
ಕೊಪ್ಪಳ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಇಸ್ರೇಲ್ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಅಮೆರಿಕದ ಪ್ರವಾಸಿಗನ ಕೊಲೆ ಪ್ರಕರಣ ಸಂಬಂಧ ಗಂಗಾವತಿ ನ್ಯಾಯಾಲಯವು, ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ. ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು.
2025ರ ಮಾರ್ಚ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಂಪಿಯ ಸಾಣಾಪೂರ ಬಳಿ ಇಸ್ರೇಲ್ ಮೂಲದ ಮಹಿಳೆಯ ಅತ್ಯಾಚಾರ ನಡೆದಿತ್ತು. ಈ ವೇಳೆ ವಿದೇಶಿ ಯುವಕನ ಕೊಲೆ ಮಾಡಲಾಗಿತ್ತು. ಈ ಘಟನೆ ನಡೆದ ಕೇವಲ 9 ತಿಂಗಳಲ್ಲೇ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಫೆಬ್ರವರಿ 6ರಂದು ಮೂವರು ಆರೋಪಿಗಳನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿತ್ತು. ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷಿಯ ತೀರ್ಪು ಪ್ರಕಟಿಸಿದ್ದಾರೆ. ಈ ಮೂಲಕ ನ್ಯಾಯಾಂಗದ ದಕ್ಷತೆ ಈ ತೀರ್ಪು ಮೂಲಕ ಸಾಬೀತಾಗಿದೆ. ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಅವರ ತೀರ್ಪು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಎಂಬಂತಾಗಿದೆ.
