Category: ವೈವಿಧ್ಯ

  • DL, RCಗೂ ಶೀಘ್ರದಲ್ಲೇ ಕ್ಯೂಆರ್ ಕೋಡ್; ಜನವರಿಯಿಂದ ಹೊಸ ಸ್ಮಾರ್ಟ್‌ಕಾರ್ಡ್ ಎಲ್ಲ RTOಗಳಲ್ಲೂ ಇ ಆಡಳಿತಕ್ಕೆ ಕ್ರಮ; ರಾಮಲಿಂಗಾ ರೆಡ್ಡಿ

    ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಯಲ್ಲಿ ಅಮೂಲಾಗ್ರ ಪರಿವರ್ತನೆ ಮಾಡಲಾಗುತ್ತಿದ್ದು, ವ್ಯವಸ್ಥೆ, ಸೌಲಭ್ಯಗಳಲ್ಲೂ ಸುಧಾರಣೆ ತರಲಾಗಿದೆ. ಅದರಂತೆ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಹಾಗೂ ವಾಹನ ನೋಂದಣಿ (ಆರ್‌ಸಿ) ಕಾರ್ಡ್‌ಗಳಿಗೆ ಹೈಟೆಕ್ ಸ್ಪರ್ಶ ಸಿಗಲಿದೆ. ಕ್ಯೂಆರ್ ಕೋಡ್ ಮತ್ತು ಚಿಪ್ ಆಧಾರಿತ DL, RC ಕಾರ್ಡ್‌ಗಳು ವಿತರಣೆಯಾಗಲಿದ್ದು, 2025ರ ಜನವರಿ ಅಥವಾ ಫೆಬ್ರವರಿಯಿಂದ ಹೊಸ ಸ್ಮಾರ್ಟ್ ಕಾರ್ಡ್ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.

    ಪ್ರಸ್ತುತ ಕೊಡುತ್ತಿರುವ ಆರ್‌ಸಿ ಹಾಗೂ ಡಿಎಲ್‌ಗಳು ಪಾಲಿ ವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್‌ಗಳಾಗಿವೆ. ಹೊಸ ಯೋಜನೆಯಲ್ಲಿ ಪಾಲಿ ಕಾರ್ಬನೇಟ್ ಕಾರ್ಡ್ (ಪಿಸಿಸಿ)ಗಳನ್ನು ವಿತರಣೆ ಮಾಡಲಾಗುತ್ತದೆ. ಇವು ಬ್ಯಾಂಕ್‌ಗಳು ವಿತರಿಸುವ ಕಾರ್ಡ್‌ಗಳ ಮಾದರಿಯಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಕಾರ್ಡ್‌ಗಳಾಗಿರುತ್ತವೆ ಎಂದವರು ಮಾಹಿತಿ ಒದಗಿಸಿದ್ದಾರೆ.

    ಈವರೆಗಿನ ಕಾರ್ಡ್‌ಗಳಲ್ಲಿ ಹಳೆಯದಾಗುತ್ತಿದ್ದಂತೆ ಕಾರ್ಡ್ ಮೇಲಿರುವ ಅಕ್ಷರಗಳು ಅಳಿಸಿ ಹೋಗುತ್ತಿತ್ತು. ಆದರೆ, ಪಿಸಿಸಿ ಕಾರ್ಡ್‌ಗಳಲ್ಲಿ ಲೇಸರ್ ಇನ್‌ಗ್ರೀಡಿಂಗ್ ಇರುವುದರಿಂದ ಅಕ್ಷರಗಳು ಅಳಿಸಿ ಹೋಗುವುದಿಲ್ಲ. ಕಾರ್ಡ್‌ಗಳು ಸಹ ಮುರಿಯುವ ಸಾಧ್ಯತೆ ಕಡಿಮೆ. ಹೊಸ ಸ್ಮಾರ್ಟ್ ಕಾರ್ಡ್ ಯೋಜನೆಗೆ ಈಗಾಗಲೇ ಟೆಂಡ‌ರ್ ಆಹ್ವಾನಿಸಿದ್ದು, ಅದರಂತೆ ಟೆಂಡರ್ ಪ್ರಕ್ರಿಯೆಗಳು ಮುಂದುವರಿದಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

