ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಆಗ್ರಹ; ವಿಧಾನಸಭೆಯಲ್ಲಿ ಕೋಲಾಹಲ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಮುಂದುವರಿಸಬೇಕು ಹಾಗೂ ಆರ್ಟಿಕಲ್ 370 ಮತ್ತು 35 ಎ ನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ರಾಜಕೀಯ ಪಕ್ಷಗಳು ಆಗ್ರಹಿಸಿವೆ. ಈ ಆಗ್ರಹದಿಂದಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಯಲ್ಲಿ ಗುರುವಾರ ಕೋಲಾಹಲದ ಪರಿಸ್ಥಿತಿ ನಿರ್ಮಾಣವಾಯಿತು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಕ್ಕೆ ಕೆಲವು ಶಾಸಕರು ಒತ್ತಾಯಿಸಿದರೆ ಕೆಲವರು ವಿರೋಧಿಸಿದ್ದಾರೆ. ವಿಶೇಷ ಸ್ಥಾನಮಾನ ಕುರಿತು ಬುಧವಾರ ಕೈಗೊಂಡ ನಿರ್ಣಯವನ್ನು ಬಿಜೆಪಿ ಶಾಸಕರು ಗುರುವಾರ ವಿರೋಧಿಸಿದರು. ಈ ಸಂದರ್ಭದಲ್ಲಿ ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಮತ್ತು ಶಾಸಕ ಲಂಗೇಟ್ ಶೇಖ್ ಖುರ್ಷೀದ್ ಅವರು ಆರ್ಟಿಕಲ್ 370 ಮತ್ತು 35 ಎ ಯನ್ನು ಮರುಸ್ಥಾಪಿಸುವಂತೆ ಬ್ಯಾನರ್ ಪ್ರದರ್ಶಿಸಿ ಸದನದ ಬಾವಿಗಿಳಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಬ್ಯಾನರ್ ಕಿತ್ತು ಹಾಕಿದರು. ಈ ವೇಳೆ ಕೈ ಕೈ ಮಿಲಾಯಿಸುವ ಹಂತ ತಲುಪಿತು. ಈ ಗದ್ದಲ ಹಿನ್ನೆಲೆ ಕಲಾಪವನ್ನು ಕೆಲಕಾಲ ಸ್ಪೀಕರ್ ಮುಂದೂಡಿದರು.