Saturday, December 6

IMA ವಂಚನೆ ಪ್ರಕರಣದ ಪ್ರತಿಧ್ವನಿ; ಸಿದ್ದು ಸಂಪುಟದ ಸಚಿವರ ಬಂಧನಕ್ಕೆ ಯತ್ನಾಳ್ ಆಗ್ರಹ

ಬೆಂಗಳೂರು: IMA ವಂಚನೆ ಪ್ರಕರಣದಲ್ಲಿ ಸಿದ್ದರಾಮಯ್ಯ ಸಂಪುಟದ ಸಚಿವರನ್ನು ಬಂಧಿಸಬೇಕೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಆಗ್ರಹಿಸಿದ್ದಾರೆ.

ಬಹುಕೋಟಿ ವಂಚನೆ ಪ್ರಕರಣ ಬಗ್ಗೆ ಸಿಬಿಐ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆಕ್ಷೇಪಿಸಿ ಸಿಟಿಜನ್ ರೈಟ್ಸ್ ಫೌಂಡೇಷನ್ ದೂರು ನೀಡಿದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಯತ್ನಾಳ್, ಪ್ರಭಾವಿಗಳನ್ನು ಸರ್ಕಾರ ರಕ್ಷಿಸದೇ IMA ಹಗರಣದಲ್ಲಿ ಭಾಗಿಯಾಗಿರುವ ಸಚಿವರನ್ನು ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ಬಸನಗೌಡ ಪಾಟೀಲ್ ಯತ್ನಾಳ್, IMA ಸಂಸ್ಥೆಯಿಂದ ಸಚಿವ ಜಮೀರ್ ಅಹಮ್ಮದ್ ಅವರು ನಗದು (ಕ್ಯಾಶ್) ಮೂಲಕ ಸುಮಾರು 29.38 ಕೋಟಿ ಸ್ವೀಕರಿಸಿದ್ದರು ಹಾಗೂ 25 ಕೋಟಿ ರೂ ಅನ್ನು ಸಾಲವಾಗಿ ಪಡೆದಿದ್ದರು. ಈ ಸಾಲವನ್ನು ಜಮೀರ್ ಹಿಂದುರಿಗಿಸಿರಲಿಲ್ಲ. 25 ಕೋಟಿ ಸಾಲ ಮರುಪಾವತಿ ಮಾಡದೆ ಇದ್ದದ್ದಕ್ಕೆ IMA ಇಂದ ಯಾವುದೇ ಕಾನೂನು ಕ್ರಮ ಕೂಡ ಜರುಗಿಸಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಈ ಪ್ರಕರಣದ ತನಿಖೆಯ ಮೇಲೆ ತಡೆಯಾಜ್ಞೆ ನೀಡಬೇಕೆಂದು ಜಮೀರ್ ಸರ್ವೋಚ್ಚ ನ್ಯಾಯಾಲಯಕ್ಕೆ ಹಾಕಿದ್ದ ಅರ್ಜಿಯನ್ನು ತಿರಸ್ಕಾರಗೊಂಡಿತ್ತು ಎಂದಿರುವ ಯತ್ನಾಳ್, ಮುಸಲ್ಮಾನರ ಬಂಧು ಎಂದು ನಾಟಕವಾಡುತ್ತಿರುವ ಜಮೀರ್ ತನ್ನ ಪ್ರಭಾವ ಬಳಸಿ ಸುಮಾರು 31 ಕೋಟಿಯಷ್ಟು ಅಸುರಕ್ಷಿತ ಸಾಲ (unsecured loan) ಅನ್ನು IMA ಇಂದ ಪಡೆದಿದ್ದರು ಎಂದು ಗೊತ್ತಾಗಿದೆ. ಮುಸಲ್ಮಾನರ ಉದ್ಧಾರಕ್ಕೆ ತಾನು ಜನ್ಮ ತಾಳಿರೋದು ಎಂದು ತೋರಿಸಿಕೊಳ್ಳುವ ಜಮೀರ್ ಯಾವುದೇ ಕಾಗದಪತ್ರ, ಲೋನ್ ಸೆಕ್ಯೂರಿಟಿ ನೀಡದೆ ಪಡೆದಿದ್ದು ಹೇಗೆ ಹೇಳಲಿ? ಎಂದು ಸವಾಲು ಹಾಕಿದ್ದಾರೆ.

ಸಚಿವ ಜಮೀರ್ ಆದಾಯಕ್ಕೂ ಮೀರಿದ ಆಸ್ತಿಯನ್ನು ಆಗಿದೆ ಎಂದು ಲೋಕಾಯುಕ್ತ ಹೇಳಿತ್ತು. ಇದು ಯಾವ ಮಟ್ಟಕ್ಕೆ ಅಂದರೆ ತನ್ನ ಆದಾಯಕ್ಕೂ ಮೀರಿದ 2031% ರಷ್ಟು ಆಸ್ತಿ ಮಾಡಿಕೊಂಡಿದ್ದ ಜಮೀರ್ ಈಗ ಮುಸಲ್ಮಾನರ ಹಿತಾಸಕ್ತಿಗಳ ಬಗ್ಗೆ ಮಾತಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಯತ್ನಾಳ್ ಕುಟುಕಿದ್ದಾರೆ.

ಆದಾಯಕ್ಕೂ ಮೀರಿದ ಆಸ್ತಿಯನ್ನು ರುಜುವಾತುಗಳಿಸಲು ಲೋಕಾಯುಕ್ತ Source Information Report ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದು ಯತ್ನಾಳ್ ಹೇಳಿದ್ದಾರೆ.