ಬ್ಯಾಂಕುಗಳ ವಿಲೀನ ಬಗ್ಗೆ ಯಾವುದೇ ಚಿಂತನೆ ಇಲ್ಲ: ಸರ್ಕಾರದ ಸ್ಪಷ್ಟನೆ
ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ವಿಲೀನ ಅಥವಾ ಹೂಡಿಕೆ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಪ್ರಸ್ತಾವನೆಯನ್ನು ಪರಿಗಣಿಸುತ್ತಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.
2026ರೊಳಗೆ ನಾಲ್ಕು ಪಿಎಸ್‌ಬಿಗಳನ್ನು ಹೂಡಿಕೆ ಹಿಂತೆಗೆತ ಅಥವಾ ದೊಡ್ಡ ಬ್ಯಾಂಕುಗಳೊಂದಿಗಿನ ವಿಲೀನಕ್ಕೆ ಸರ್ಕಾರ ಯೋಜನೆ ಹಾಕಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಸ್ತುತ ಪಿಎಸ್‌ಬಿಗಳ ವಿಲೀನ ಅಥವಾ ಹೂಡಿಕೆ ಹಿಂತೆಗೆತಕ್ಕೆ ಯಾವುದೇ ಪ್ರಸ್ತಾವನೆಯೂ ಸರ್ಕಾರದ ಮುಂದೆ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಸರ್ಕಾರ ಪಿಎಸ್‌ಬಿ ಏಕೀಕರಣದ ಹೊಸ ನೀಲನಕ್ಷೆ ಸಿದ್ಧಪಡಿಸುತ್ತಿದೆ, ಸಾಲದಾತರ ಸಂಖ್ಯೆಯನ್ನು 12ರಿಂದ ನಾಲ್ಕಕ್ಕೆ ಇಳಿಸಲು ಯೋಚಿಸಿದೆ ಎಂಬ ವರದಿಗಳು ಹೊರಬಿದ್ದಿದ್ದವು. ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‌ಗಳನ್ನು ಬಲಪಡಿಸಲು, ಕಾರ್ಯಾಚರಣಾ ದಕ್ಷತೆಯನ್ನು ಹೆಚ್ಚಿಸಲು ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಬ್ಯಾಂಕಿಂಗ್ ಸಂಸ್ಥೆಗಳನ್ನು ರೂಪಿಸಲು ಈ ಯೋಚನೆಯನ್ನು ಕೈಗೆತ್ತಿಕೊಳ್ಳಲಾಗಿ...








