Category: ದೇಶ-ವಿದೇಶ

  • ‘ಕಾಲೇಜ್ ಫೆಸ್ಟ್’ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ನಟ ವಿಜಯ್ ದೇವರಕೊಂಡ

    ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ ಅವರು ತಮ್ಮ ಸಂಗೀತ ವೀಡಿಯೊ ಸಾಹಿಬಾ ಪ್ರಚಾರ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ಘಟನೆ ಮುಂಬೈನಲ್ಲಿ ನಡೆದಿದೆ.

    ಶುಕ್ರವಾರ ಅವರು ಮುಂಬೈನ ಕಾಲೇಜ್ ಫೆಸ್ಟ್’ನಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಮೆಟ್ಟಿಲುಗಳಿಂದ ಜಾರಿಬಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

    ಮುಂಬೈನ ಮಿಥಿಬಾಯಿ ಕಾಲೇಜ್’ನಲ್ಲಿ ನಟ ವಿಜಯ್ ದೇವರಕೊಂಡ ಅವರು ಬಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

  • ಕಣಿವೆ ರಾಜ್ಯದಲ್ಲಿ ಉಗ್ರರ ಕಿತಾಪತಿ; ಸೇನೆಯ ಗುಂಡಿಗೆ ಶಂಕಿತ ಬಳಿ

    ಕಣಿವೆ ರಾಜ್ಯದಲ್ಲಿ ಉಗ್ರರ ಕಿತಾಪತಿ; ಸೇನೆಯ ಗುಂಡಿಗೆ ಶಂಕಿತ ಬಳಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರಿದಿದೆ. ಸೇನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರ ಸಾವನ್ನಪ್ಪಿದ್ದಾನೆ.

    ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನಲ್ಲಿ ಗುರುವಾರ ಗುಂಡಿನ ಚಕಮಕಿ ನಡೆದಿದೆ. ಸೋಪೋರ್‌ನ ರಾಮ್‌ಪೋರಾ ಪ್ರದೇಶದಲ್ಲಿ ಉಗ್ರರ ಅಡಗುತಾಣವನ್ನು ಪತ್ತೆ ಮಾಡಿದ ಪೊಲೀಸರು ಮತ್ತು ಭದ್ರತಾ ಪಡೆ ಯೋಧರು ಜಂಟಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದ ಯೋಧರು, ಓರ್ವ ಉಗ್ರನನ್ನು ಹತ್ಯೆ ಮಾಡಿದ್ದಾರೆ.
    ಹತ್ಯೆಯಾದ ಉಗ್ರನ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ‘ಪ್ರಿಯಾಂಕಾ ಗಾಂಧಿಯವರ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ; ವಯನಾಡಿನಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಭಂಡಾರಿ ವಿಶ್ವಾಸ

    ‘ಪ್ರಿಯಾಂಕಾ ಗಾಂಧಿಯವರ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ, ಸಂಸತ್ತಿನಲ್ಲಿ ಶೋಷಿತರ ಧ್ವನಿಯಾಗಲಿದ್ದಾರೆ’; ವಯನಾಡಿನಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಶಾಸಕ ಮಂಜುನಾಥ್ ಭಂಡಾರಿ ವಿಶ್ವಾಸ..

    ವಯನಾಡ್: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಕೇರಳದ ವಯನಾಡ್ ಲೋಕಸಭಾ ಉಪಚುನಾವಣೆ ಇಡೀ ದೇಶದ ಗಮನಸೆಳೆದಿದೆ. ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದು ಅವರನ್ನು ಗೆಲ್ಲಿಸಲು ಪಕ್ಷದ ನಾಯಕರು ಅವಿರತ ಶ್ರಮ ವಹಿಸಿದ್ದಾರೆ.

    ಪ್ರಿಯಾಂಕಾ ಗಾಂಧಿ ಗೆಲ್ಲಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ನಾಯಕರೂ ಶ್ರಮವಹಿಸುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಕರಾವಳಿಯ ಶಾಸಕ ಮಂಜುನಾಥ್ ಭಂಡಾರಿ ತಮ್ಮ ಕಾರ್ಯಕರ್ತ ಸೈನ್ಯದೊಂದಿಗೆ ವಯನಾಡಿನ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿ ರಾಹುಲ್ ಸಹೋದರಿಯನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಕರ್ನಾಟಕ ಕರಾವಳಿ ಜಿಲ್ಲೆಗಳ ಬಹಳಷ್ಟು ಮಂದಿ ವಯನಾಡಿನಲ್ಲಿದ್ದು ಅವರ ಮತಗಳನ್ನು ಪೇರಿಸಲು ಮಂಜುನಾಥ್ ಭಂಡಾರಿ ಪ್ರಯತ್ನ ನಡೆಸಿದ್ದಾರೆ.

