
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ವಿದ್ಯಮಾನಗಳ ನಡುವೆಯೂ ದೇಶೀಯವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆ ಬುಧವಾರ ಹೊಸ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹1 ಲಕ್ಷ ರೂಪಾಯಿ ಗಡಿಯನ್ನು ದಾಟಿದೆ. ಬೆಳ್ಳಿ ದರವೂ ಪ್ರತಿ ಕೆಜಿಗೆ ದಾಖಲೆಯ ₹1.15 ಲಕ್ಷ ದಾಟಿದೆ.
ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಬಿಡುಗಡೆ ಮಾಡಿರುವ ದರಪಟ್ಟಿಯ ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರದ ₹99,508ರಿಂದ ₹1,00,533ಕ್ಕೆ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ದರವೂ ₹91,149ರಿಂದ ₹92,088ಕ್ಕೆ ಏರಿಕೆಯಾಗಿದ್ದು, 18 ಕ್ಯಾರೆಟ್ ಚಿನ್ನದ ದರ ₹74,631ರಿಂದ ₹75,400ಕ್ಕೆ ಜಿಗಿದಿದೆ.
ಒಂದೇ ದಿನದಲ್ಲಿ ಬೆಳ್ಳಿ ದರ ₹1,357ರಷ್ಟು ಏರಿಕೆಯಾಗಿದ್ದು, ಮಂಗಳವಾರದ ₹1,14,493ರಿಂದ ₹1,15,850ಕ್ಕೆ ತಲುಪಿದೆ.
ಈ ವರ್ಷ ಜನವರಿಯಿಂದ ಈವರೆಗೂ ಬೆಳ್ಳಿ ದರ ಶೇ.34ರಷ್ಟು ಏರಿಕೆಯಾಗಿದೆ. ಜನವರಿಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ₹86,055 ಇತ್ತು.
ಫ್ಯೂಚರ್ಸ್ ಮಾರುಕಟ್ಟೆಯಲ್ಲೂ ಏರಿಕೆ
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಆಗಸ್ಟ್ 5ರ ಚಿನ್ನದ ಒಪ್ಪಂದ 0.17% ಏರಿಕೆಯಿಂದ ₹1,00,500ಕ್ಕೆ ವಹಿವಾಟು ನಡೆಸುತ್ತಿದೆ. ಸೆಪ್ಟೆಂಬರ್ 5ರ ಬೆಳ್ಳಿ ಒಪ್ಪಂದ 0.58% ಏರಿಕೆಯಿಂದ ₹1,16,323ಕ್ಕೆ ತಲುಪಿದೆ.
COMEXನಲ್ಲಿ ಚಿನ್ನದ ದರ ಔನ್ಸ್‌ಗೆ $3,441.10ಕ್ಕೆ ಸ್ವಲ್ಪ ಇಳಿಕೆಯಾಗಿದ್ದರೆ, ಬೆಳ್ಳಿ ದರ $39.76ಕ್ಕೆ ಏರಿಕೆಯಾಗಿದೆ. ಜಾಗತಿಕವಾಗಿ ಚಿನ್ನದ ದರ ಸ್ಥಿರತೆ ಹೊಂದಿರುವುದರಿಂದ ಮತ್ತು ರೂಪಾಯಿ ಮೌಲ್ಯವೂ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹತ್ತಿರದ ಗರಿಷ್ಠ ಮಟ್ಟದಲ್ಲಿ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಚಿನ್ನದ ದರ ₹99,000 ರಿಂದ ₹1,01,500ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸುವ ಸಾಧ್ಯತೆಯಿದೆ. COMEXನ ದರ ಮತ್ತು ರೂಪಾಯಿ ಸ್ಥಿರತೆ ಈ ನಿಟ್ಟಿನಲ್ಲಿ ಪ್ರಭಾವ ಬೀರುತ್ತಿವೆ ಎಂದು LKP ಸೆಕ್ಯುರಿಟೀಸ್‌ನ ಜತೀನ್ ತ್ರಿವೇದಿ ವಿಶ್ಲೇಷಿಸಿದ್ದಾರೆ.