Sunday, September 7

ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಂದಣಿ ಪ್ರಕ್ರಿಯೆ ಇನ್ನಷ್ಟು ಸರಳ

ನವದೆಹಲಿ: ಸಣ್ಣ ಹಾಗೂ ಕಡಿಮೆ ಅಪಾಯದ ವ್ಯವಹಾರಗಳಿಗೆ ಜಿಎಸ್‌ಟಿ ನೋಂದಣಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಇನ್ನಷ್ಟು ಸುಲಭಗೊಳಿಸಿದೆ. ವ್ಯಾಪಾರ ಮಾಡುವ ಸುಲಭ ಸುಧಾರಣೆಗಳ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬುಧವಾರ ಸರ್ಕಾರ ತಿಳಿಸಿದೆ.

ಹೊಸ ವ್ಯವಸ್ಥೆಯಡಿ, ಅರ್ಹ ಅರ್ಜಿದಾರರಿಗೆ ಕೇವಲ ಮೂರು ಕೆಲಸದ ದಿನಗಳಲ್ಲಿ ನೋಂದಣಿ ಲಭ್ಯವಾಗಲಿದೆ.

ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಅಧ್ಯಕ್ಷ ಸಂಜಯ್ ಕುಮಾರ್ ಅಗರ್ವಾಲ್ ಹೇಳುವಂತೆ, ₹2.5 ಲಕ್ಷಕ್ಕಿಂತ ಹೆಚ್ಚು ಇನ್‌ಪುಟ್ ತೆರಿಗೆ ಕ್ರೆಡಿಟ್ ಪಡೆಯದ ಸಣ್ಣ ವ್ಯವಹಾರಗಳು ಈ ಸರಳೀಕೃತ ನೋಂದಣಿಯನ್ನು ಆಯ್ಕೆ ಮಾಡಬಹುದು. ಮುಂದಿನ ದಿನಗಳಲ್ಲಿ ಅವರು ವಿಸ್ತಾರಗೊಂಡು ಸಾಮಾನ್ಯ ನೋಂದಣಿಗೆ ಬಯಸಿದರೆ, ಅಪಾಯ ಮೌಲ್ಯಮಾಪನದ ಆಧಾರದ ಮೇಲೆ ಸಾಮಾನ್ಯ ವರ್ಗಕ್ಕೆ ಪರಿವರ್ತಿಸಬಹುದಾಗಿದೆ.

ಮರುಪಾವತಿ ಪ್ರಕ್ರಿಯೆಗೂ ಸುಧಾರಣೆ

ಮರುಪಾವತಿಗೆ ಸಂಬಂಧಿಸಿದಂತೆ ಈಗಿರುವ ವ್ಯವಸ್ಥೆಯಲ್ಲಿ ತಿದ್ದುಪಡಿ ಮಾಡಲು ಜಿಎಸ್‌ಟಿ ಕೌನ್ಸಿಲ್ ಶಿಫಾರಸು ಮಾಡಿದೆ.

ತಾತ್ಕಾಲಿಕ ಆಧಾರದ ಮೇಲೆ 90% ಮೊತ್ತವನ್ನು ಏಳು ದಿನಗಳಲ್ಲಿ ನೀಡುವ ವ್ಯವಸ್ಥೆ ತರಲು ಪ್ರಸ್ತಾಪಿಸಲಾಗಿದೆ.

ಪ್ರಸ್ತುತ ಇಂತಹ ಸೌಲಭ್ಯ ಇಲ್ಲದ ಕಾರಣ, ಇದಕ್ಕೆ ಕಾನೂನು ತಿದ್ದುಪಡಿ ಅಗತ್ಯವಿದೆ. ಸಂಸತ್ತಿನ ಅನುಮೋದನೆ ಪಡೆಯಲು ಸ್ವಲ್ಪ ಸಮಯ ಬೇಕಾಗಬಹುದು ಎಂದು ಅಗರ್ವಾಲ್ ಸ್ಪಪ್ರತಿಪಾದಿಸಿದ್ದಾರೆ.