Saturday, December 6

ಬಿಹಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಭಿನ್ನ ಶೈಲಿಯಲ್ಲಿ ಪ್ರಚಾರ

ಪಾಟ್ನಾ: ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಭಿನ್ನ ಶೈಲಿಯಲ್ಲಿ ಮತದಾರರನ್ನು ಭೇಟಿಯಾದರು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಲವೇ ಸಮಯದ ಬಳಿಕ ಅವರು ಸ್ಥಳೀಯ ಕೊಳಕ್ಕೆ ತೆರಳಿ ಮೀನುಗಾರರೊಂದಿಗೆ ಸೇರಿಕೊಂಡು ಸಂವಾದ ನಡೆಸಿದರು.

ಮೀನುಗಾರ ಸಮುದಾಯದ ಜೀವನಮಟ್ಟ, ಕಷ್ಟಗಳು ಮತ್ತು ಸರ್ಕಾರದ ನಿರ್ಲಕ್ಷ್ಯದ ಕುರಿತು ನೇರವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ ರಾಹುಲ್, ಅವರ ಸಮಸ್ಯೆಗಳನ್ನು ಆಲಿಸಿ, ಮಹಾಘಟಬಂಧನ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಭರವಸೆ ನೀಡಿದರು.

ವಿಕಾಸಶೀಲ ಇನ್ಸಾನ್ ಪಕ್ಷದ (ವಿಐಪಿ) ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಮುಖೇಶ್ ಸಹಾನಿ ಅವರೂ ಈ ವೇಳೆ ರಾಹುಲ್‌ಗಾಂಧಿಯೊಡನೆ ಇದ್ದರು. ಮೀನುಗಾರರ ಕುಟುಂಬಗಳಿಗೆ ಮಳೆಗಾಲದ ಸಮಯದಲ್ಲಿ ₹5,000 ನೆರವು, ಮೀನುಗಾರಿಕೆ ವಿಮಾ ಯೋಜನೆ ಮತ್ತು ನದಿ-ಕೊಳಗಳ ಪುನರುಜ್ಜೀವನ ಸೇರಿದಂತೆ ಮೈತ್ರಿಕೂಟದ ಘೋಷಣಾ ಪತ್ರದಲ್ಲಿನ ಭರವಸೆಗಳನ್ನು ರಾಹುಲ್ ಗಾಂಧಿ ವಿವರಿಸಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಿಹಾರ ಮತ್ತು ಕೇಂದ್ರ ಸರ್ಕಾರಗಳ ಆಡಳಿತವನ್ನು ತೀವ್ರವಾಗಿ ಟೀಕಿಸಿದರು.
“ಬಿಹಾರದ ಜನರು ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋಗಿ ಅಲ್ಲಿ ಹೆಸರು ಮಾಡುತ್ತಾರೆ. ಆದರೆ ತಮ್ಮ ಸ್ವದೇಶಕ್ಕೆ ಹಿಂತಿರುಗಿದಾಗ ಅವರ ಸ್ಥಿತಿ ಅತಿದಯನೀಯವಾಗಿರುತ್ತದೆ. ಇದರ ಹೊಣೆ ಸರ್ಕಾರದ ನಿರ್ಲಕ್ಷ್ಯಕ್ಕೇ ಸೇರಿದೆ,” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಯುಪಿಎ ಆಡಳಿತಾವಧಿಯಲ್ಲಿ ನಳಂದ ವಿಶ್ವವಿದ್ಯಾಲಯದ ಪುನರುಜ್ಜೀವನ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದರೂ, ಪ್ರಸ್ತುತ ಬಿಜೆಪಿ–ಜೆಡಿಯು ಸರ್ಕಾರ ಅದನ್ನು ಹಾಳುಮಾಡಿದೆ ಎಂದು ಅವರು ಆರೋಪಿಸಿದರು.

“ಬಿಹಾರದ ಜನರು ದುಬೈ ನಗರವನ್ನು ತಮ್ಮ ಬೆವರಿನ ಕೆಲಸದಿಂದ ಕಟ್ಟಲು ಸಾಧ್ಯವಿದೆ. ಹಾಗಾದರೆ ಬಿಹಾರವನ್ನು ಏಕೆ ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ? ಇದಕ್ಕೆ ಕಾರಣ, ಇಲ್ಲಿನ ಸರ್ಕಾರ ಜನರಿಗೆ ಅವಕಾಶ ನೀಡದಿರುವುದೇ,” ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆಗಳು ಯುವಕರ ಭವಿಷ್ಯವನ್ನು ಹಾಳುಮಾಡುತ್ತಿವೆ ಎಂದು ಹೇಳಿದ ರಾಹುಲ್, “ಮಹಾಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದರೆ ಶಿಕ್ಷಣ ಕ್ಷೇತ್ರದ ಪುನರುಜ್ಜೀವನ ನಮ್ಮ ಮೊದಲ ಆದ್ಯತೆ. ಜಗತ್ತಿನಾದ್ಯಂತ ವಿದ್ಯಾರ್ಥಿಗಳು ಬರುವಂತ ವಿಶ್ವಮಟ್ಟದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವೆವು,” ಎಂದು ಘೋಷಿಸಿದರು.

“ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ‘ವಿಶೇಷ ಪ್ರಣಾಳಿಕೆ’ ಸಿದ್ಧವಾಗಿದೆ. ನಮ್ಮ ಸರ್ಕಾರ ಯಾರನ್ನೂ ಹಿಂದೆ ಬಿಡುವುದಿಲ್ಲ. ಸಣ್ಣ ವ್ಯವಹಾರಗಳಿಗೆ ಉತ್ತೇಜನ ನೀಡುವುದು ನಮ್ಮ ಆದ್ಯತೆ,” ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.