್ನುತ್ತಾರೆ. ಇನ್ನೊಂದು ಕಡೆ ಭೂಮಿ‌‌ ಕಬಳಿಕೆಗೆ ಪ್ರಗತಿ ಪರಿಶೀಲನಾ ಸಭೆ ಮಾಡುತ್ತಾರೆ ಎಂದು ಹೇಳಿದರು.

    ರೈತರ ಪರ ಮಾತನಾಡಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಿದೆ. ಜೊತೆಗೆ ಕೋವಿಡ್ ಹಗರಣವೆಂದು ಸುಳ್ಳು ಆರೋಪ ಮಾಡಿ ವರದಿ ಸೃಷ್ಟಿಸಿ ಅದನ್ನು ಸೋರಿಕೆ ಮಾಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧವೂ ಪ್ರಕರಣ‌ ದಾಖಲಿಸಲು ಸಿದ್ಧತೆ ನಡೆಸಲಾಗಿದೆ. ಇನ್ನೂ ಪೂರ್ಣ ವರದಿ ಬಾರದೆ, ಚುನಾವಣೆಯ ಸಮಯದಲ್ಲಿ ಈ ಸುಳ್ಳು ಸೃಷ್ಟಿಸಲಾಗಿದೆ. ಕೆಂಪಣ್ಣ ಆಯೋಗ ರಚನೆಯಾಗಿ ಹತ್ತು ವರ್ಷ‌ ಕಳೆದರೂ ಅರ್ಧ ವರದಿಯೂ ಬಂದಿಲ್ಲ. ಯಡಿಯೂರಪ್ಪ ಅವರನ್ನು ಅಪರಾಧಿ ಎಂದು ಬಿಂಬಿಸಲು ಹುನ್ನಾರ ಮಾಡಲಾಗಿದೆ. ಇವೆಲ್ಲ ದ್ವೇಷದ ರಾಜಕಾರಣ ಎಂದರು.

    ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ನಡೆಯುತ್ತಿಲ್ಲ. ಮೂರು, ನಾಲ್ಕು ತಿಂಗಳಿಗೆ ಒಮ್ಮೆ ಗ್ಯಾರಂಟಿ ಹಣ ಜನರಿಗೆ ದೊರೆಯುತ್ತಿದೆ. ಆದರೂ ಇಲ್ಲಿಗೆ ಬಂದು ನೋಡಿ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಮೊದಲು ಇಲ್ಲಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಲಿ ಎಂದರು.

    ನಿಖಿಲ್ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲದಿಂದ ಸ್ಪರ್ಧಿಸುತ್ತಿದ್ದಾರೆ. ಈಗಿನ ಸಮಯದಲ್ಲಿ ನಿಖಿಲ್ ಅವರೇ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ ಎಂಬ ಮಾಹಿತಿ ಬಂದಿದೆ. ಅವರು ಗೆಲ್ಲುವುದು ಖಂಡಿತ ಎಂದರು.

  • ಕೋವಿಡ್ ಕರ್ಮಕಾಂಡ; ಹೆಣಗಳ ರಾಶಿಯಲ್ಲೂ ಹಣ ಹುಡುಕಾಟ; ಪ್ರಧಾನಿ ಮೋದಿ ಆದೇಶಕ್ಕೂ ಬೆಲೆಕೊಟ್ಟಿಲ್ಲ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ?

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಕೋವಿಡ್ ಕರ್ಮಕಂಡ ಇದೀಗ ಕಾಂಗ್ರೆಸ್-ಬಿಜೆಪಿ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಉಪಚುನಾವಣಾ ಹೊತ್ತಲ್ಲೇ ಕೋವಿಡ್ ಹಗರಣವನ್ನು ಮುಂದಿಟ್ಟು ಬಿಜೆಪಿ ನಾಯಕರ ಓಟವನ್ನು ಕಟ್ಟಿಹಾಕುತ್ತಿರುವ ಕಾಂಗ್ರೆಸ್ ಮುಖಂಡರು ಹಿಂದಿನ ಸರ್ಕಾರದ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹೆಣಗಳಿಂದಲೂ ಹಣ ಮಾಡಿರುವ ಹಿಂದಿನ ಸರ್ಕಾರವು, ಪ್ರಧಾನಿ ಮೋದಿ ಆದೇಶಕ್ಕೂ ಬೆಲೆಕೊಟ್ಟಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.


    ಬೆಂಗಳೂರಿನಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹಗರಣದ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಿಯಾಂಕ್ ಖರ್ಗೆ, ಕೊರೋನ ಸಮಯದಲ್ಲಿ ಯಡಿಯೂರಪ್ಪ ಹಾಗೂ ಶ್ರೀ ರಾಮುಲು ಅವರು ಹೆಣದ ಮೇಲೆ ಹೇಗೆ ಹಣ ಮಾಡಿದರು ಎಂಬುದನ್ನು ಜಸ್ಟೀಜ್ ಕುನ್ಹಾ ಅವರ ಕೊರೋನ ಮಧ್ಯಂತರ ವರದಿಯಲ್ಲಿದೆ. ಈ ಮಧ್ಯಂತರ ವರದಿಯಲ್ಲಿ ಸುಮಾರು 700 ಕೋಟಿ ಹಗರಣದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸುಮಾರು 3 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಗರಣ ನಡೆದಿದೆ ಎಂದರು.

    17.03.2020 ರಂದು 416.48 ಕೋಟಿ ಮೊತ್ತದ ಔಷಧಿಗಳು, ಕೆಮಿಕಲ್ ಗಳು, ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಲಾಗುತ್ತದೆ. 18.03.2020 ರಂದು ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಅಗತ್ಯ ವಸ್ತುಗಳ ನಿಗಾವಹಿಸುವ ಸಮಿತಿಯು ನಮಗೆ 12 ಲಕ್ಷ ಪಿಪಿಈ ಕಿಟ್ ಗಳು ಬೇಕು ಎಂದು ತೀರ್ಮಾನ ಮಾಡಿ ಒಂದು ಕಿಟ್ ಗೆ ₹ 2,117.53 ಎಂದು ತೀರ್ಮಾನ ಮಾಡುತ್ತದೆ ಎಂದವರು ವಿವರಿಸಿದರು.

