ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಚೆನ್ನಮ್ಮ ಹೆಸರಿಡುವಂತೆ ಕೇಂದ್ರಕ್ಕೆ ಸಿಎಂ ಆಗ್ರಹ
ಬೆಳಗಾವಿ: ರಾಣಿ ಚೆನ್ನಮ್ಮನವರ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಕೂಡ ನಮ್ಮ ಸರ್ಕಾರವೇ. ಹಲವು ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಣೆಗೆ ತಂದಿದ್ದು ಕೂಡ ನಾವೆ. ಇದು ನಮ್ಮ ಸಂಸ್ಕೃತಿ ಎಂದ ಸಿಎಂ ಸಿದ್ದರಾಮಯ್ಯ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಚೆನ್ನಮ್ಮ ಅವರ ಹೆಸರಿಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ 201ನೇ ವರ್ಷದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅವರು ಸ್ಮರಿಸಿದರು.
1857ರ ಸಿಪಾಯಿ ದಂಗೆಗೂ 33 ವರ್ಷಗಳ ಮೊದಲೇ ಬ್ರಿಟೀಷರನ್ನು ಕಿತ್ತೂರು ಚೆನ್ನಮ್ಮ ಸೋಲಿಸಿದರು. ಬ್ರಿಟೀಷರನ್ನು ಸೋಲಿಸಿ ಕಿತ್ತೂರಿನ ಸ್ವಾಭಿಮಾನವನ್ನು ಗೆಲ್ಲಿಸಿದ ದಿನವೇ ಕಿತ್ತೂರು ಉತ್ಸವದ ದಿನವಾಗಿದೆ. 2017 ರಲ್ಲಿ ಕಿತ್ತೂರು ಉತ್ಸವವನ್ನು ಮೊದಲ ಬಾರಿಗೆ ಆರಂಭಿಸಿದ್ದು ನಮ್ಮ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದರು.
...