    ಇದನ್ನೂ ಓದಿ.. BIG BOSS ಸ್ಪರ್ಧಿ ಧರ್ಮ, ಮಂಜ ಅಭಿನಯದ ‘ಟೆನೆಂಟ್’ ಬಿಡುಗಡೆಗೆ ಸಜ್ಜು..

    ಈವರೆಗೆ ಸ್ಮಾರ್ಟ್‌ ಕಾರ್ಡ್‌ಗಳಲ್ಲಿ ಬರೀ ಚಿಪ್ ವ್ಯವಸ್ಥೆ ಇತ್ತು. ಹೊಸ ಕಾರ್ಡ್‌ಗಳಲ್ಲಿ ಚಿಪ್ ಜತೆಗೆ ಕ್ಯೂಆರ್ ಕೋಡ್ ಸಹ ಇರಲಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ನಲ್ಲಿರುವ ಪ್ರಾಥಮಿಕ ಮಾಹಿತಿ ತಕ್ಷಣವೇ ಸಿಗಲಿದೆ. ಸಂಪೂರ್ಣ ಮಾಹಿತಿ ಬೇಕಾದರೆ ಚಿಪ್‌ ಕಾರ್ಡ್ ರೀಡರ್ ಬಳಸಿ ನೋಡಬಹುದಾಗಿದೆ.

    ಅತ್ಯಾಧುನಿಕ DL, RC ಕಾರ್ಡ್ ವೈಶಿಷ್ಟ್ಯಗಳು:

    • ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ವಾಹನ, ಮಾಲೀಕರ ವಿವರ ಲಭ್ಯವಾಗುತ್ತದೆ‌.

    • ಅಪಘಾತ, ಕಳ್ಳತನ, ಸಂಚಾರ ನಿಯಮ ಉಲ್ಲಂಘನೆ ವೇಳೆ ಪರಿಶೀಲನೆಗೆ ಉಪಯುಕ್ತವಾಗಿದೆ‌

    • ವಾಹನ ಹಾಗೂ ವಾಹನ ಮಾಲೀಕರ ಮಾಹಿತಿ ದೃಢೀಕರಣ ಪೊಲೀಸರಿಗೆ ಸುಲಭ ಕಾರ್ಯ

    • ಕಾರ್ಡ್‌ಗಳಲ್ಲಿರುವ ಅಕ್ಷರ ಅಳಿಸಿ ಹೋಗಲ್ಲ, ಮುರಿದು ಹೋಗುವ ಸಾಧ್ಯತೆಯೂ ಕಡಿಮೆ

    • ಹಳೇ ಕಂಪ್ಯೂಟರ್. ಪ್ರಿಂಟರ್‌ಗಳಿಂದ ತುಂಬಿರುವ ಕಚೇರಿಗಳಿಗೆ ಹೈಟೆಕ್ ಸೌಲಭ್ಯ ಇದರಿಂದ‌ ಇ ಆಡಳಿತ ಸೇವೆಗೆ‌ ಬಲ

    • ಕೇಂದ್ರೀಕೃತ ವ್ಯವಸ್ಥೆ ಜಾರಿಯಿಂದ ಸ್ಮಾರ್ಟ್ ಕಾರ್ಡ್ ಪೂರೈಕೆಯಲ್ಲಿ ವ್ಯತ್ಯಾಸ ಆಗುವುದಿಲ್ಲ.