    ವಯನಾಡ್ ಲೋಕಸಭಾ ಉಪಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ ಅವರು ಕೋಟತ್ತಾರ ಗ್ರಾಮ ಪಂಚಾಯತ್’ನಲ್ಲಿ ಪ್ರಿಯಾಂಕಾ ಗಾಂಧಿ ಪರ ನಡೆಸಿದ ಪ್ರಚಾರ ಕಾರ್ಯಕ್ರಮದಲ್ಲಿ ಅಮೇಥಿ ಸಂಸದ ಕೆ.ಎಲ್ ಶರ್ಮಾ ಭಾಗವಹಿಸಿ ಗಮನಸೆಳೆದರು..

    ಈ ನಡುವೆ, ವಯನಾಡ್ ಅಖಾಡದ ಫಲಿತಾಂಶ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಮಂಜುನಾಥ್ ಭಂಡಾರಿ, ಇಲ್ಲಿಂದಲೇ ಪ್ರಿಯಾಂಕಾ ಗಾಂಧಿಯವರ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ ಎಂದು ಆಶಿಸಿದರು. ಪ್ರಿಯಾಂಕಾ ಗಾಂಧಿಯವರು ದೇಶದ ಭವಿಷ್ಯದ ನಾಯಕಿಯಾಗಲಿದ್ದಾರೆ. ಅವರ ಆಯ್ಕೆಯ ಮೂಲಕ, ಶೋಷಿತರ ಬಡವರ ತಳವರ್ಗದ ಜನರ ಪರವಾದ ಪ್ರಬಲವಾದ ಮತ್ತೊಂದು ದನಿ ಸಂಸತ್ತಿನಲ್ಲಿ ಮೊಳಗಲಿದೆ. ಅಂತಹಾ ಅವಕಾಶವನ್ನು ದಕ್ಷಿಣ ಭಾರತದ ಜನತೆ ನೀಡುತ್ತಿದ್ದಾರೆ ಎಂಬುದು ನಮಗೆ ಹೆಮ್ಮೆ ಅನ್ನಿಸುತ್ತಿದೆ ಎಂದು ಮಂಜುನಾಥ್ ಭಂಡಾರಿ ಹೇಳಿದ್ದಾರೆ.

    ಕಳೆದ ಹಲವಾರು ವರ್ಷಗಳಲ್ಲಿ ಕರ್ನಾಟಕವಷ್ಟೇ ಅಲ್ಲ, ಜಮ್ಮು ಕಾಶ್ಮೀರ ಸಹಿತ ಹಲವು ರಾಜ್ಯಗಳ ಚುನಾವಣೆಗಳಲ್ಲೂ ಉಸ್ತುವಾರಿ ವಹಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿರುವ ಮಂಜುನಾಥ್ ಭಂಡಾರಿ ಅವರು ವಯನಾಡಿನಲ್ಲೂ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ವಯನಾಡ್ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರು ತಿಳಿಸಿದ್ದಾರೆ.

  • ಮಹಾರಾಷ್ಟ್ರ ರಣಾಂಗಣದಲ್ಲಿ ‘ಮಹಾಯುತಿ’ ಪ್ರಚಾರದಬ್ಬರ; ಯುವಸೈನ್ಯಕ್ಕೆ ‘ರವಿ ಮೋಡಿ’ಯೇ ಅಸ್ತ್ರ

    ಮುಂಬೈ: ಇಡೀ ದೇಶದ ಗಮನಸೆಳೆದಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ-ಶಿವಸೇನೆ ಮಿತ್ರಪಕ್ಷಗಳು ಶತಪ್ರಯತ್ನದಲ್ಲಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್-ಶಿವಸೇನೆ ಸಹಿತ ಅಘಾಡಿ ಮೈತ್ರಿ ಸೈನ್ಯ ಹರಸಾಹಸದಲ್ಲಿ ನಿರತವಾಗಿದೆ.

    ಬಿಜೆಪಿ ಹಾಗೂ ಮಿತ್ರಪಕ್ಷಗಳ (ಮಹಾಯುತಿ) ಅಭ್ಯರ್ಥಿಗಳ ಪರವಾಗಿ ಮಹಾರಾಷ್ಟ್ರ ಪ್ರದೇಶ ಬಿಜೆಪಿ ಮಾಜಿ ಉಸ್ತುವಾರಿ ನಾಯಕ ಕರ್ನಾಟಕಡಾ ಶಾಸಕ ಸಿ.ಟಿ.ರವಿ ಭಾರೀ ಪ್ರಚಾರ ಕೈಗೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಚುನಾವಣಾ ಅಖಾಡದಲ್ಲಿ ಮೊಕ್ಕಂ ಹೂಡಿರುವ ಸಿ.ಟಿ.ರವಿ ಹಲವು ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮತಬೇಟೆ ಕೈಗೊಂಡಿದ್ದಾರೆ.

