
ಮಂಗಳೂರು: ಕರ್ನಾಟಕದಲ್ಲಿರುವ ಸಹಕಾರಿ ಬ್ಯಾಂಕುಗಳ ಅವ್ಯವಹಾರಗಳು ಕೇಳಿಬಂದಿರುವಂತೆಯೇ ಇದೀಗ ಕರಾವಳಿಯ ಮತ್ತೊಂದು ಸಹಕಾರಿ ಸಂಘದ ಅವ್ಯವಹಾರ ಬಗ್ಗೆ ಆರೋಪ ಕೇಳಿಬಂದಿದೆ. ಈ ಬಗ್ಗೆ ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳದ ಪ್ರದೀಪ್ ಪೈ ಎಂಬವರು ಕೇಂದ್ರ ಸಹಕಾರ ಸಚಿವರಿಗೆ ದೂರು ನೀಡಿದ್ದು, ಆರ್ಬಿಐ ಹಾಗೂ ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ವ್ಯವಸಾಯ ನಿರತ ರೈತರಿಗೆ ಹಣಕಾಸು ನೆರವು ನೀಡುವ ಉದ್ದೇಶದಿಂದ ಸ್ಥಾಪಿತಗೊಂಡಿರುವ ಪೊಳಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವಿರುದ್ಧ ಅವ್ಯವಹಾರ ಆರೋಪ ಕೇಳಿಬಂದಿದೆ. ಸೂಕ್ತ ಭದ್ರತೆ ಇಲ್ಲದೆ ಇಲ್ಲದೆ ಬೇಕಾಬಿಟ್ಟಿ ಸಾಲ ನೀಡಲಾಗುತ್ತಿದ್ದು, ನಕಲಿ ದಾಖಲೆಗಳನ್ನು ನೀಡಿದರೂ ಸಾಲ ಒದಗಿಸಲಾಗುತ್ತಿದೆ. ಈ ಸಾಲ ದಂಧೆಗಾಗಿ ಸಹಕಾರ ಸಂಘದ ಸರಹದ್ದಿಗಿಂತ ಹೊರಗಿನ ವ್ಯಕ್ತಿಗಳಿಗೆ ನಿಯಮ ಬಾಹಿರವಾಗಿ ಸದಸ್ಯತ್ವ ನೀಡಲಾಗುತ್ತಿದೆ. ಈ ಮೂಲಕ ಬ್ಯಾಂಕಿಗೆ ಭಾರೀ ನಷ್ಟ ಉಂಟಾಗಿದೆ.
ಜಮೀನಿನ ನಕಲಿ ಜಿಪಿಎ ಗಳನ್ನೂ ಆಧರಿಸಿ ಸಾಲ ನೀಡಿರುವ ಪ್ರಕರಣಗಳ ಬಗ್ಗೆ ದೂರುದಾರರು ಗಮನಸೆಳೆದಿದ್ದಾರೆ. ಕೆಲವರು ಕೋಟ್ಯಂತರ ರೂಪಾಯಿ ಸಾಲ ಪಡೆದು ಸುಸ್ತಿದಾರರಾಗಿ, ಭಾರೀ ಅವ್ಯವಹಾರ ಆರೋಪದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗಿತ್ತು. ಅದಾಗಲೇ ಆ ಸಾಲಗಾರರು ಸಂಶಯಾಸ್ಪದ ರೀತಿಯಲ್ಲಿ ಹಣ ಹೊಂದಿಸಿ ಸಾಲ ಮರುಪಾವತಿಸಿರುತ್ತಾರೆ. ಒಂದೊಮ್ಮೆ ಅನುಮಾನಾಸ್ಪದ ರೀತಿಯ ಹಣಕಾಸು ವ್ಯವಹಾರ ನಡೆದರೆ, RBI, ಆದಾಯ ತೆರಿಗೆ ಇಲಾಖೆ, ಅಥವಾ ಇತರ ಸಕ್ಷಮ ಪ್ರಾಧಿಕಾರಗಳಿಗೆ ಮಾಹಿತಿ ನೀಡುವುದು ಬ್ಯಾಂಕ್ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಆದರೆ ಪೊಳಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಆ ನಿಯಮಗಳನ್ನು ಮೀರಿ ನಡೆದುಕೊಂಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ೨೦೧೯ರಿಂದ ಈ ವರೆಗಿನ ಅವ್ಯವಹಾರಗಳ ಬಗ್ಗೆ ದಾಖಲೆ ಸಹಿತ ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ‘ಟೈಮ್ಸ್ ನೆಟ್’ ಮಾಧ್ಯಮ ವರದಿ ಮಾಡಿದೆ.
ಈ ಅವ್ಯವಹಾರಗಳ ಬಗ್ಗೆ ಸಹಕಾರ ಇಲಾಖೆಯ ಅಧಿಕಾರಿಗಳೂ ನಿರ್ಲಕ್ಸ್ಯ ತಾಳಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ದೂರುದಾರರು ಮನವಿ ಮಾಡಿದ್ದಾರೆ.