    ಸ್ಮಾರ್ಟ್‌ ಕಾರ್ಡ್ ಪ್ರಿಂಟಿಂಗ್ ವ್ಯವಸ್ಥೆಯನ್ನು ಆಯಾ ಆರ್‌ಟಿಒ ಕಚೇರಿಯಲ್ಲೇ ಮಾಡಲಾಗಿತ್ತು. ಆದರೆ, ಹೊಸ ಯೋಜನೆಯಲ್ಲಿ ಶಾಂತಿನಗರದಲ್ಲಿರುವ ಸಾರಿಗೆ ಆಯುಕ್ತರ ಕೇಂದ್ರ ಕಚೇರಿಯಲ್ಲೇ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗುವುದು. ಒಂದೇ ಕಡೆ ಮುದ್ರಿಸಿ ಎಲ್ಲ ಆರ್‌ಟಿಒ ಕಚೇರಿಗಳಿಗೆ ಪೂರೈಕೆ ಮಾಡಲಾಗುತ್ತದೆ. ವಾಹನ ಮಾಲೀಕನ ಹೆಸರು, ವಿಳಾಸ, ಫೋಟೋ, ಜನ್ಮ ದಿನಾಂಕ, ಸಿಂಧುತ್ವ ಅವಧಿ, ಮೊಬೈಲ್ ಸಂಖ್ಯೆ ಸೇರಿ 25ಕ್ಕೂ ಹೆಚ್ಚು ವಿವರ ಡಿಎಲ್‌ನಲ್ಲಿ ಇರಲಿದೆ. ಆರ್‌ಸಿ ಕಾರ್ಡ್‌ನಲ್ಲಿ ವಾಹನ ಮಾದರಿ, ನೋಂದಣಿ ದಿನಾಂಕ, ತಯಾರಿಕಾ ದಿನ, ಮಾಲೀಕರ ವಿವರ, ತಯಾರಿಕಾ ವಿವರ, ಇಂಜಿನ್ ನಂಬರ್, ಚಾಸ್ಸಿ ನಂಬರ್, ನೋಂದಣಿ ಸಂಖ್ಯೆ ಇನ್ನಿತರ ಮಾಹಿತಿ ಇರಲಿದೆ

  • ಅಕ್ಟೋಬರ್​ 3 ರಂದು ಮೈಸೂರು ದಸರಾ ಉದ್ಘಾಟನೆ; ಈಬಾರಿಯೂ ಅಂಬಾರಿ ಹೊರಲಿರುವ ಅಭಿಮನ್ಯು

    ಅಕ್ಟೋಬರ್​ 3 ರಂದು ಮೈಸೂರು ದಸರಾ ಉದ್ಘಾಟನೆ; ಈಬಾರಿಯೂ ಅಂಬಾರಿ ಹೊರಲಿರುವ ಅಭಿಮನ್ಯು

    ಮೈಸೂರು: ಮೈಸೂರು ದಸರಾ ಮಹೋತ್ಸವ-2024 ಅಕ್ಟೋಬರ್​ 3 ರಂದು ಉದ್ಘಾಟನೆಯಾಗಲಿದೆ. ಅಕ್ಟೋಬರ್ 12 ರಂದು ಜಂಬೂಸವಾರಿ ನಡೆಯಲಿದ್ದು ನಾಡಹಬ್ಬದ ತಯಾರಿಗೆ ಮುನ್ನುಡಿ ಬರೆಯಲಾಗಿದೆ.