    ಪಿಪಿಇ ಕಿಟ್ ಗಳಿಗೆ ಇಷ್ಟೇ ದರವನ್ನು ಏಕೆ ನಿಗದಿ ಮಾಡಲಾಯಿತು?  ನಂತರ ಕಾಮರ್ಸ್ ಮತ್ತು ಇಂಡಸ್ಟ್ರಿ ವಿಭಾಗವನ್ನು ಸಂಪರ್ಕಿಸಲಾಗುತ್ತದೆ. ಅವರು ಚೀನಾದಲ್ಲಿ ಬಿಗ್ ಫಾರ್ಮಸಿಟಿಕಲ್ ಮತ್ತು ಡಿಎಚ್ ಬಿ ಫಾರ್ಮಸಿಟಿಕಲ್ ಎನ್ನುವ ಕಂಪನಿಗಳಿಂದ ದರಪಟ್ಟಿಯನ್ನು ನಾವು ತರಿಸಿಕೊಂಡಿದ್ದೇವೆ ಎಂದು ಹೇಳಿದಾಗ. ಇವರು ಯಾವುದೇ ಮುಂದಾಲೋಚನೆ ಮಾಡದೇ, ಇತರಡೆ ದರವನ್ನು ಪರಿಶೀಲನೆ ಮಾಡದೆ ಪಿಪಿಇ ಕಿಟ್‌ಗಳನ್ನು ಖರೀದಿ ಮಾಡಲಾಗುತ್ತದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ ಪ್ರಿಯಾಂಕ್ ಖರ್ಗೆ, ಇದರ ಬಗ್ಗೆ ಅಧಿಕಾರಿಗಳು ಮೂರು ರೀತಿಯ ದರಪಟ್ಟಿ ಬಂದಿದ್ದು ಎಂದು ಹೇಳಿದಾಗ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಅಧಿಕಾರಿಗಳಿಗೆ ನೀವು ಕಡತವನ್ನು ತಯಾರು ಮಾಡಿ ಮುಂದಿನದು ನಾವು ನೋಡಿಕೊಳ್ಳುತ್ತೇವೆ ಎಂದು ಸೂಚನೆ ನೀಡುತ್ತಾರೆ ಎಂದರು.

    02.04.2020 ರಲ್ಲಿ ಯಡಿಯೂರಪ್ಪ ಅವರು ಡಿಎಚ್ ಬಿ ಹಾಂಕಾಂಗ್ ಗ್ಲೋಬಲ್ ಕಂಪನಿ ಗೆ ಒಂದು 1 ಲಕ್ಷ ಪಿಪಿಇ ಕಿಟ್ ಸರಬರಾಜು ಮಾಡುವಂತೆ ನೇರ ಆದೇಶ ಕೊಡುತ್ತಾರೆ. ಒಟ್ಟು 21.18 ಕೋಟಿ ರೂಪಾಯಿಯಾಯಿತು. ಜೊತೆಗೆ ಇಷ್ಟು ಪ್ರಮಾಣದ ಪಿಪಿಇ ಕಿಟ್ ಗಳನ್ನು ಏಳು ದಿನದ ಒಳಗಾಗಿ ಸರಬರಾಜು ಮಾಡಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎನ್ನುವ ಷರತ್ತನ್ನು ವಿಧಿಸಲಾಗುತ್ತದೆ. ನಂತರ 10.04.2020 ರಂದು ಯಡಿಯೂರಪ್ಪ ಅವರಿಂದ ಮತ್ತೊಂದು ನೇರ ಆದೇಶ ಇದೇ ಡಿಎಚ್ ಬಿ ಕಂಪನಿಗೆ ಮತ್ತೊಮ್ಮೆ 1 ಲಕ್ಷ ಪಿಪಿಇ ಕಿಟ್ ಗಳನ್ನು ಸರಬರಾಜು ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಈ ಬಾರಿ 2,104.53 ರೂಪಾಯಿಗೆ ನೀಡುವಂತೆ ಹೇಳಲಾಗುತ್ತದೆ. ಇದೇ ದಿನದಂದು ಬಿಗ್ ಫಾರ್ಮಸಿಟಿಕಲ್ ಕಂಪನಿ ಅವರಿಗೂ 1 ಲಕ್ಷ ಕಿಟ್ ಗಳನ್ನು ಸರಬರಾಜು ಮಾಡುವಂತೆ ಸೂಚಿಸಲಾಗುತ್ತದೆ. ಇದನ್ನು ರೂ 2,049.84 ಗಳಿಗೆ ನೀಡುವಂತೆ ಸೂಚನೆ ನೀಡಲಾಗುತ್ತದೇ. ಅಂದರೆ 62.57 ಕೋಟಿ ಹಣದ ವಹಿವಾಟು ನಡೆದಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

    ಕರ್ನಾಟಕದಲ್ಲಿ ಹಾಗೂ ಭಾರತದಲ್ಲಿಯೇ ಸ್ಥಳೀಯವಾಗಿ ಪಿಪಿಇ ಕಿಟ್ ಗಳನ್ನು ತಯಾರು ಮಾಡುತ್ತಿದ್ದರೂ ಸಹ ಯಡಿಯೂರಪ್ಪನವರು ಏಕೆ ಚೀನಾದಿಂದ ತರಿಸಿಕೊಂಡರು ಎಂಬುದಕ್ಕೆ ಉತ್ತರವಿಲ್ಲ. ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈ ಕಾರ್ಪೊರೇಷನ್ ಅವರು ವರದಿ ಪ್ರಕಾರ 14.03.2020 ರಂದು ಸುಮಾರು 1.2 ಲಕ್ಷ ಪಿಪಿಇ ಕಿಟ್ ಗಳನ್ನು ರೂ. 330.40 ಗೆ ಅಂದರೆ ಒಂದು ತಿಂಗಳ ಹಿಂದೆಯೇ ಖರೀದಿ ಮಾಡಿತ್ತು. ನಂತರ ಸುಮಾರು 1,900 ರೂಪಾಯಿ ದರ ವ್ಯತ್ಯಾಸದಲ್ಲಿ ಖರೀದಿ ಮಾಡಲಾಗಿದೆ. ಈ ಹಣ ಯಾರ ಜೇಬಿಗೆ ಹೋಯಿತು ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, 24.03.2020 ರಲ್ಲಿ ನಡೆದ ನಡೆದ ಪ್ರಕ್ಯೂರ್ಮೆಂಟ್ ಅಲ್ಲಿ ಸ್ಥಳೀಯ ಸಂಸ್ಥೆ ಇಂಡಸ್ ಬಯೋ ಸೊಲ್ಯೂಷನ್ ಸಂಸ್ಥೆಗೆ ₹656.25 ದರದಲ್ಲಿ ಒಂದು ಪಿಪಿಇ ಕಿಟ್ ದರ ನಿಗದಿ ಮಾಡಲಾಗಿತ್ತು. ಆದರೆ 23.03.2020 ರಂದು ಅಂದ್ರೆ ಹಿಂದಿನ ದಿನ ಸ್ಥಳೀಯ 8 ತಯಾರಿಕಾ ಸಂಸ್ಥೆಗಳಿಂದ ರೂ 1,444.80 ದರಕ್ಕೆ ಪಿಪಿಇ ಕಿಟ್ ಗಳನ್ನು ಒಂದು ದಿನದ ಅಂತರದಲ್ಲಿ ಹೆಚ್ಚು ಅಂತರಕ್ಕೆ ಖರೀದಿ ಮಾಡುತ್ತಾರೆ. ಸ್ಥಳೀಯವಾಗಿ 18 ಲಕ್ಷ ಪಿಪಿಇ ಕಿಟ್ ಗಳು ಲಭ್ಯವಿದ್ದರೂ ಸಹ ಯಡಿಯೂರಪ್ಪನವರ ಸರ್ಕಾರ ಚೀನಾ ಮೂಲದ ಕಂಪನಿಗಳಿಂದ ಹೆಚ್ಚಿನ ಹಣಕ್ಕೆ ಏಕೆ ಖರೀದಿ ಮಾಡಿತು? ಎಂದೂ ಪ್ರಶ್ನೆ ಮಾಡಿದರು.