    ಪಶ್ಚಿಮ ಮಹಾರಾಷ್ಟ್ರದ ಚುನಾವಣಾ ಉಸ್ತುವಾರಿಯಾಗಿರುವ ಸಿ.ಟಿ.ರವಿಯಿಂದ ಮಹಾಯುತಿ ಅಭ್ಯರ್ಥಿಗಳ ಗೆಲುವಿಗಾಗಿ ತಮ್ಮದೇ ಶೈಲಿಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ವರ್ಷದ ಹಿಂದೆ ಪ್ರದೇಶ ಬಿಜೆಪಿ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ಸಂಘಟನಾ ಚತುರನಾಗಿ ಕಾರ್ಯನಿರ್ವಹಿಸಿದ್ದ ಸಿ.ಟಿ.ರವಿ ಅವರಿಗೆ ಮಹಾರಾಷ್ಟ್ರ ರಾಜಕಾರಣದ ವಾಸ್ತವ ಚಿತ್ರಣ ತಿಳಿದಿರುವುದರಿಂದಾಗಿ ಯುವಜನರನ್ನು ಸಂಘಟಿಸುವಲ್ಲೂ ಯಶಸ್ವಿಯಾಗಿದ್ದಾರೆ.

    ಈ ನಡುವೆ, ಶನಿವಾರ ಮಹಾರಾಷ್ಟ್ರದ ಪಿಂಪ್ರಿ – ಚಿಂಚ್ವಾಡದಲ್ಲಿ ‘ಹಿಂದೂ ವೀರಶೈವ ಲಿಂಗಾಯತ್ ಮಂಚ್’ ಹಾಗೂ ‘ಜಂಗಮ ಸಮಾಜ’ ಆಯೋಜಿಸಿದ ‘ಸ್ನೇಹ ಮೇಳಾವ್’ ಕಾರ್ಯಕ್ರಮದಲ್ಲಿ ಸಿ.ಟಿ.ರವಿ ಭಾಷಣ ಗಮನಸೆಳೆಯಿತು. ಯಥಾ ಪ್ರಕಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಹಾರಾಷ್ಟ್ರದಲ್ಲಿ ಕೈ ನಾಯಕರ ಸುಳ್ಳುಗಳ ಭರವಸೆ ಫಲ ನೀಡಲ್ಲ ಎಂದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಪಕ್ಷಗಳ ಬಗ್ಗೆ ಜನರಿಗೆ ನಂಬಿಕೆ ಬಲವಾಗಿದ್ದು, ಮರಳಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿ ಅವರು, ನಾವು ಅಂಗಾಂಗ ಭಾವದಿಂದ ಸಮಾಜದಲ್ಲಿ ಜೊತೆಯಾಗಿ ಸಮಾಜ ಕಟ್ಟೋಣ, ರಾಷ್ಟ್ರ ಭಾವವನ್ನು ಮರೆಯದೆ, ರಾಷ್ಟ್ರಹಿತಕ್ಕೆ ಮತದಾನ ಮಾಡಿ ಎಂದು ಮನವಿ ಮಾಡಿದರು.

    ಕರ್ನಾಟಕ ಸರ್ಕಾರದ ಮಾಜಿ ದೆಹಲಿ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ , ಸಮುದಾಯದ ಮುಖಂಡರಾದ ನಾರಾಯಣ ಭೈರವಾಡೆ, ಡಾ ರಾಜೇಂದ್ರ ಹಿರೇಮಠ್, ಎಸ್.ಬಿ.ಪಾಟೀಲ್, ಗುರುರಾಜ್ ಚರಂತಿಮಠ ಸೇರಿದಂತೆ ಹಿಂದೂ ಲಿಂಗಾಯತ ವೀರಶೈವ ಸಮಾಜ ಭಾಂದವರು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

  • ಕೃಷಿ ಸಾಲ ಸಿಬಿಲ್ ಸ್ಕೋರ್ ಮಾನದಂಡ ನೀತಿ ರದ್ದು ಮಾಡಲು ಚಿಂತನೆ; ಕೇಂದ್ರ ಹಣಕಾಸು ಸಚಿವೆ ಭರವಸೆ

    ಕೃಷಿ ಉತ್ಪನ್ನಗಳ ಮೇಲಿನ ಜಿಎಸ್​ಟಿ ತೆರಿಗೆ ರದ್ದು ಮಾಡಿ. ರೈತ ಉತ್ಪಾದಕ ಸಂಸ್ಥೆಗಳ ವರಮಾನ ತೆರಿಗೆ ಹಾಗೂ ಎಂಐಟಿ ತೆರಿಗೆ ಕಾನೂನು ರದ್ದು ಮಾಡಿ ಎಂದು ರೈತ ಸಂಘಟನೆಗಳು ಮಾಡಿರುವ ಮನವಿಗೆ ಸ್ಪಂಧಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