    ದಸರಾ ಜಂಬೂಸವಾರಿಯಲ್ಲಿ 13 ಗಂಡು ಮತ್ತು 05 ಹೆಣ್ಣು ಆನೆಗಳು ಭಾಗಿಯಾಗಲಿದ್ದು, ಗಜಪಡೆಯ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿಯೂ ಅಭಿಮನ್ಯುವೇ ಅಂಬಾರಿ ಹೊರಲಿದ್ದು, ಸೇರಿ 14 ಆನೆಗಳು ಭಾಗಿಯಾಗಲಿವೆ. ಈ ಗಜಪಡೆಗಳು ಎರಡು ಹಂತಗಳಲ್ಲಿ ಸಾಂಸ್ಕೃತಿಕ ನಾಗರಿಗೆ ಆಗಮಿಸಲಿದ್ದು, ಮೊದಲನೇ ತಂಡದಲ್ಲಿ ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಗೋಪಿ, ಭೀಮ, ಲಕ್ಷ್ಮೀ, ಕಂಜನ್, ರೋಹಿತ್, ಏಕಲವ್ಯ ಬರಲಿವೆ. ಎರಡನೇಯ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮೀ, ಹಿರಣ್ಯ, ಮೀಸಲು, ಹರ್ಷ, ಅಯ್ಯಪ್ಪ, ಪಾರ್ಥಸಾರಥಿ, ಮಾಲದೇವಿ ಆನೆಗಳ ಆಗಮನವಾಗಲಿದೆ. ಆಗಸ್ಟ್ 21ಕ್ಕೆ ಗಜಪಯಣ ನಿಗದಿ ಆಗಿದ್ದು, ದಸರಾ ಮಹೋತ್ಸವದ ಸುಮಾರು 2 ತಿಂಗಳ ಮುಂಚಿತವಾಗಿ ಮೈಸೂರಿಗೆ ಗಜಪಡೆ ಆಗಮಿಸಲಿವೆ.

  • ‘ಯಕ್ಷಗಾನ ಉತ್ಸವ-2024’: ತಾಳಮದ್ದಳೆಯಲ್ಲಿ ಆಂಜನೇಯ ಪಾತ್ರಧಾರಿಯಾಗಿ ಗಮನಸೆಳೆದ IPS ಅಧಿಕಾರಿ ಧರಣೀದೇವಿ

    ಬೆಂಗಳೂರು: ಯಕ್ಷಗಾನ ಕೇವಲ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಈ ರಂಗದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಮಹಿಳೆಯರೂ ಹಂತಹಂತವಾಗಿ ಪಾಲ್ಗೊಂಡು ಪುರುಷರಂತೆಯೇ ಸಾಧನೆ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಡಾ. ಧರಣೀದೇವಿ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.

    ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆ ಶನಿವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಯಕ್ಷಗಾನ ಉತ್ಸವ-2024 ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಯಕ್ಷಗಾನದಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಪ್ರೋತ್ಸಾಹಿಸಬೇಕಿದೆ ಎಂದು ಪ್ರತಿಪಾದಿಸಿದರು.

    ಸ್ವತಃ “ಶರಸೇತು ಬಂಧ” ಎಂಬ ಮಹಿಳಾ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಆಂಜನೇಯನ ಪಾತ್ರವಹಿಸಿ ಅರ್ಥಗಾರಿಕೆ ಮಾಡಿದ ಧರಣೀದೇವಿ ಅವರು, ಭಾಗವತಿಕೆಯಲ್ಲಿ, ಚೆಂಡೆ ವಾದನದಲ್ಲಿ, ಮುಮ್ಮೇಳ ಕಲಾವಿದರಾಗಿ ಬಹಳ ಹಿಂದಿನಿಂದಲೂ ಮಹಿಳೆಯರು ಅವರದೇ ಛಾಪು ಮೂಡಿಸಿದ್ದಾರೆ. ಬಣ್ಣದ ವೇಷದಲ್ಲೂ ತೊಡಗಿಸಿಕೊಂಡು, ಆಯಾ ಪಾತ್ರಕ್ಕೆ ಅನುಗುಣವಾದ ಧ್ವನಿಯನ್ನೂ ನೀಡಿ ಪಾತ್ರಕ್ಕೆ ನ್ಯಾಯ ಒದಗಿಸಿದ ನಿದರ್ಶನಗಳು ಇವೆ ಎಂದು ಹೇಳಿದರು.

