Wednesday, January 28

ಮಂಗಳೂರು ಗರೋಡಿ: ಪ್ರಚೋದನಕಾರಿ ಪೋಸ್ಟ್‌ಗಳ ವಿರುದ್ಧ ಪೊಲೀಸರಿಂದ FIR

ಮಂಗಳೂರು: ಬಂದರು ನಗರಿ ಮಂಗಳೂರಿನ ಪ್ರಸಿದ್ಧ ಗರೋಡಿ ಕ್ಷೇತ್ರದ ಜಾತ್ರೋತ್ಸವ ಸಂದರ್ಭದಲ್ಲಿ ‘ಕೋಳಿ ಅಂಕ’ ನಡೆಸುವ ವಿಚಾರವಾಗಿ ಪರ–ವಿರೋಧ ಚರ್ಚೆಗಳು ತೀವ್ರಗೊಂಡಿವೆ. ಕೆಲವರು ಇದನ್ನು ಉತ್ಸವದ ಸಂದರ್ಭದ ಮನರಂಜನಾ ಆಟವೆಂದು ಪರಿಗಣಿಸುತ್ತಿದ್ದರೆ, ಇನ್ನು ಕೆಲವರು ಇದನ್ನು ಜಾತ್ರಾ ಸಂಪ್ರದಾಯದ ಭಾಗವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳು ಹರಿದಾಡುತ್ತಿವೆ ಎಂದು ಆರೋಪಿಸಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯೂ ಆಗಿರುವ ಬಿಲ್ಲವ ಸಮುದಾಯದ ಮುಖಂಡ ಪದ್ಮರಾಜ್ ಪೂಜಾರಿ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ಆಧರಿಸಿ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ದೂರು ವಿವರಗಳ ಪ್ರಕಾರ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ “Kalyug Kalki Post” ಎಂಬ ಶೀರ್ಷಿಕೆಯಡಿ ಹರಿದಾಡುತ್ತಿರುವ ಒಂದು ಪೋಸ್ಟ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಿದ್ದು, ಸಮಾಜದಲ್ಲಿ ಅಶಾಂತಿ, ವೈಮನಸ್ಸು ಹಾಗೂ ಶಾಂತಿ ಭಂಗಕ್ಕೆ ಕಾರಣವಾಗುವ ಅಪಾಯವನ್ನು ಹೊಂದಿದೆ ಎಂದು ಆರೋಪಿಸಲಾಗಿದೆ.

ಸಾರ್ವಜನಿಕ ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡು ಅಪಪ್ರಚಾರ ನಡೆಸುವುದು ಕಾನೂನುಬಾಹಿರವಾಗಿದ್ದು, ಇದು ಸಮಾಜದ ಸಾಮರಸ್ಯ ಮತ್ತು ಸಹಬಾಳ್ವೆಗೆ ಗಂಭೀರ ಸವಾಲಾಗಿ ಪರಿಣಮಿಸುತ್ತದೆ ಎಂದು ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ರೀತಿಯ ಪೋಸ್ಟ್‌ಗಳಿಂದ ತೀವ್ರ ನೋವಾಗಿದೆ ಎಂದು ಹೇಳಿರುವ ಅವರು, ದೇವರ ವಿಚಾರ ಹಾಗೂ ಶ್ರದ್ದೆ–ಭಕ್ತಿಗೆ ಕಳಂಕ ತರುವ ಅಪಪ್ರಚಾರವನ್ನು ಸಹಿಸಲಾಗುವುದಿಲ್ಲ ಎಂದಿದ್ದಾರೆ. ಸಮಾಜದಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಸೋಮವಾರ ಸಂಜೆ 6 ಗಂಟೆಗೆ ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಅಪಪ್ರಚಾರಕ್ಕೆ ಕಾರಣರಾದವರು ಆತ್ಮಾವಲೋಕನದ ಮನಸ್ಸಿನಿಂದ ಗರೋಡಿ ಕ್ಷೇತ್ರಕ್ಕೆ ಆಗಮಿಸಿ ಶಾಂತಿಯ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಸಂಯಮ, ಸಂಸ್ಕೃತಿ ಮತ್ತು ಕಾನೂನುಬದ್ಧ ಮಾರ್ಗಗಳ ಮೂಲಕ ವ್ಯಕ್ತಪಡಿಸುವುದೇ ನಾಗರಿಕ ಧರ್ಮ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದೇ ವೇಳೆ, ಕಂಕನಾಡಿ ಗರೋಡಿ ಕ್ಷೇತ್ರದ ಜಾತ್ರೋತ್ಸವದ ವೇಳೆ ನಡೆಯುವ ಕೋಳಿ ಅಂಕದ ವಿಷಯದಲ್ಲಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡಿಲ್ಲ ಹಾಗೂ ಕೋಳಿ ಅಂಕವನ್ನು ತಡೆಯುವಂತೆ ಯಾವುದೇ ಒತ್ತಡ ಪ್ರಯೋಗಿಸಿಲ್ಲ ಎಂದು ಪದ್ಮರಾಜ್ ಪೂಜಾರಿ ಸ್ಪಷ್ಟಪಡಿಸಿದ್ದಾರೆ.