Wednesday, January 28

MSME ವಲಯಕ್ಕೆ ಬಲ: ಅಂಚೆ ಸಾಗಣೆಯ ರಫ್ತಿಗೆ ಸರ್ಕಾರದ ಪ್ರೋತ್ಸಾಹ ವಿಸ್ತರಣೆ

ನವದೆಹಲಿ: ದೇಶದ ಇ-ಕಾಮರ್ಸ್ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ರಫ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಂಚೆ ಸಾಗಣೆ ಮೂಲಕ ನಡೆಯುವ ರಫ್ತಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಗಳನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಜನವರಿ 15ರಿಂದ ಈ ಕ್ರಮ ಜಾರಿಗೆ ಬಂದಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರ ಮಂಡಳಿ (CBIC), ಅಂಚೆ ವಿಧಾನದ ಮೂಲಕ ಎಲೆಕ್ಟ್ರಾನಿಕ್ ರೂಪದಲ್ಲಿ ನಡೆಯುವ ರಫ್ತಿಗೆ ಸುಂಕದ ಕೊರತೆ ಮತ್ತು ತೆರಿಗೆಗಳ ವಿನಾಯಿತಿ ಯೋಜನೆ (RoDTEP) ಹಾಗೂ ವಸ್ತ್ರ ವಲಯಕ್ಕೆ ಸಂಬಂಧಿಸಿದ ರಾಜ್ಯ ಮತ್ತು ಕೇಂದ್ರ ತೆರಿಗೆಗಳ ರಿಯಾಯಿತಿ ಯೋಜನೆ (RoSCTL) ಅಡಿಯಲ್ಲಿ ರಫ್ತು ಪ್ರಯೋಜನಗಳನ್ನು ಅನ್ವಯಿಸುವಂತೆ ಆದೇಶಿಸಿದೆ.

ಈ ಕ್ರಮದಿಂದ MSME ರಫ್ತುದಾರರ ಸ್ಪರ್ಧಾತ್ಮಕತೆ ಹೆಚ್ಚಾಗಲಿದೆ. ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ದೂರದ ಪ್ರದೇಶಗಳಲ್ಲಿರುವ ಉದ್ಯಮಿಗಳಿಗೆ ಇದು ಹೆಚ್ಚಿನ ಲಾಭ ನೀಡಲಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಂಚೆ ಮಾರ್ಗವನ್ನು ಬಳಸುವ ರಫ್ತುದಾರರಿಗೆ ಸಮಾನ ಅವಕಾಶಗಳನ್ನು ಒದಗಿಸುವುದರೊಂದಿಗೆ ಗಡಿಯಾಚೆಗಿನ ಇ-ವಾಣಿಜ್ಯ ವಿಸ್ತರಣೆಗೆ ಅನುಕೂಲಕರ ವಾತಾವರಣ ನಿರ್ಮಿಸುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಹೇಳಲಾಗಿದೆ.

ಪ್ರಸ್ತುತ 1962ರ ಕಸ್ಟಮ್ಸ್ ಕಾಯ್ದೆಯ ಸೆಕ್ಷನ್–7ರ ಅಡಿಯಲ್ಲಿ ಅಧಿಸೂಚಿಸಲಾದ 28 ವಿದೇಶಿ ಅಂಚೆ ಕಚೇರಿಗಳು (Foreign Post Offices) ದೇಶದಲ್ಲಿವೆ. ಅಂಚೆ ಮತ್ತು ಕೊರಿಯರ್ ಮಾರ್ಗದ ಮೂಲಕ ರಫ್ತು–ಆಮದು ವ್ಯಾಪಾರವನ್ನು ಸುಗಮಗೊಳಿಸಲು CBIC ಈಗಾಗಲೇ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ.

2022ರಲ್ಲಿ ಜಾರಿಗೆ ಬಂದ ಅಂಚೆ ರಫ್ತು (ಎಲೆಕ್ಟ್ರಾನಿಕ್ ಘೋಷಣೆ ಮತ್ತು ಸಂಸ್ಕರಣೆ) ನಿಯಮಗಳು ರಫ್ತು ಘೋಷಣೆಗಳನ್ನು ಸಂಪೂರ್ಣವಾಗಿ ಡಿಜಿಟಲ್ ಪ್ರಕ್ರಿಯೆಯಲ್ಲಿ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿವೆ. 2025ರಲ್ಲಿ ಅಂಚೆ ಆಮದುಗಳ ಎಲೆಕ್ಟ್ರಾನಿಕ್ ಸಂಸ್ಕರಣೆಗೆ ಸಂಬಂಧಿಸಿದ ಹೊಸ ನಿಯಮಗಳನ್ನೂ ಸರ್ಕಾರ ಸೂಚಿಸಿದೆ. ಇನ್ನು ಅಂಚೆ ರಫ್ತಿಗೆ ಸಂಬಂಧಿಸಿದ IGST ಮರುಪಾವತಿ ವ್ಯವಸ್ಥೆಯನ್ನು 2024ರ ಸೆಪ್ಟೆಂಬರ್‌ನಲ್ಲಿ ಯಾಂತ್ರೀಕೃತಗೊಳಿಸಲಾಗಿದೆ.

ಇ-ಕಾಮರ್ಸ್ ರಫ್ತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕಸ್ಟಮ್ಸ್ ಮಂಡಳಿ ಮತ್ತು ಅಂಚೆ ಇಲಾಖೆಯ ಸಹಯೋಗದಲ್ಲಿ 2022ರ ಡಿಸೆಂಬರ್‌ನಲ್ಲಿ ‘ಹಬ್ ಮತ್ತು ಸ್ಪೋಕ್’ ಮಾದರಿಯನ್ನು ಪರಿಚಯಿಸಲಾಗಿದೆ. ಈ ವ್ಯವಸ್ಥೆಯಡಿ ದೇಶಾದ್ಯಂತ 1,000ಕ್ಕೂ ಹೆಚ್ಚು ಡಾಕ್ ನಿರ್ಯತ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರಫ್ತು ಪಾರ್ಸೆಲ್‌ಗಳ ಬುಕಿಂಗ್, ಒಟ್ಟುಗೂಡಿಸುವಿಕೆ ಮತ್ತು ಸಂಸ್ಕರಣೆಯನ್ನು ಸುಲಭಗೊಳಿಸಲಾಗುತ್ತಿದೆ. ಇದರಿಂದ MSME ಗಳು ಹಾಗೂ ಸಣ್ಣ ರಫ್ತುದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಇ-ಕಾಮರ್ಸ್ ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ ಹಲವು ನೀತಿ ಉಪಕ್ರಮಗಳು, ಡಿಜಿಟಲ್ ಸುಧಾರಣೆಗಳು ಹಾಗೂ ನಿಯಂತ್ರಣ ಕ್ರಮಗಳನ್ನು ಮುಂದುವರಿಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.