    ಯಕ್ಷಗಾನದ ಬೇರು ಆಳವಾಗಿದೆ ಹಾಗೂ ಎಂದಿಗೂ ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ. ಹಾಗಾಗಿ ಯಕ್ಷಗಾನವನ್ನು ಉಳಿಸಿಕೊಳ್ಳಬೇಕು, ಯಕ್ಷಗಾನ ಅವನತಿಯತ್ತ ಸಾಗುತ್ತಿದೆ ಎಂಬಂತಹ ಮಾತುಗಳಿಗೆ ಆಸ್ಪದವಿಲ್ಲ. ಯಕ್ಷಗಾನ ವಿಶ್ವದೆಲ್ಲೆಡೆ ಪಸರಿಸಿದ್ದು, ಈ ಕಲೆ ಯಾವ ಕಾಲಕ್ಕೂ ಪ್ರಸ್ತುತ ಎಂದು ಧರಣೀದೇವಿ ವಿಶ್ಲೇಷಿಸಿದರು.

    ಶರಸೇತು ಬಂಧ ತಾಳಮದ್ದಲೆಯಲ್ಲಿ ಭಾಗವಹಿಸಿದ ಅವರು, ಹನುಮಂತನ ತನ್ನ ಪಾತ್ರ ಪರಿಚಯ ಮಾಡುತ್ತಾ, ವಾಯುಪುತ್ರ, ರಾಮಭಕ್ತ ಎಂಬ ಹೆಸರುಗಳಿವೆ. ಆದರೆ ತಾನು ತನ್ನ ತಾಯಿಯ ಹೆಸರಿನಿಂದಲೂ ಗುರುತಿಸಿಕೊಂಡು ಅಂಜನಾ ಸುತ ಅಥವಾ ಆಂಜನೇಯ ಎಂದೂ ಹೆಸರಿದೆ ಎಂದು ಹೇಳುವ ಮೂಲಕ ತನ್ನ ಕರಾವಳಿಯ ತಾಯಿಯ ಕುಟುಂಬದ ಆಧಾರಿತ ಅಳಿಯಕಟ್ಟು ಸಂಪ್ರದಾಯವನ್ನು ಪರೋಕ್ಷವಾಗಿ ನೆನಪಿಸಿದರು.

    ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ ನಿರ್ದೇಶಕಿ ಕೆ. ಗೌರಿ ಮಾತನಾಡಿ, ಸಂಸ್ಥೆ 25 ವರ್ಷಗಳಿಂದ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ತರಬೇತಿ ನೀಡುತ್ತಾ ಬೆಳೆಯುತ್ತಿದೆ. ಈಗ ವಿದ್ಯಾರ್ಥಿವೇತನ ಮೂಲಕ 12 ಮಹಿಳೆಯರಿಗೆ ಯಕ್ಷಗಾನ ತರಬೇತಿ ನೀಡುವ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.

    ಯಕ್ಷಗಾನ ಉತ್ಸವ 2024

    ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಸಂಸ್ಥೆಯ ವತಿಯಿಂದ ‘ಯಕ್ಷಗಾನ ಉತ್ಸವ-2024’ ಗುರುಗಳಾದ ಶ್ರೀನಿವಾಸ ಸಾಸ್ತಾನ ಮತ್ತು ಕೆ. ಗೌರಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಯಕ್ಷಗಾನ ವೇಷಭೂಷಣ ಹಾಗೂ ಮುಖವರ್ಣಿಕೆ ಕಮ್ಮಟ ಕಾರ್ಯಕ್ರಮವನ್ನು ‘ತುಳುವರೆಂಕುಲು’ ಕಾರ್ಯದರ್ಶಿ, ಮಟ್ಟಿ ರಾಮಚಂದ್ರ ರಾವ್ ಉದ್ಘಾಟಿಸಿದರು. ಅತಿಥಿಗಳಾಗಿ ಖ್ಯಾತ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಸಂಪನ್ಮೂಲ ವ್ಯಕ್ತಿಗಳಾಗಿ ರಾಜೇಶ್ ಆಚಾರ್, ಶಂಕರ್ ಹೊಸೂರು, ಉಮೇಶ್ ರಾಜ್, ಸಂಸ್ಥೆಯ ಯಕ್ಷಗಾನ ಗುರು ಮತ್ತು ನಿರ್ದೇಶಕರು ಕೆ. ಗೌರಿ ಉಪಸ್ಥಿತರಿದ್ದರು.