    21 ಕೋಟಿಗೆ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಲಾಗಿರುತ್ತದೆ. ಆಗ ಪೂರೈಕೆದಾರ ಕಂಪನಿಗಳು ಹಾಂಕಾಂಗ್ನಲ್ಲಿ ಲಭ್ಯವಿಲ್ಲದ ಕಾರಣ ಶಾಂಗೆನಿಂದ ತರಿಸಿಕೊಳ್ಳುವುದಾಗಿ ಹೇಳುತ್ತವೆ. ಕೇವಲ ಸಾಗಾಣಿಕ ವೆಚ್ಚವಾಗಿ ಸರ್ಕಾರ 12 ಕೋಟಿ ಖರ್ಚು ಮಾಡುತ್ತದೆ. ಇದು ವಿಪರ್ಯಾಸವಲ್ಲವೇ? ಎಂದು ಪ್ರತಿಪಾದಿಸಿದ ಅವರು, ಪೂರೈಕೆ ದಾರ ಕಂಪನಿಗಳು ತಾವು ಒಪ್ಪಿಕೊಂಡಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ ಮೇಲೆ ಸರ್ಕಾರದಿಂದ ಪಾವತಿಯಾಗಬೇಕು. ಆದರೆ ಯಡಿಯೂರಪ್ಪನವರ ಸರ್ಕಾರ ತಲೆಬುಡವಿಲ್ಲದ ಚೀನಾ ಕಂಪನಿಗೆ ಶೇ.ನೂರರಷ್ಟು ಮುಂಗಡ ಹಣ ಪಾವತಿ ಮಾಡಿದೆ ಎಂದು ಆರೋಪಿಸಿದರು.

    2019 ರಲ್ಲಿ ಸ್ಥಾಪನೆಯಾದ ಬಿಗ್ ಹಾಗೂ ಡಿಎಚ್ ಬಿ ಫಾರ್ಮಸಿಟಿಕಲ್ ಕಂಪನಿಗಳಿಗೆ ಕೇವಲ ಒಂದು ವರ್ಷದ ಅಂತರದಲ್ಲಿ ದೊಡ್ಡ ಮೊತ್ತದ ಆದೇಶ ಹೇಗೆ ಸಿಗುತ್ತದೆ. ಪ್ರಸ್ತುತ ನಾನು ಇದರ ಬಗ್ಗೆ ವಿಚಾರಿಸಿದಾಗ, ಪ್ರಸ್ತುತ ಈ ಕಂಪನಿಯ ಅಸ್ತಿತ್ವದಲ್ಲಿ ಇಲ್ಲ. ಕೊರೋನ ಪ್ರಾರಂಭವಾದಾಗ ಈ ಕಂಪನಿಗಳು ಸ್ಥಾಪನೆ ಆಗುತ್ತವೆ ಕರೋನ ಮುಗಿದ ತಕ್ಷಣ ಇವು ಅಸ್ತಿತ್ವ ಕಳೆದುಕೊಳ್ಳುತ್ತವೆ. ಇವು ಯಾರ ಹೆಸರಿನಲ್ಲಿ ನೋಂದಣಿಯಾಗಿವೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು, ಮೇಕಿಂಗ್ ಇಂಡಿಯಾ ಹೆಸರಿನಲ್ಲಿ ಚೀನಾದಿಂದ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳುತ್ತಾರೆ. ಆದರೆ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು, ಅಮಿತ್ ಶಾ ಅವರ ಆದೇಶವನ್ನು ಉಲ್ಲೇಖಿಸಿ ಎಲ್ಲರಿಗೂ ಆದೇಶವನ್ನು ನೀಡಿರುತ್ತಾರೆ. ಆದರೆ ಯಡಿಯೂರಪ್ಪನವರು ಚೀನಾ ಕಂಪನಿಯಿಂದಲೇ ನೇರವಾಗಿ ಖರೀದಿ ಮಾಡಿದ್ದಾರೆ ಎಂದು ಬೊಟ್ಟು ಮಾಡಿದ ಸಚಿವರು, ಪ್ರಧಾನಿ ಅವರ ಆದೇಶವನ್ನು ಉಲ್ಲಂಘಿಸಿ, ಚೀನಾದಿಂದ ಖರೀದಿ ಮಾಡಲಾಗಿದೆ ಎಂದರೆ ಇದು ದೇಶದ್ರೋಹದ ಕೆಲಸವಲ್ಲವೇ? ಇದೇ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದರೆ, ದೇಶದ್ರೋಹಿಗಳು ಎಂದು ಊಳಿಡುತ್ತಿದ್ದರು. ಬಿಜೆಪಿ ಅವರ ನಿರ್ಲಕ್ಷಿತ ಧೋರಣೆಯಿಂದ ಹೆಚ್ಚು ಜನರು ಸತ್ತಿದ್ದಾರೆ ಹೊರತು, ಕೊರೋನ ರೋಗದಿಂದ ಜನ ಸತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

