
ನವದೆಹಲಿ: ಸ್ವಾತಂತ್ರೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪರಿಷ್ಕರಣೆಯ ಭರವಸೆ ನೀಡಿದ್ದರು. ಅದರಂತೆಯೇ ಕೇಂದ್ರ ಸರ್ಕಾರ ಹಲವು ವಸ್ತುಗಳ ಜಿಎಸ್‌ಟಿ ದರ ಇಳಿಸುವ ಮೂಲಕ ದೇಶದ ಜನರಿಗೆ ಗುಡ್ ನ್ಯೂಸ್ ನೀಡಿದೆ. ದೀಪಾವಳಿ ಮುನ್ನ ಗಿಫ್ಟ್ ನೀಡುವುದಾಗಿ ಮೋದಿ ನೀಡಿರುವ ಭರವಸೆ ಇದೀಗ ಕಾರ್ಯರೂಪಕ್ಕೆ ಬಂದಿದೆ.
ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ದೊಡ್ಡ ಮಟ್ಟದ ಪರಿಷ್ಕರಣೆ ಮಾಡಲಾಗಿದ್ದು, ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಂಡು ಶೇ 12 ಮತ್ತು ಶೇ 28ರ ಸ್ಲ್ಯಾಬ್‌ಗಳನ್ನು ರದ್ದು ಮಾಡಲಾಗಿದೆ. ಕೇಂದ್ರದ ಈ ನಿರ್ಧಾರದಿಂದಾಗಿ ಹಾಲವು ವಸ್ತುಗಳ ಬೆಲೆ ಇಳಿಕೆಯಾಗಲಿದೆ.ಇದೇ ಸಂದರ್ಭದಲ್ಲಿ ಹಲವು ವಸ್ತುಗಳನ್ನು ತೆರಿಗೆ ಮುಕ್ತ ಗೊಳಿಸಲಾಗಿದೆ.
ಈ ಕೆಲವು ವಸ್ತುಗಳಿಗೆ ಜಿಎಸ್ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಈ ವರೆಗೂ ಶೇ 5 ರ ಜಿಎಸ್‌ಟಿ ಸ್ಲ್ಯಾಬ್ ಅಡಿ ಬರುತ್ತಿದ್ದ ಯುಎಚ್ಟಿ ಮಿಲ್ಕ್, ಪ್ಯಾಕ್ ಮಾಡಿದ ಚೆನ್ನಾ, ಪನ್ನೀರ್, ಇಂಡಿಯನ್ ಬ್ರೆಡ್ಸ್, ರೋಟಿ, ಕಾಕ್ರಾ, ಚಪಾತಿ, ಪರೋಟ, ಪಿಜ್ಜಾ ಹಾಗೂ ಬ್ರೆಡ್ ಮೊದಲಾದ ವಸ್ತುಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದ ಮಕ್ಕಳ ಕಲಿಕಾಸಾಮಗ್ರಿಗಳಾದ ಮ್ಯಾಪ್ಸ್, ಚಾರ್ಟ್ಸ್ ಮತ್ತು ಗ್ಲೋಬ್ಸ್, ಪೆನ್ಸಿಲ್ಸ್, ಶಾರ್ಪರ್ನರ್ಸ್, ಎರೇಸರ್, ಕ್ರಯನ್ಸ್, ಮತ್ತು ಪ್ಯಾಸ್ಟೆಲ್‌ಗಳು, ಎಕ್ಸರ್‌ಸೈಸ್ ಬುಕ್ಸ್ ಮತ್ತು ನೋಟ್ ಪುಸ್ತಕಗಳು ಕೂಡಾ ಶೂನ್ಯ ತೆರಿಗೆ ವ್ಯಾಪ್ತಿಗೆ ಬರಲಿವೆ.
ಶೇ 18ರ ಜಿಎಸ್‌ಟಿ ವ್ಯಾಪ್ತಿಯಲ್ಲಿದ್ದ ವೈಯಕ್ತಿಕ ವಿಮೆ, ಆರೋಗ್ಯ ವಿಮೆಗೂ ಶೂನ್ಯ ತೆರಿಗೆ.