Saturday, December 6

‘ಧ್ವನಿಸ್ಪಂದನ’ಕ್ಕೆ ರಾಷ್ಟ್ರ ಮಟ್ಟದ ಗೌರವ; ನಾವೀನ್ಯತೆ ತೋರಿದ ಕೆಎಸ್‌ಆರ್‌ಟಿಸಿ ಪ್ರಶಸ್ತಿ ಪುರಸ್ಕೃತ

ಗುರುಗ್ರಾಮ್ (ಹರಿಯಾಣ): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತೊಂದು ರಾಷ್ಟ್ರ ಮಟ್ಟದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ವತಿಯಿಂದ ನೀಡಲಾಗುವ ‘Award of Excellence in Urban Transport – 2025’ ಪ್ರಶಸ್ತಿಯನ್ನು ಈ ಬಾರಿ ನಿಗಮದ ‘ಧ್ವನಿಸ್ಪಂದನ’ ಯೋಜನೆಗೆ ಪ್ರದಾನ ಮಾಡಲಾಗಿದೆ.

ಈ ಪ್ರಶಸ್ತಿಯನ್ನು “The State which has implemented the Best Urban Transport Projects during the Previous Year” ವರ್ಗದಲ್ಲಿ ಕೆಎಸ್‌ಆರ್‌ಟಿಸಿ ಮೈಸೂರಿನ ನಗರ ಸಾರಿಗೆಯ ಧ್ವನಿಸ್ಪಂದನ ಉಪಕ್ರಮಕ್ಕೆ ನೀಡಲಾಗಿದೆ.

ದೇಶದ ಮೊದಲ ಧ್ವನಿ ಆಧಾರಿತ ಬಸ್ ಗುರುತಿಸುವ ವ್ಯವಸ್ಥೆ

ಮೈಸೂರು ನಗರ ಸಾರಿಗೆಯ 200ಕ್ಕೂ ಹೆಚ್ಚು ಬಸ್ಸುಗಳಲ್ಲಿ ಜಾರಿಗೆ ತರಲಾದ ‘ಧ್ವನಿಸ್ಪಂದನ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್’ ದೇಶದಲ್ಲೇ ಮೊದಲ ಪ್ರಯತ್ನವಾಗಿದೆ.

ಈ ವ್ಯವಸ್ಥೆಯ ಮೂಲಕ ದೃಷ್ಟಿವಿಕಲ ಚೇತನ ಪ್ರಯಾಣಿಕರು ಬಸ್ಸುಗಳನ್ನು ಸುಲಭವಾಗಿ ಗುರುತಿಸಲು, ಪ್ರವೇಶದ ಸ್ಥಳವನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಹಾಗೂ ಧ್ವನಿ ಆಧಾರಿತ ಸೂಚನೆಗಳ ಮೂಲಕ ಪ್ರಯಾಣಿಸಲು ಸಾಧ್ಯವಾಗಿದೆ. ಇದರಿಂದ ಅವರ ಆತ್ಮವಿಶ್ವಾಸ, ಭದ್ರತೆ ಮತ್ತು ಸಂಚಾರದ ಸ್ವಾತಂತ್ರ್ಯವು ಗಣನೀಯವಾಗಿ ಹೆಚ್ಚಿದೆ.

ಪ್ರಶಸ್ತಿ ಪ್ರದಾನ

ಈ ಪ್ರಶಸ್ತಿಯನ್ನು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಹಾಗೂ ರಾಜ್ಯ ಸಚಿವ ತೋಕನ್ ಸಾಹು ಅವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರಿಗೆ ಪ್ರದಾನ ಮಾಡಿದರು.

ಧ್ವನಿಸ್ಪಂದನ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಧ್ವನಿಸ್ಪಂದನ ವ್ಯವಸ್ಥೆಯನ್ನು ಐಐಟಿ ದೆಹಲಿಯ ರೈಸ್ಡ್ ಲೈನ್ಸ್ ಫೌಂಡೇಶನ್ ಅಭಿವೃದ್ಧಿಪಡಿಸಿದ್ದು, ಜರ್ಮನಿಯ GEZ ಸಂಸ್ಥೆ ಸಹಕಾರ ನೀಡಿದೆ. ದೃಷ್ಟಿವಿಕಲ ಬಸ್ ಪ್ರಯಾಣಿಕರಿಗೆ ಬಸ್ಸುಗಳ ಗುರುತು, ಮಾರ್ಗ ಮತ್ತು ಬಸ್ ನಿಲ್ದಾಣಗಳ ಮಾಹಿತಿ ಧ್ವನಿ ರೂಪದಲ್ಲಿ ಲಭ್ಯವಾಗುವಂತೆ ಈ ತಂತ್ರಜ್ಞಾನ ರೂಪಿಸಲಾಗಿದೆ.

ಈವರೆಗೆ 400ಕ್ಕೂ ಹೆಚ್ಚು ದೃಷ್ಟಿವಿಕಲ ಪ್ರಯಾಣಿಕರಿಗೆ ಇದರ ಬಳಕೆ ಕುರಿತು ತರಬೇತಿ ನೀಡಲಾಗಿದೆ. ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಜಾರಿಗೆ ತಂದಿರುವ ಧ್ವನಿಸ್ಪಂದನ ದೇಶದ ಮಾದರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.