    2020-21 ರ ಸಾವಿನ ವರದಿಗಳನ್ನು ಬಿಜೆಪಿ ಸರ್ಕಾರ ಮುಚ್ಚಿ ಹಾಕಿದೆ. 1.20 ಲಕ್ಷ ಜನರ ತೀರಿ ಹೋಗಿರುವುದನ್ನು ವರದಿ ಸಲ್ಲಿಸಿಲ್ಲ ಎಂದು ಸದನಕ್ಕೆ ತಿಳಿಸಲಾಗಿದೆ ಎಂದು ನೆನಪಿಸಿದ ಪ್ರಿಯಾಂಕ್ ಖರ್ಗೆ, ಡೈರೆಕ್ಟರೇಟ್ ಆಫ್ ಎಕನಾಮಿಕ್ಸ್ ಅಂಡ್ ಸ್ಟಾಟಿಸ್ಟಿಕ್ಸ್, ಭಾರತ ಸರ್ಕಾರ ನೀಡಿರುವ ವರದಿಯಂತೆ 2 ಲಕ್ಷ 29 ಸಾವಿರ ಜನರು2020 ಜನವರಿಯಿಂದ ಜುಲೈ ಅವಧಿಯಲ್ಲಿ ಹಾಗೂ 2021 ರ ಜನವರಿಯಿಂದ ಜುಲೈ ತನಕ 4.26 ಲಕ್ಷ ಜನರು ಸಾವನಪ್ಪಿದ್ದಾರೆ. ಆದರೆ ಬಿಜೆಪಿ ಸರ್ಕಾರ 37,206 ಎಂದು ಸುಳ್ಳು ಹೇಳಿದೆ ಎಂದು ಅಂಕಿ-ಅಂಶ ಒದಗಿಸಿದರು. ಜನರು ಅಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ ಮತ್ತು ದುರಾಸೆಯಿಂದ ಸತ್ತಿದ್ದಾರೆ. ಬಿಜೆಪಿಯವರು ಕೊರೋನ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದ್ದರು. ಇದು ಕೊರೊನಾದಿಂದ ಆಗಿರುವ ಸಾವುಗಳಲ್ಲ ಬಿಜೆಪಿಯ ಹತ್ಯೆ. ಬಿಜೆಪಿಯಿಂದ ಕರ್ನಾಟಕದ ಜನರ ಹತ್ಯಾಕಾಂಡ ನಡೆದಿದೆ. ದುಡ್ಡಿನ ಆಸೆಗೆ ಇದೆಲ್ಲಾ ನಡೆದಿದೆ.

    ಈ ಅಂಕಿ-ಅಂಶಗಳನ್ನು ಕಾಂಗ್ರೆಸ್ ಸರ್ಕಾರ ನೀಡಿರುವುದಲ್ಲ, ಬದಲಾಗಿ ಮೋದಿ ಸರ್ಕಾರವೇ ನೀಡಿರುವುದು. ಕಳಪೆ ಮಾತ್ರೆಗಳು, ಕಳಪೆ ವ್ಯಾಕ್ಸಿನ್, ಪಿಪಿಇ ಕಿಟ್ ಹಾಗೂ ಇತರೆ ವೈದ್ಯಕೀಯ ಸಲಕರಣೆಗಳನ್ನು ತಂದು ಜನರ ಜೀವ ತೆಗೆಯಲಾಗಿದೆ. ಅನೇಕ ಮಕ್ಕಳು ತಂದೆ ತಾಯಿಗಳನ್ನು ಕರೆದುಕೊಂಡಿದ್ದಾರೆ. ಕುಟುಂಬದ ಆಧಾರವೇ ಬಿದ್ದು ಹೋಗಿದೆ. ಮಾಧ್ಯಮ ವರ್ಗವೇ ಸಂಕಷ್ಟದಲ್ಲಿದೆ. ಅನೇಕ ಉದ್ದಿಮೆಗಳು ಬಿದ್ದು ಹೋಗಿದ್ದು, ಜನ ಕೆಲಸವಿಲ್ಲದೆ ಅಲೆಯುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

  • DL, RCಗೂ ಶೀಘ್ರದಲ್ಲೇ ಕ್ಯೂಆರ್ ಕೋಡ್; ಜನವರಿಯಿಂದ ಹೊಸ ಸ್ಮಾರ್ಟ್‌ಕಾರ್ಡ್ ಎಲ್ಲ RTOಗಳಲ್ಲೂ ಇ ಆಡಳಿತಕ್ಕೆ ಕ್ರಮ; ರಾಮಲಿಂಗಾ ರೆಡ್ಡಿ

    ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಯಲ್ಲಿ ಅಮೂಲಾಗ್ರ ಪರಿವರ್ತನೆ ಮಾಡಲಾಗುತ್ತಿದ್ದು, ವ್ಯವಸ್ಥೆ, ಸೌಲಭ್ಯಗಳಲ್ಲೂ ಸುಧಾರಣೆ ತರಲಾಗಿದೆ. ಅದರಂತೆ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಹಾಗೂ ವಾಹನ ನೋಂದಣಿ (ಆರ್‌ಸಿ) ಕಾರ್ಡ್‌ಗಳಿಗೆ ಹೈಟೆಕ್ ಸ್ಪರ್ಶ ಸಿಗಲಿದೆ. ಕ್ಯೂಆರ್ ಕೋಡ್ ಮತ್ತು ಚಿಪ್ ಆಧಾರಿತ DL, RC ಕಾರ್ಡ್‌ಗಳು ವಿತರಣೆಯಾಗಲಿದ್ದು, 2025ರ ಜನವರಿ ಅಥವಾ ಫೆಬ್ರವರಿಯಿಂದ ಹೊಸ ಸ್ಮಾರ್ಟ್ ಕಾರ್ಡ್ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

    ಪ್ರಸ್ತುತ ಕೊಡುತ್ತಿರುವ ಆರ್‌ಸಿ ಹಾಗೂ ಡಿಎಲ್‌ಗಳು ಪಾಲಿ ವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್‌ಗಳಾಗಿವೆ. ಹೊಸ ಯೋಜನೆಯಲ್ಲಿ ಪಾಲಿ ಕಾರ್ಬನೇಟ್ ಕಾರ್ಡ್ (ಪಿಸಿಸಿ)ಗಳನ್ನು ವಿತರಣೆ ಮಾಡಲಾಗುತ್ತದೆ. ಇವು ಬ್ಯಾಂಕ್‌ಗಳು ವಿತರಿಸುವ ಕಾರ್ಡ್‌ಗಳ ಮಾದರಿಯಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಕಾರ್ಡ್‌ಗಳಾಗಿರುತ್ತವೆ ಎಂದವರು ಮಾಹಿತಿ ಒದಗಿಸಿದ್ದಾರೆ.