    ರೈತರು ಖರೀದಿಸುವ ಕೃಷಿ ಬಳಕೆಗೆ ಹನಿ ನೀರಾವರಿ ಕೊಳವೆಗಳು. ಕೀಟನಾಶಕಗಳು. ರಸಗೊಬ್ಬರಗಳ ಮೇಲೆ ಜಿಎಸ್​ಟಿ ವಿಧಿಸಿರುವುರಿಂದ ರೈತರು ಖರೀದಿಸುವ ಬೆಲೆ ಹೆಚ್ಚಾಗುತ್ತಿದೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ ಇದನ್ನು ರದ್ದು ಮಾಡಬೇಕೆಂದು ಹಲವಾರು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದ್ದೇವೆ ತಾವು ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೃಷಿ ಉಪಕರಣಗಳ ಖರೀದಿಯ ಮೇಲೆ ಜಿಎಸ್‌ಟಿಯನ್ನು ರದ್ದು ಮಾಡಬೇಕು ಎಂದು ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.

    ಕೃಷಿ ಸಾಲಕ್ಕೆ ರೈತರ ಸಿಬಿಲ್ ಸ್ಕೋರ್ ಪರಿಗಣಿಸುವ ನಿಯಮ ರದ್ದು ಮಾಡಿ. ಹಾಗೂ ಕೃಷಿ ಸಾಲ ವಸೂಲಿಗೆ ಬ್ಯಾಂಕುಗಳು ರೈತರ ಜಮೀನು ಮುಟ್ಟುಗೂಲು ಹಾಕಿ ಹರಾಜು ಮಾಡುವ ಸರ್ಫೈಸಿ ಕಾಯ್ದೆ ರದ್ದು ಮಾಡಿ. ಮಹಿಳಾ ಸ್ವಸಹಾಯ ಸಂಘಗಳಿಗೆ ಖಾಸಗಿ ಫೈನಾನ್ಸ್ ಗಳು ವಸುಲಾತಿ ಕಿರುಕುಳ ನೀಡುತ್ತಿರುವುದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ತನ್ನಿ ಎಂದೂ ಒತ್ತಾಯಿಸಲಾಗಿತ್ತು. ಈ ಬಗ್ಗೆ ಸೂಕ್ತ ಕ್ರಮವಹಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸಲು ಪ್ರೋತ್ಸಾಹ ಧನ ನೀಡಿದೆ. ಆದರೆ ಈ ಉತ್ಪಾದಕ ಸಂಸ್ಥೆಗಳಿಗೆ ವರಮಾನ ತೆರಿಗೆ ವಿಧಿಸಲಾಗುತ್ತಿದೆ ಹಾಗೂ ಎಂಎಟಿ ತೆರಿಗೆ ಪಾವತಿಸಬೇಕೆಂದು ಈಗಾಗಲೇ ನೂರಾರು ರೈತ ಉತ್ಪಾದಕ ಸಂಸ್ಥೆಗಳಿಗೆ ವಸುಲಾತಿ ನೋಟಿಸ್ ವರಮಾನ ತೆರಿಗೆ ಇಲಾಖೆಯಿಂದ ನೀಡಲಾಗಿದೆ ಇದರಿಂದ ನಷ್ಟದಲ್ಲಿರುವ ಸಂಕಷ್ಟ ಅನುಭವಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು ಚಿಂತಾ ಕ್ರಾಂತರಾಗಿದ್ದಾರೆ. ಇದೆ ಕೇಂದ್ರ ಸರ್ಕಾರ ರೈತರಿಂದಲೇ ರೈತರಿಗಾಗಿ ಆರಂಬವಾಗಿರುವ ಸಹಕಾರ ಸಂಘಗಳಿಗೆ ತೆರಿಗೆ ವಿನಾಯಿತಿ ನೀಡಿದೆ. ಆದರೆ ರೈತರಿಂದಲೇ ರೈತರಿಗಾಗಿ ಕಂಪನಿ ಕಾಯ್ದೆಯಲ್ಲಿ ಆರಂಭವಾಗಿರುವ ಉತ್ಪಾದಕ ಸಂಸ್ಥೆಗಳಿಗೆ ಎಂಏಟಿ ತೆರಿಗೆ, ವರಮಾನ ತೆರಿಗೆ
    ವಿಧಿಸುವುದು ನ್ಯಾಯವಲ್ಲ. ಕೇಂದ್ರ ಸರ್ಕಾರ ಆದೇಶದಲ್ಲಿ ಸಹಕಾರ ಸಂಘಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ಸಮಾನಾಂತರ ಅವಕಾಶಗಳನ್ನು ಹೊಂದಬಹುದು ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ತಿಳಿಸಿದ್ದಾರೆ ಈ ಎಲ್ಲ ವಿಚಾರಗಳನ್ನ ಗಮನಿಸಿ ಹತ್ತು ವರ್ಷಗಳ ಕಾಲ ತೆರಿಗೆ ವಸುಲಾತಿ ಕಾನೂನು ರದ್ದು ಮಾಡುವ ಆದೇಶ ಹೊರಡಿಸಬೇಕೆಂದು ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದ್ದಾರೆ.

    ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್ ನೇತೃತ್ವದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ನಿಯೋಗದಲ್ಲಿ ರೈತ ಮುಖಂಡರುಗಳಾದ
    ಹತ್ತಳ್ಳಿ ದೇವರಾಜ್ ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ. ಕುರುಬೂರು ಸಿದ್ದೇಶ್, ಲಕ್ಷ್ಮಿಪುರ ವೆಂಕಟೇಶ್, ಅಂಬಳೆ ಮಂಜುನಾಥ್,
    ಕುರುಬೂರು ಪ್ರದೀಪ್, ಕಾಟೂರ್ ನಾಗೇಶ್, ಬನ್ನೂರ್ ಸೂರಿ ಮೊದಲಾದವರು ಇದ್ದರು.

  • ಚಿನ್ನದ ದರ ದಾಖಲೆ ಪ್ರಮಾಣದಲ್ಲಿ ಇಳಿಕೆ

    ಚಿನ್ನದ ದರ ದಾಖಲೆ ಪ್ರಮಾಣದಲ್ಲಿ ಇಳಿಕೆ

    ನವದೆಹಲಿ: ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ದೀಪಾವಳಿ ಹೊತ್ತಲ್ಲಿ ಗಗನಮುಖಿಯಾಗಿದ್ದ ಆಭರಣ ಲೋಹದ ಧಾರಣೆ ಗುರುವಾರ ಚಿನಿವಾರ ಪೇಟೆಯಲ್ಲಿ ಬಹಳಷ್ಟು ಇಳಿಕೆಉಅಗಿತ್ತು.

    ಬೆಂಗಳೂರಿನಲ್ಲಿ ಸುಮಾರು 20 ದಿನಗಳ ಬಳಿಕ 10 ಗ್ರಾಂ ಚಿನ್ನದ ಬೆಲೆ 80 ಸಾವಿರದ ಗಡಿಯಿಂದ ಕೆಳಗಿಳಿದಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1790 ರೂ. ಇಳಿಕೆಯಾಗಿ 78560 ರೂಪಾಯಿ ಗಳಿಗೆ ತಲುಪಿದೆ.

  • ಮಹಾ ಚುನಾವಣಾ ಅಖಾಡದಲ್ಲಿ ಭರವಸೆಗಳ ಹೊಳೆ; ಗ್ಯಾರೆಂಟಿಗಳ ಸುರಿಮಳೆ

    ಮಹಾ ಚುನಾವಣಾ ಅಖಾಡದಲ್ಲಿ ಭರವಸೆಗಳ ಹೊಳೆ; ಗ್ಯಾರೆಂಟಿಗಳ ಸುರಿಮಳೆ

    ಮುಂಬಯಿ: ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಭರವಸೆಗಳ ಮಹಾಪೂರವೇ ಹರಿದಿದೆ.

    ಮಹಿಳೆಯರಿಗೆ ಪ್ರತೀ ತಿಂಗಳು 3,000 ರೂಪಾಯಿ. ಸಹಾಯ ಧನ, ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಗ್ಯಾರೆಂಟಿ ಭರವಸೆಯನ್ನು ಮಹಾ ವಿಕಾಸ ಅಘಾಡಿ (ಎಂವಿಎ) ನೀಡಿದೆ.

    3 ಲಕ್ಷ ರೂಪಾಯಿ ವರೆಗಿನ ರೈತರ ಸಾಲ ಮನ್ನಾ ಮಾಡಲಾಗುತ್ತದೆ ಜೊತೆಗೆ, ನಿರುದ್ಯೋಗಿ ಯುವಜನರಿಗೆ ಪ್ರತೀ ತಿಂಗಳು 4,000 ರೂಪಾಯಿ ನೆರವು ನೀಡಲಾಗುತ್ತದೆ ಎಂದು ಎಂವಿಎ ತನ್ನ ಪ್ರಣಾಳಿಕೆಯಲ್ಲಿ ಆಶ್ವಾಸನೆಗಳ ಪಟ್ಟಿಯನ್ನು ನೀಡಿದೆ.

    ತಮ್ಮ ಒಕ್ಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ‘ಲಡ್ಕಿ ಬಹೀನ್‌’ ಯೋಜನೆಯ ಮೊತ್ತವನ್ನು 2,100 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಎಂವಿಎ ನಾಯಕರು ಘೋಷಿಸಿದ್ದಾರೆ.

