ವಯನಾಡ್ ಭೂಕುಸಿತ ಪ್ರದೇಶದಲ್ಲಿ 31 ತಾಸುಗಳಲ್ಲಿ ಬೈಲಿ ಬ್ರಿಡ್ಜ್ ನಿರ್ಮಿಸಿದ ಕರ್ನಾಟಕದ ಯೋಧರಿಗೆ ಇಡೀ ದೇಶವೇ ಸೆಲ್ಯೂಟ್..!

ವಯನಾಡ್‌: ಮುಂಗಾರು ಮಳೆ ಆರ್ಭಟದ ನಡುವೆ, ಭೀಕರ ಭೂಕುಸಿತಕ್ಕೆ ನಲುಗಿರುವ ಕೇರಳದ ವಯನಾಡಿನಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಸಮರ ಸಜ್ಜಿನಂತೆ ಸಾಗಿದೆ. ಈ ಕಾರ್ಯಾಚರಣೆಯ ನಡುವೆ ಬೆಂಗಳೂರಿನ ಎಂಇಜಿ ಗ್ರೂಪ್‌ನ ಯೋಧರು ಈ ಸಾಧನೆ ಇಡೀ ದೇಶದ ಗಮನಸೆಳೆದಿದೆ.

ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತ ದುರ್ಘಟನೆಗಳಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದು ಅನೇಕರು ಜೀವಂತ ಸಮಾಧಿಯಾಗಿರುವ ಆತಂಕವಿದೆ. ಅವರಿಗಾಗಿ ಸೇನೆ ಹಾಗೂ ಎನ್‌ಡಿ‌ಆರ್‌ಎಫ್ ತಂಡಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದೇ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗಾಗಿ ದುರ್ಗಮ ಸ್ಥಳದಲ್ಲಿ ಬೆಂಗಳೂರಿನ ಎಂಇಜಿ ಗ್ರೂಪ್‌ನ ಯೋಧರು ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಜನರ ರಕ್ಷಣೆಗೆ ನೆರವಾಗಿದೆ.

  ಚೂರಲ್‌ವುಲದಿಂದ ಮುಂಡಕೈಗೆ ಸಂಪರ್ಕ ಕಲ್ಪಿಸಲು 31 ತಾಸುಗಳಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಬೈಲಿ ಸೇತುವೆ ಫ‌ಲಕಗಳನ್ನು ಬಳಸಿ 190 ಅಡಿ ಉದ್ದದ ಸೇತುವೆ ನಿರ್ಮಿಸಲಾಗಿದೆ. ಸುಮಾರು 140 ಮಂದಿ ಯೋಧರು ಇದರಲ್ಲಿ ಕೈಜೋಡಿಸಿದ್ದರು.

ವಯನಾಡ್‌ನ‌ ಈ ದುರ್ಗಮ ಪ್ರದೇಶದಲ್ಲಿ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿದೆ. ಅದರಲ್ಲೂ ಭೂಕುಸಿತದ ಪ್ರದೇಶದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಕಳುಹಿಸಲು ಅವಕಾಶ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯೋಧರು ಕ್ಷಿಪ್ರ ಕಾರ್ಯಾಚರಣೆಗಿಳಿದು ಈ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ಸೇತುವೆಯಿಂದ ಚೂರಲ್‌ವುಲ ಮತ್ತು ಮುಂಡಕೈಯಲ್ಲಿ ಸಿಲುಕಿರುವ ಸಂತ್ರಸ್ತರನ್ನು ಪಾರು ಮಾಡಲು, ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯಲು ಅವಕಾಶ ಸಿಕ್ಕಿದೆ.

ಏನಿದು ‘ಬೈಲಿ’ ಸೇತುವೆ..?

‘ಬೈಲಿ ಸೇತುವೆ’ ಎಂಬುದು ವಿಶಿಷ್ಟ ಮಿಲಿಟರಿ ಸೇತುವೆ ಎಂದೇ ಗುರುತಾಗಿದೆ. ಎರಡನೇ ಮಹಾಯುದ್ಧ ಸಮಯದಲ್ಲಿ ಬ್ರಿಟಿಷ್‌ ಎಂಜಿನಿಯರ್‌ ಸರ್‌ ಡೊನಾಲ್ಡ್ ಬೈಲಿ ಅವರು ಈ ರೀತಿಯ ಸೇತುವೆ ಅಭಿವೃದ್ಧಿ ಪಡಿಸಿ ಗಮನಸೆಳೆದಿದ್ದರು. ಸಮರ ಸ್ಥಳದಲ್ಲಿ ಕ್ಷಿಪ್ರ ಜೋಡಣೆ ಮೂಲಕ ಸಿದ್ದಪಡಿಸಬಹುದಾದ, ‘ಪೋರ್ಟಬಲ್‌ ಸೇತುವೆ’ ಇದಾಗಿದ್ದು, ಪ್ರಸಕ್ತ ರಸ್ತೆಗಳನ್ನು ಸಂಪರ್ಕಿಸುವ ಸೇತುವೆಗಳಂತೆಯೇ ಇದು ಗೋಚರಿಸುತ್ತದೆ.