    ಈವರೆಗಿನ ಕಾರ್ಡ್‌ಗಳಲ್ಲಿ ಹಳೆಯದಾಗುತ್ತಿದ್ದಂತೆ ಕಾರ್ಡ್ ಮೇಲಿರುವ ಅಕ್ಷರಗಳು ಅಳಿಸಿ ಹೋಗುತ್ತಿತ್ತು. ಆದರೆ, ಪಿಸಿಸಿ ಕಾರ್ಡ್‌ಗಳಲ್ಲಿ ಲೇಸರ್ ಇನ್‌ಗ್ರೀಡಿಂಗ್ ಇರುವುದರಿಂದ ಅಕ್ಷರಗಳು ಅಳಿಸಿ ಹೋಗುವುದಿಲ್ಲ. ಕಾರ್ಡ್‌ಗಳು ಸಹ ಮುರಿಯುವ ಸಾಧ್ಯತೆ ಕಡಿಮೆ. ಹೊಸ ಸ್ಮಾರ್ಟ್ ಕಾರ್ಡ್ ಯೋಜನೆಗೆ ಈಗಾಗಲೇ ಟೆಂಡ‌ರ್ ಆಹ್ವಾನಿಸಿದ್ದು, ಅದರಂತೆ ಟೆಂಡರ್ ಪ್ರಕ್ರಿಯೆಗಳು ಮುಂದುವರಿದಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

    ಇದನ್ನೂ ಓದಿ.. BIG BOSS ಸ್ಪರ್ಧಿ ಧರ್ಮ, ಮಂಜ ಅಭಿನಯದ ‘ಟೆನೆಂಟ್’ ಬಿಡುಗಡೆಗೆ ಸಜ್ಜು..

    ಈವರೆಗೆ ಸ್ಮಾರ್ಟ್‌ ಕಾರ್ಡ್‌ಗಳಲ್ಲಿ ಬರೀ ಚಿಪ್ ವ್ಯವಸ್ಥೆ ಇತ್ತು. ಹೊಸ ಕಾರ್ಡ್‌ಗಳಲ್ಲಿ ಚಿಪ್ ಜತೆಗೆ ಕ್ಯೂಆರ್ ಕೋಡ್ ಸಹ ಇರಲಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ನಲ್ಲಿರುವ ಪ್ರಾಥಮಿಕ ಮಾಹಿತಿ ತಕ್ಷಣವೇ ಸಿಗಲಿದೆ. ಸಂಪೂರ್ಣ ಮಾಹಿತಿ ಬೇಕಾದರೆ ಚಿಪ್‌ ಕಾರ್ಡ್ ರೀಡರ್ ಬಳಸಿ ನೋಡಬಹುದಾಗಿದೆ.

    ಅತ್ಯಾಧುನಿಕ DL, RC ಕಾರ್ಡ್ ವೈಶಿಷ್ಟ್ಯಗಳು:

    • ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ವಾಹನ, ಮಾಲೀಕರ ವಿವರ ಲಭ್ಯವಾಗುತ್ತದೆ‌.

    • ಅಪಘಾತ, ಕಳ್ಳತನ, ಸಂಚಾರ ನಿಯಮ ಉಲ್ಲಂಘನೆ ವೇಳೆ ಪರಿಶೀಲನೆಗೆ ಉಪಯುಕ್ತವಾಗಿದೆ‌

    • ವಾಹನ ಹಾಗೂ ವಾಹನ ಮಾಲೀಕರ ಮಾಹಿತಿ ದೃಢೀಕರಣ ಪೊಲೀಸರಿಗೆ ಸುಲಭ ಕಾರ್ಯ

    • ಕಾರ್ಡ್‌ಗಳಲ್ಲಿರುವ ಅಕ್ಷರ ಅಳಿಸಿ ಹೋಗಲ್ಲ, ಮುರಿದು ಹೋಗುವ ಸಾಧ್ಯತೆಯೂ ಕಡಿಮೆ

    • ಹಳೇ ಕಂಪ್ಯೂಟರ್. ಪ್ರಿಂಟರ್‌ಗಳಿಂದ ತುಂಬಿರುವ ಕಚೇರಿಗಳಿಗೆ ಹೈಟೆಕ್ ಸೌಲಭ್ಯ ಇದರಿಂದ‌ ಇ ಆಡಳಿತ ಸೇವೆಗೆ‌ ಬಲ

    • ಕೇಂದ್ರೀಕೃತ ವ್ಯವಸ್ಥೆ ಜಾರಿಯಿಂದ ಸ್ಮಾರ್ಟ್ ಕಾರ್ಡ್ ಪೂರೈಕೆಯಲ್ಲಿ ವ್ಯತ್ಯಾಸ ಆಗುವುದಿಲ್ಲ.