  • ನ.8, 9ರಂದು ಮಂಗಳೂರಿನಲ್ಲಿ ಜಾಗತಿಕ ಸಂವಹನ ಸಮಾವೇಶ; ವಿವಿಧ ದೇಶಗಳ ಗಣ್ಯರ ಸಮಾಗಮ

    ನ.8, 9ರಂದು ಮಂಗಳೂರಿನಲ್ಲಿ ಜಾಗತಿಕ ಸಂವಹನ ಸಮಾವೇಶ; ವಿವಿಧ ದೇಶಗಳ ಗಣ್ಯರ ಸಮಾಗಮ

    ಬೆಂಗಳೂರು: ಪ್ರತಿಷ್ಠಿತ ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) 18ನೇ ಜಾಗತಿಕ ಸಂವಹನ ಸಮಾವೇಶ 2024ರ ನವೆಂಬರ್ 8 ಮತ್ತು 9ರಂದು ಮಂಗಳೂರಿನಲ್ಲಿ ನಡೆಯಲಿದೆ. PRCI ಸಂಸ್ಥೆಯು ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ವೃತ್ತಿಪರತೆಯ ಪ್ರಮಾಣಿತ ಮಾನದಂಡಗಳನ್ನು ಉತ್ತೇಜಿಸುವ ಪ್ರಮುಖ ಸಂಸ್ಥೆಯಾಗಿದ್ದು ಈ ಬಾರಿ ಕಡಲತಡಿಯ ನಗರಿಯಲ್ಲಿ ಆಯೋಜಿಸಲಾಗಿದ್ದು ದೇಶ ವಿದೇಶಗಳ ಪ್ರತಿನಿಧಿಗಳ ಸಮಾಗಮಕ್ಕೆ ಈ ಸಮಾವೇಶ ಸಾಕ್ಷಿಯಾಗಲಿದೆ. .

    2004ರ ಮಾರ್ಚ್ 3 ರಂದು PRCIಯು ಸ್ಥಾಪನೆಯಾಗಿದ್ದು, ಅದಕ್ಕೂ ಮೊದಲು 17 ಜಾಗತಿಕ ಸಂವಹನ ಸಮಾವೇಶಗಳನ್ನು ಜಯಪುರ, ಪುಣೆ, ಕೊಲ್ಕತ್ತಾ, ನವದೆಹಲಿ, ಮುಂಬೈ, ಹೈದರಾಬಾದ್, ಚಂಡೀಗಢ್, ಬೆಂಗಳೂರು ಮತ್ತು ಗೋವಾ ನಗರಗಳಲ್ಲಿ ಯಶಸ್ವಿಯಾಗಿ ಆಯೋಜಿಸಿತ್ತು. ದೇಶದಾದ್ಯಂತ ಮತ್ತು ವಿಶ್ವದ ಪ್ರಮುಖ ಉದ್ಯಮಗಳಿಂದ 500ಕ್ಕೂ ಹೆಚ್ಚು ಸಂವಹನ ವೃತ್ತಿಪರರು ಮತ್ತು ನಿರ್ಧಾರಮೇಕರ್‌ಗಳು ಪಬ್ಲಿಕ್ ರಿಲೇಶನ್ಸ್ ಮತ್ತು ಸಂವಹನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು, ಹೊಸ ವಿಚಾರಗಳು, ಮತ್ತು ಉತ್ತಮ ಅಭ್ಯಾಸಗಳ ಬಗ್ಗೆ ಚರ್ಚಿಸಲು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