    ಇದೇ ವೇಳೆ, ಸಂಸ್ಥೆಯ ಕಲಾವಿದೆಯರಿಂದ ಯಕ್ಷಗಾನದ ಕಥಾಭಾಗದ ಮೊದಲು ನಡೆಯುವ ರಂಗಕ್ರಿಯೆಯಾದ ಯಕ್ಷಗಾನ ಪೂರ್ವರಂಗ ಪ್ರದರ್ಶನ, ಕುಶಲವ ಕಾಳಗ, ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರಸಂಗ ಕಾರ್ಯಕ್ರಮ ಗಮನಸೆಳೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ನಾವುಡ, ವಿಶ್ವನಾಥ ಶೆಟ್ಟಿ, ವಿನಯ್ ರಾಜೀವ್ ಶೆಟ್ಟಿ, ನರಸಿಂಹ ಆಚಾರ್, ಸಂಪತ್ ಆಚಾರ್ಯ, ಸುಬ್ರಹ್ಮಣ್ಯ ಗಾಣಿಗ ಐರೋಡಿ, ಕಾರ್ತಿಕ್ ಧಾರೇಶ್ವರ್. ಮುಮ್ಮೇಳದಲ್ಲಿ ಕಲಾವಿದೆಯರಾಗಿ ಕೆ ಗೌರಿ, ಆಶಾ ರಾಘವೇಂದ್ರ, ಅನ್ನಪೂರ್ಣೇಶ್ವರಿ ಕಟೀಲು, ಶ್ವೇತಾ ನವೀನ್, ಲಕ್ಷ್ಮೀ ರಾವ್, ಶಶಿಕಲಾ, ಸುಮಾ ಅನಿಲ್ ಕುಮಾರ್, ಮನಸ್ವಿ, ಚೈತ್ರ ಕೋಟ, ಚೈತ್ರ ಭಟ್, ದೀಕ್ಷಾ ಭಟ್, ಸೌಜನ್ಯ ನಾವುಡ, ರಕ್ಷಾ ಅನಂತ್, ಸಹನಾ ಅನಿಲ್ ಕುಮಾರ್, ಧೃತಿ ಅಮ್ಮೆಂಬಳ, ಸಹನ್ಯ ಚಿನ್ಮಯಿ, ಕೃತಿ ಅಮ್ಮೆಂಬಳ, ಗಗನ ಅನಿಲ್ ಕುಮಾರ್, ಯಾದ್ವಿಯುತಿ, ಸಾನ್ವಿ, ಸಹನಾ, ಶ್ರೀನಿಧಿ, ಮಹಾಲಕ್ಷ್ಮಿ ವಿವಿಧ ಪಾತ್ರಗಳಲ್ಲಿ ಮಿಂಚಿದರು.

    ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ || ಧರಣೀ ದೇವಿ ಮಾಲಗಿತ್ತಿ, ಅಶ್ವಿನಿ ಆಚಾರ್, ಸಾವಿತ್ರಿ ಶಾಸ್ತ್ರಿ ಇವರ ಅರ್ಥಗಾರಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ- ಶರಸೇತು ಬಂಧ ನಡೆಯಿತು. ತಾಳಮದ್ದಳೆಯಲ್ಲಿ ಹಿಮ್ಮೇಳ ಕಲಾವಿದರಾಗಿ ಕುಮಾರಿ ಅನರ್ಘ್ಯ ಟಿ.ಪಿ, ಪೃಥ್ವಿ ಬಡೆಕ್ಕಿಲ, ಶಿಖಿನ್ ಶರ್ಮ ಭಾಗವಹಿಸಿದರು.