    ಸ್ಮಾರ್ಟ್‌ ಕಾರ್ಡ್ ಪ್ರಿಂಟಿಂಗ್ ವ್ಯವಸ್ಥೆಯನ್ನು ಆಯಾ ಆರ್‌ಟಿಒ ಕಚೇರಿಯಲ್ಲೇ ಮಾಡಲಾಗಿತ್ತು. ಆದರೆ, ಹೊಸ ಯೋಜನೆಯಲ್ಲಿ ಶಾಂತಿನಗರದಲ್ಲಿರುವ ಸಾರಿಗೆ ಆಯುಕ್ತರ ಕೇಂದ್ರ ಕಚೇರಿಯಲ್ಲೇ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗುವುದು. ಒಂದೇ ಕಡೆ ಮುದ್ರಿಸಿ ಎಲ್ಲ ಆರ್‌ಟಿಒ ಕಚೇರಿಗಳಿಗೆ ಪೂರೈಕೆ ಮಾಡಲಾಗುತ್ತದೆ. ವಾಹನ ಮಾಲೀಕನ ಹೆಸರು, ವಿಳಾಸ, ಫೋಟೋ, ಜನ್ಮ ದಿನಾಂಕ, ಸಿಂಧುತ್ವ ಅವಧಿ, ಮೊಬೈಲ್ ಸಂಖ್ಯೆ ಸೇರಿ 25ಕ್ಕೂ ಹೆಚ್ಚು ವಿವರ ಡಿಎಲ್‌ನಲ್ಲಿ ಇರಲಿದೆ. ಆರ್‌ಸಿ ಕಾರ್ಡ್‌ನಲ್ಲಿ ವಾಹನ ಮಾದರಿ, ನೋಂದಣಿ ದಿನಾಂಕ, ತಯಾರಿಕಾ ದಿನ, ಮಾಲೀಕರ ವಿವರ, ತಯಾರಿಕಾ ವಿವರ, ಇಂಜಿನ್ ನಂಬರ್, ಚಾಸ್ಸಿ ನಂಬರ್, ನೋಂದಣಿ ಸಂಖ್ಯೆ ಇನ್ನಿತರ ಮಾಹಿತಿ ಇರಲಿದೆ

  • ವಕ್ಫ್​ ಆಸ್ತಿ ವಿವಾದ; ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌

    ವಕ್ಫ್​ ಆಸ್ತಿ ವಿವಾದ; ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌

    ಬೆಂಗಳೂರು: ವಕ್ಫ್​ ಆಸ್ತಿ ವಿವಾದ ಹಿನ್ನೆಲೆಯಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಾ ಆದೇಶಿಸಿದೆ.

    ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟಿಸ್‌ಗಳನ್ನು ತಕ್ಷಣ ವಾಪಸ್‌ ಪಡೆಯಬೇಕು, ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಸಿಎಂ ಸೂಚಿಸಿದ್ದರು. ಕಾನೂನು ಬಾಹಿರವಾಗಿ ಹಾಗೂ ನೋಟಿಸ್‌ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು ಎಂದು ಸಿಎಂ ಸೂಚಿಸಿದ್ದಾರೆ. ಇದೀಗ ಈ ಸಂಬಂಧ ಅಧಿಕೃವಾಗಿ ಆದೇಶ ಹೊರಬಿದ್ದಿರುವುದರಿಂದ ನಾವು ನಿರಾಳರಾಗಿದ್ದೇವೆ ಎಂದು ರೈತರು ಹೇಳಿದ್ದಾರೆ.

  • ‘ಕಾಲೇಜ್ ಫೆಸ್ಟ್’ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ನಟ ವಿಜಯ್ ದೇವರಕೊಂಡ

    ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ ಅವರು ತಮ್ಮ ಸಂಗೀತ ವೀಡಿಯೊ ಸಾಹಿಬಾ ಪ್ರಚಾರ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ಘಟನೆ ಮುಂಬೈನಲ್ಲಿ ನಡೆದಿದೆ.

    ಶುಕ್ರವಾರ ಅವರು ಮುಂಬೈನ ಕಾಲೇಜ್ ಫೆಸ್ಟ್’ನಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಮೆಟ್ಟಿಲುಗಳಿಂದ ಜಾರಿಬಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

    ಮುಂಬೈನ ಮಿಥಿಬಾಯಿ ಕಾಲೇಜ್’ನಲ್ಲಿ ನಟ ವಿಜಯ್ ದೇವರಕೊಂಡ ಅವರು ಬಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

  • ಕೋವಿಡ್ ಹಗರಣ ಆರೋಪ; ಆಯೋಗದ ವರದಿಯಿಂದ ಏನೂ ಆಗಲ್ಲ ಎಂದ ಮಾಜಿ ಸಿಎಂ

    ಕೋವಿಡ್ ಹಗರಣ ಆರೋಪ; ಆಯೋಗದ ವರದಿಯಿಂದ ಏನೂ ಆಗಲ್ಲ ಎಂದ ಮಾಜಿ ಸಿಎಂ

    ಬಳ್ಳಾರಿ: ಕಾನೂನು ಚೌಕಟ್ಟಿನಲ್ಲೇ ಕೋವಿಡ್ ಸೋಂಕು ನಿರ್ವಹಣಾ ಕೆಲಸ ನಡೆದಿದ್ದು, ಯಾವುದೇ ಹಗರಣ ನಡೆದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಕೋವಿಡ್‌ ಅಕ್ರಮ ಕುರಿತ ಆಯೋಗದ ವರದಿ ಬಗ್ಗೆ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ವರದಿಯಿಂದ ಏನೂ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಉಪಚುನಾವಣೆ ಹಿನ್ನೆಲೆಯಲ್ಲಿ ಕೋವಿಡ್‌ ಅಕ್ರಮ ಕುರಿತು ಕಾಂಗ್ರೆಸ್ ನಾಯಕರು ಆರೋಪ ಮೈನಾಡುತ್ತಿದ್ದಾರೆ. ದುರುದ್ದೇಶದಿಂದ ನನ್ನ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿದ್ದಾರೆ ಎಂದ ಬಿ.ಎಸ್.ವೈ, ಇದರಿಂದ ಯಾವುದೇ ಪ್ರಯೋಜನವಾಗದು ಎಂದರು.

  • ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಉಪ ಚುನಾವಣೆ ಬಹಿರಂಗ ಪ್ರಚಾರ ಸೋಮವಾರ ಅಂತ್ಯ

    ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಉಪ ಚುನಾವಣೆ ಬಹಿರಂಗ ಪ್ರಚಾರ ಸೋಮವಾರ ಅಂತ್ಯ

    ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆಬೀಳಲಿದೆ.
    ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಉಪ ಚುನಾವಣೆ ಬಹಿರಂಗ ಪ್ರಚಾರ ಸೋಮವಾರ ಅಂತ್ಯವಾಗಲಿದೆ.

    ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣಾ ಏರ್ಪಟ್ಟಿದೆ. ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನಂತರ ಇದೀಗ ಉಪಚುನಾವಣೆ ಘೋಷಣೆಯಾಗಿದೆ. ಸಂಡೂರಿನಲ್ಲಿ ತುಕಾರಾಮ್ ಸಂಸದರಾಗಿ ಆಯ್ಕೆಯಾದ ಹಿನ್ನೆಲೆ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ.