    ವರ್ಷದ ಸಮಾವೇಶದ ವಿಷಯ ‘ಮರುಸಂಪರ್ಕ,’ ಇಂದಿನ ತೀವ್ರಗತಿಯ ಜೀವನದಲ್ಲಿ ಮತ್ತು ಡಿಜಿಟಲ್ ಮಾಧ್ಯಮದ ಪ್ರಭಾವದಿಂದ ಗಮನಾರ್ಹವಾಗದ ಆದ್ಯತೆಯಾದ ಸುತ್ತಮುತ್ತಲಿನ ಎಲ್ಲರೊಂದಿಗೆ ಮರುಸಂಪರ್ಕದ ಮಹತ್ವವನ್ನು ಬೆಳಕುಹಾಕಲಿದೆ. ಈ ಸಮಾವೇಶದಲ್ಲಿ 11 ಉಲ್ಲೇಖನೀಯ ಪ್ಯಾನೆಲ್ ಚರ್ಚೆಗಳು ನಡೆಯಲಿದ್ದು, ಕೈಗಾರಿಕಾ ತಜ್ಞರು, ಆಲೋಚನಾಪ್ರೇರಕರು, IAS ಅಧಿಕಾರಿಗಳು, ಮತ್ತು ಯುರೋಪ್ ಹಾಗೂ ಗಲ್ಪ್ ದೇಶಗಳಿಂದ ಬಂದ ಸಂವಹನ ವೃತ್ತಿಪರರು ಪಾಲ್ಗೊಳ್ಳಲಿದ್ದಾರೆ. ಚರ್ಚೆಯ ವಿಷಯಗಳು ಸರ್ಕಾರಿ ಪಬ್ಲಿಕ್ ರಿಲೇಶನ್ಸ್ ಮತ್ತು ಸಾರ್ವಜನಿಕತೆಯನ್ನು ಉತ್ತೇಜಿಸುವುದು, ಗಿಗ್ ಆರ್ಥಿಕತೆಯ ಪ್ರಭಾವ, ಜಾಗತಿಕ ಕಥೆಗಳು ಮತ್ತು ಡಿಜಿಟಲ್ ಮಾಧ್ಯಮದ ಬಳಕೆ ಹಾಗೂ ಮಾನವರು ಮತ್ತು ಯಂತ್ರಗಳು ಭವಿಷ್ಯದಲ್ಲಿ ಒಟ್ಟಾಗಿ ಹೇಗೆ ಜೀವಿಸಬಹುದು ಎಂಬ ಬಗ್ಗೆ ಚಿಂತನ ಮಂಥನ ನಡೆಯಲಿದೆ ಎಂದು ಸಂಘಟಕರು ಮಾಹಿತಿ ಒದಗಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ, PRCI 15 ಮಂದಿ ವಿಸಿ ಗಳನ್ನು ಏಕಕಾಲದಲ್ಲಿ ಸೇರಿಸುವ ‘ವೈಸ್ ಚಾನ್ಸಲರ್‌ಗಳ ವಿಶೇಷ ಮೃತ್ತಸಂವಾದ’ ಅನ್ನು ಆಯೋಜಿಸುತ್ತಿದೆ, ಇದು ಉನ್ನತ ಶಿಕ್ಷಣದ ಭವಿಷ್ಯ ಮತ್ತು ಹೊಸ ಆವಿಷ್ಕಾರಗಳೊಂದಿಗೆ ಮರುಸಂಪರ್ಕದ ಬಗ್ಗೆ ಚರ್ಚೆ ನಡೆಲಿದೆ.

    ಈ ಸಮಾರಂಭವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಮಂಗಳೂರು ಮೇಯರ್ ಮನುಜ್ ಕುಮಾರ್ ಕೊಡಿಕಲ್ ಅವರು ಉದ್ಘಾಟಿಸಲಿದ್ದು, PRCIಯ ವಿಶೇಷ ನಿಯತಕಾಲಿಕೆಗಳಾದ ಚಾಣಕ್ಯ, ಆಧ್ವಿಕಾ, ಮತ್ತು ಕೌಟಿಲ್ಯ ಬಿಡುಗಡೆ ಮಾಡಲಾಗುತ್ತದೆ. ಇದೇ ವೇಳೆ, ಸಂವಹನ, ಪಬ್ಲಿಕ್ ರಿಲೇಶನ್ಸ್, ಮತ್ತು ಅಕಾಡೆಮಿಯಾ ಕ್ಷೇತ್ರದಲ್ಲಿ ಯಶಸ್ವಿ ಸಾಧನೆ ಮಾಡಿದ ವೃತ್ತಿಪರರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ, ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್, ಹೊಸ ಮತ್ತು ನವೀನೀಕೃತ ವಿದ್ಯುತ್ ಸಚಿವರು, ಶ್ರೀ ಪಿ. ಕೃಷ್ಣ ಭಟ್, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು, ಶ್ರೀ ರವಿ ಕಿರಣ್, ಕನ್ನಡ ಚಲನಚಿತ್ರ ನಟ ಮತ್ತು ನಿರ್ದೇಶಕ, ಮತ್ತು ಹಲವಾರು ಗಣ್ಯ ವ್ಯಕ್ತಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

    ಮಂಗಳೂರಿನಲ್ಲಿ ಈ 18ನೇ ಜಾಗತಿಕ ಸಮಾವೇಶವನ್ನು ಆಯೋಜಿಸುತ್ತಿರುವಾಗ, ‘ಮರುಸಂಪರ್ಕ’ ಎಂಬ ವಿಷಯವನ್ನು ಅಳವಡಿಸಿಕೊಳ್ಳೋಣ. ನಾವು ನಮ್ಮ ಬದುಕಿನ ಮುಖ್ಯ ಮೂಲ್ಯಗಳಾದ ಪಾರದರ್ಶಕತೆ ಮತ್ತು ನಂಬಿಕೆಗಳಿಗೆ ಮರುಸಂಪರ್ಕ ಮಾಡೋಣ, ಎಂದು PRCI ಸ್ಥಾಪಕ ಅಧ್ಯಕ್ಷ ಶ್ರೀ ಎಂ ಬಿ ಜಯರಾಮ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    PRCI ರಾಷ್ಟ್ರೀಯ ಅಧ್ಯಕ್ಷರಾದ ಗೀತಾ ಶಕಾರ್ ಮಾತನಾಡಿ, ಸಂಬಂಧಗಳ ನಿರ್ಮಾಣ ಮತ್ತು ನಂಬಿಕೆಯನ್ನು ರೂಪಿಸುವುದು ಪಬ್ಲಿಕ್ ರಿಲೇಶನ್ಸ್ ವೃತ್ತಿಯ ಗುರಿ. PR ಮಾತ್ರ ಸಂದೇಶ ರವಾನಿಸುವುದಲ್ಲ, ಅದನ್ನು ಅರ್ಥಪೂರ್ಣವಾಗಿ ಜಗತ್ತಿನೊಂದಿಗೆ ಮರುಸಂಪರ್ಕಿಸಲು ಪಬ್ಲಿಕ್ ರಿಲೇಶನ್ಸ್ ವೃತ್ತಿಪರರು ಪ್ರಯತ್ನಿಸುತ್ತಾರೆ ಎಂದರು.

  • ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಆಗ್ರಹ; ವಿಧಾನಸಭೆಯಲ್ಲಿ ಕೋಲಾಹಲ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಮುಂದುವರಿಸಬೇಕು ಹಾಗೂ ಆರ್ಟಿಕಲ್ 370 ಮತ್ತು 35 ಎ ನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ರಾಜಕೀಯ ಪಕ್ಷಗಳು ಆಗ್ರಹಿಸಿವೆ. ಈ ಆಗ್ರಹದಿಂದಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಯಲ್ಲಿ ಗುರುವಾರ ಕೋಲಾಹಲದ ಪರಿಸ್ಥಿತಿ ನಿರ್ಮಾಣವಾಯಿತು.

    ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಕ್ಕೆ ಕೆಲವು ಶಾಸಕರು ಒತ್ತಾಯಿಸಿದರೆ ಕೆಲವರು ವಿರೋಧಿಸಿದ್ದಾರೆ. ವಿಶೇಷ ಸ್ಥಾನಮಾನ ಕುರಿತು ಬುಧವಾರ ಕೈಗೊಂಡ ನಿರ್ಣಯವನ್ನು ಬಿಜೆಪಿ ಶಾಸಕರು ಗುರುವಾರ ವಿರೋಧಿಸಿದರು. ಈ ಸಂದರ್ಭದಲ್ಲಿ ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಮತ್ತು ಶಾಸಕ ಲಂಗೇಟ್ ಶೇಖ್ ಖುರ್ಷೀದ್ ಅವರು ಆರ್ಟಿಕಲ್ 370 ಮತ್ತು 35 ಎ ಯನ್ನು ಮರುಸ್ಥಾಪಿಸುವಂತೆ ಬ್ಯಾನರ್ ಪ್ರದರ್ಶಿಸಿ ಸದನದ ಬಾವಿಗಿಳಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಬ್ಯಾನರ್ ಕಿತ್ತು ಹಾಕಿದರು. ಈ ವೇಳೆ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಈ ಗದ್ದಲ ಹಿನ್ನೆಲೆ ಕಲಾಪವನ್ನು ಕೆಲಕಾಲ ಸ್ಪೀಕರ್ ಮುಂದೂಡಿದರು.

  • ನಟ ಶಾರುಖ್ ಖಾನ್’ಗೂ ಕೊಲೆ ಬೆದರಿಕೆ; ಆರೋಪಿಗಾಗಿ ಪೊಲೀಸ್ ಬಲೆ

    ನಟ ಶಾರುಖ್ ಖಾನ್’ಗೂ ಕೊಲೆ ಬೆದರಿಕೆ; ಆರೋಪಿಗಾಗಿ ಪೊಲೀಸ್ ಬಲೆ

    ಮುಂಬೈ: ಬಾಲಿವುಡ್ ತಾರೆಯರಿಗೆ ಜೀವಬೆದರಿಕೆಯ ಪ್ರಕರಣ ಮರುಕಳಿಸುತ್ತಲಿದ್ದು, ನಟ ಸಲ್ಮಾನ್ ಖಾನ್ ಬಳಿಕ ಶಾರುಖ್​ ಖಾನ್​ಗೆ ಕೊಲೆ ಬೆದರಿಕೆಯೊಡ್ಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಮುಂಬೈ ಪೊಲೀಸರು ಆರೋಪಿಗಾಗಿ ಬಲೇ ಬೀಸಿದ್ದಾರೆ.

    ನಟ ಶಾರುಖ್ ಖಾನ್ ಅವರಿಗೆ ಕರೆ ಮಾಡಿದ ವ್ಯಕ್ತಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ನವೆಂಬರ್ 5 ರಂದು ಪ್ರಕರಣ ದಾಖಲಿಸಿಕೊಂಡ ಬಾಂದ್ರಾ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಯು ಛತ್ತೀಸ್ ಘಡದ ರಾಯ್‌ಪುರದಲ್ಲಿ ಇರಬಹುದೆಂಬ ಸುಳಿವು ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.