    ಈ ಮೂರೂ ಕ್ಷೇತ್ರಗಳ ಚುನಾವಣಾ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಅಖಾಡವಾಗಿದ್ದು, ನಾಯಕರು ಅಂತಿಮ ಕ್ಷಣದ ಪ್ರಚಾರದಲ್ಲಿ ತೊಡಗಿದ್ದಾರೆ.

  • ಕಣಿವೆ ರಾಜ್ಯದಲ್ಲಿ ಉಗ್ರರ ಕಿತಾಪತಿ; ಸೇನೆಯ ಗುಂಡಿಗೆ ಶಂಕಿತ ಬಳಿ

    ಕಣಿವೆ ರಾಜ್ಯದಲ್ಲಿ ಉಗ್ರರ ಕಿತಾಪತಿ; ಸೇನೆಯ ಗುಂಡಿಗೆ ಶಂಕಿತ ಬಳಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರಿದಿದೆ. ಸೇನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರ ಸಾವನ್ನಪ್ಪಿದ್ದಾನೆ.

    ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನಲ್ಲಿ ಗುರುವಾರ ಗುಂಡಿನ ಚಕಮಕಿ ನಡೆದಿದೆ. ಸೋಪೋರ್‌ನ ರಾಮ್‌ಪೋರಾ ಪ್ರದೇಶದಲ್ಲಿ ಉಗ್ರರ ಅಡಗುತಾಣವನ್ನು ಪತ್ತೆ ಮಾಡಿದ ಪೊಲೀಸರು ಮತ್ತು ಭದ್ರತಾ ಪಡೆ ಯೋಧರು ಜಂಟಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದ ಯೋಧರು, ಓರ್ವ ಉಗ್ರನನ್ನು ಹತ್ಯೆ ಮಾಡಿದ್ದಾರೆ.
    ಹತ್ಯೆಯಾದ ಉಗ್ರನ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ‘ಪ್ರಿಯಾಂಕಾ ಗಾಂಧಿಯವರ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ; ವಯನಾಡಿನಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಭಂಡಾರಿ ವಿಶ್ವಾಸ

    ‘ಪ್ರಿಯಾಂಕಾ ಗಾಂಧಿಯವರ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ, ಸಂಸತ್ತಿನಲ್ಲಿ ಶೋಷಿತರ ಧ್ವನಿಯಾಗಲಿದ್ದಾರೆ’; ವಯನಾಡಿನಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಶಾಸಕ ಮಂಜುನಾಥ್ ಭಂಡಾರಿ ವಿಶ್ವಾಸ..

    ವಯನಾಡ್: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಕೇರಳದ ವಯನಾಡ್ ಲೋಕಸಭಾ ಉಪಚುನಾವಣೆ ಇಡೀ ದೇಶದ ಗಮನಸೆಳೆದಿದೆ. ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದು ಅವರನ್ನು ಗೆಲ್ಲಿಸಲು ಪಕ್ಷದ ನಾಯಕರು ಅವಿರತ ಶ್ರಮ ವಹಿಸಿದ್ದಾರೆ.

    ಪ್ರಿಯಾಂಕಾ ಗಾಂಧಿ ಗೆಲ್ಲಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ನಾಯಕರೂ ಶ್ರಮವಹಿಸುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಕರಾವಳಿಯ ಶಾಸಕ ಮಂಜುನಾಥ್ ಭಂಡಾರಿ ತಮ್ಮ ಕಾರ್ಯಕರ್ತ ಸೈನ್ಯದೊಂದಿಗೆ ವಯನಾಡಿನ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿ ರಾಹುಲ್ ಸಹೋದರಿಯನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಕರ್ನಾಟಕ ಕರಾವಳಿ ಜಿಲ್ಲೆಗಳ ಬಹಳಷ್ಟು ಮಂದಿ ವಯನಾಡಿನಲ್ಲಿದ್ದು ಅವರ ಮತಗಳನ್ನು ಪೇರಿಸಲು ಮಂಜುನಾಥ್ ಭಂಡಾರಿ ಪ್ರಯತ್ನ ನಡೆಸಿದ್ದಾರೆ.

    ವಯನಾಡ್ ಲೋಕಸಭಾ ಉಪಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ ಅವರು ಕೋಟತ್ತಾರ ಗ್ರಾಮ ಪಂಚಾಯತ್’ನಲ್ಲಿ ಪ್ರಿಯಾಂಕಾ ಗಾಂಧಿ ಪರ ನಡೆಸಿದ ಪ್ರಚಾರ ಕಾರ್ಯಕ್ರಮದಲ್ಲಿ ಅಮೇಥಿ ಸಂಸದ ಕೆ.ಎಲ್ ಶರ್ಮಾ ಭಾಗವಹಿಸಿ ಗಮನಸೆಳೆದರು..

    ಈ ನಡುವೆ, ವಯನಾಡ್ ಅಖಾಡದ ಫಲಿತಾಂಶ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಮಂಜುನಾಥ್ ಭಂಡಾರಿ, ಇಲ್ಲಿಂದಲೇ ಪ್ರಿಯಾಂಕಾ ಗಾಂಧಿಯವರ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ ಎಂದು ಆಶಿಸಿದರು. ಪ್ರಿಯಾಂಕಾ ಗಾಂಧಿಯವರು ದೇಶದ ಭವಿಷ್ಯದ ನಾಯಕಿಯಾಗಲಿದ್ದಾರೆ. ಅವರ ಆಯ್ಕೆಯ ಮೂಲಕ, ಶೋಷಿತರ ಬಡವರ ತಳವರ್ಗದ ಜನರ ಪರವಾದ ಪ್ರಬಲವಾದ ಮತ್ತೊಂದು ದನಿ ಸಂಸತ್ತಿನಲ್ಲಿ ಮೊಳಗಲಿದೆ. ಅಂತಹಾ ಅವಕಾಶವನ್ನು ದಕ್ಷಿಣ ಭಾರತದ ಜನತೆ ನೀಡುತ್ತಿದ್ದಾರೆ ಎಂಬುದು ನಮಗೆ ಹೆಮ್ಮೆ ಅನ್ನಿಸುತ್ತಿದೆ ಎಂದು ಮಂಜುನಾಥ್ ಭಂಡಾರಿ ಹೇಳಿದ್ದಾರೆ.

    ಕಳೆದ ಹಲವಾರು ವರ್ಷಗಳಲ್ಲಿ ಕರ್ನಾಟಕವಷ್ಟೇ ಅಲ್ಲ, ಜಮ್ಮು ಕಾಶ್ಮೀರ ಸಹಿತ ಹಲವು ರಾಜ್ಯಗಳ ಚುನಾವಣೆಗಳಲ್ಲೂ ಉಸ್ತುವಾರಿ ವಹಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿರುವ ಮಂಜುನಾಥ್ ಭಂಡಾರಿ ಅವರು ವಯನಾಡಿನಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ವಯನಾಡ್ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರು ತಿಳಿಸಿದ್ದಾರೆ.

  • ಮಹಾರಾಷ್ಟ್ರ ರಣಾಂಗಣದಲ್ಲಿ ‘ಮಹಾಯುತಿ’ ಪ್ರಚಾರದಬ್ಬರ; ಯುವಸೈನ್ಯಕ್ಕೆ ‘ರವಿ ಮೋಡಿ’ಯೇ ಅಸ್ತ್ರ

    ಮುಂಬೈ: ಇಡೀ ದೇಶದ ಗಮನಸೆಳೆದಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ-ಶಿವಸೇನೆ ಮಿತ್ರಪಕ್ಷಗಳು ಶತಪ್ರಯತ್ನದಲ್ಲಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್-ಶಿವಸೇನೆ ಸಹಿತ ಅಘಾಡಿ ಮೈತ್ರಿ ಸೈನ್ಯ ಹರಸಾಹಸದಲ್ಲಿ ನಿರತವಾಗಿದೆ.

    ಬಿಜೆಪಿ ಹಾಗೂ ಮಿತ್ರಪಕ್ಷಗಳ (ಮಹಾಯುತಿ) ಅಭ್ಯರ್ಥಿಗಳ ಪರವಾಗಿ ಮಹಾರಾಷ್ಟ್ರ ಪ್ರದೇಶ ಬಿಜೆಪಿ ಮಾಜಿ ಉಸ್ತುವಾರಿ ನಾಯಕ ಕರ್ನಾಟಕಡಾ ಶಾಸಕ ಸಿ.ಟಿ.ರವಿ ಭಾರೀ ಪ್ರಚಾರ ಕೈಗೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಚುನಾವಣಾ ಅಖಾಡದಲ್ಲಿ ಮೊಕ್ಕಂ ಹೂಡಿರುವ ಸಿ.ಟಿ.ರವಿ ಹಲವು ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮತಬೇಟೆ ಕೈಗೊಂಡಿದ್ದಾರೆ.

    ಪಶ್ಚಿಮ ಮಹಾರಾಷ್ಟ್ರದ ಚುನಾವಣಾ ಉಸ್ತುವಾರಿಯಾಗಿರುವ ಸಿ.ಟಿ.ರವಿಯಿಂದ ಮಹಾಯುತಿ ಅಭ್ಯರ್ಥಿಗಳ ಗೆಲುವಿಗಾಗಿ ತಮ್ಮದೇ ಶೈಲಿಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ವರ್ಷದ ಹಿಂದೆ ಪ್ರದೇಶ ಬಿಜೆಪಿ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ಸಂಘಟನಾ ಚತುರನಾಗಿ ಕಾರ್ಯನಿರ್ವಹಿಸಿದ್ದ ಸಿ.ಟಿ.ರವಿ ಅವರಿಗೆ ಮಹಾರಾಷ್ಟ್ರ ರಾಜಕಾರಣದ ವಾಸ್ತವ ಚಿತ್ರಣ ತಿಳಿದಿರುವುದರಿಂದಾಗಿ ಯುವಜನರನ್ನು ಸಂಘಟಿಸುವಲ್ಲೂ ಯಶಸ್ವಿಯಾಗಿದ್ದಾರೆ.

    ಈ ನಡುವೆ, ಶನಿವಾರ ಮಹಾರಾಷ್ಟ್ರದ ಪಿಂಪ್ರಿ – ಚಿಂಚ್ವಾಡದಲ್ಲಿ ‘ಹಿಂದೂ ವೀರಶೈವ ಲಿಂಗಾಯತ್ ಮಂಚ್’ ಹಾಗೂ ‘ಜಂಗಮ ಸಮಾಜ’ ಆಯೋಜಿಸಿದ ‘ಸ್ನೇಹ ಮೇಳಾವ್’ ಕಾರ್ಯಕ್ರಮದಲ್ಲಿ ಸಿ.ಟಿ.ರವಿ ಭಾಷಣ ಗಮನಸೆಳೆಯಿತು. ಯಥಾ ಪ್ರಕಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಹಾರಾಷ್ಟ್ರದಲ್ಲಿ ಕೈ ನಾಯಕರ ಸುಳ್ಳುಗಳ ಭರವಸೆ ಫಲ ನೀಡಲ್ಲ ಎಂದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಪಕ್ಷಗಳ ಬಗ್ಗೆ ಜನರಿಗೆ ನಂಬಿಕೆ ಬಲವಾಗಿದ್ದು, ಮರಳಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿ ಅವರು, ನಾವು ಅಂಗಾಂಗ ಭಾವದಿಂದ ಸಮಾಜದಲ್ಲಿ ಜೊತೆಯಾಗಿ ಸಮಾಜ ಕಟ್ಟೋಣ, ರಾಷ್ಟ್ರ ಭಾವವನ್ನು ಮರೆಯದೆ, ರಾಷ್ಟ್ರಹಿತಕ್ಕೆ ಮತದಾನ ಮಾಡಿ ಎಂದು ಮನವಿ ಮಾಡಿದರು.

    ಕರ್ನಾಟಕ ಸರ್ಕಾರದ ಮಾಜಿ ದೆಹಲಿ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ , ಸಮುದಾಯದ ಮುಖಂಡರಾದ ನಾರಾಯಣ ಭೈರವಾಡೆ, ಡಾ ರಾಜೇಂದ್ರ ಹಿರೇಮಠ್, ಎಸ್.ಬಿ.ಪಾಟೀಲ್, ಗುರುರಾಜ್ ಚರಂತಿಮಠ ಸೇರಿದಂತೆ ಹಿಂದೂ ಲಿಂಗಾಯತ ವೀರಶೈವ ಸಮಾಜ ಭಾಂದವರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.