ಸಚಿವೆ ಹೆಬ್ಬಾಳ್ಕರ್ ಪಿಎ ಕಿರುಕುಳಕ್ಕೆ ಅಧಿಕಾರಿ ಸಾವು ಪ್ರಕರಣ; ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಇಲ್ಲ ಎಂದು ಪ್ರತಿಪಕ್ಷ ಆಕ್ರೋಶ

ರಾಮನನಗರ: ಸಚಿವೆ ಹೆಬ್ಬಾಳ್ಕರ್ ಪಿಎ ಕಿರುಕುಳಕ್ಕೆ ಬೇಸತ್ತು ಅಧಿಕಾರಿ ಸಾವಿಗೆ ಶರಣಾಗಿದ್ದಾರೆ ಎಂಬ ಪ್ರಕರಣ ಬಗ್ಗೆ ಪ್ರತಿಪಕ್ಷ ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಇಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡದಲ್ಲಿ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ಕೈಗೊಂಡ ಆರ್.ಅಶೋಕ್, ಅಧಿಕಾರಿ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕಿರುಕುಳ ತಾಳಲಾರದೆ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಂಡರು. ಇದೇ ರೀತಿ ಬೆಳಗಾವಿಯ ಸರ್ಕಾರಿ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಸರ್ಕಾರಿ ಕಚೇರಿಗಳಲ್ಲಿ ಇಲ್ಲ. ಹಣ ನೀಡಿದರೆ ಮಾತ್ರ ಇಲ್ಲಿ ಬದುಕಲು ಸಾಧ್ಯ ಎಂದು ಟೀಕಿಸಿದರು.

ಏನೇ ಕೇಳಿದರೂ ಎಸ್‌ಐಟಿ ರಚನೆ ಎಂದು ಹೇಳುತ್ತಾರೆ. ಯಾರು ಸತ್ತರೂ ಎಸ್‌ಐಟಿ ರಚನೆ ಮಾಡುತ್ತಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರ ಪಿಎ ಸೋಮು ಅವರಿಂದಾಗಿ ಅಧಿಕಾರಿ ಸತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಇದಕ್ಕಾಗಿ ಎಸ್‌ಐಟಿ ರಚನೆ ಮಾಡಲಿ. ಅಧಿಕಾರಿಗಳು ಯಾಕೆ ಸಾಯುತ್ತಿದ್ದಾರೆ, ಯಾರು ಎಷ್ಟು ಲಂಚ ಕೇಳುತ್ತಿದ್ದಾರೆ ಎಂದು ಜನರಿಗೆ ತಿಳಿಯಲಿ. . ಸರ್ಕಾರದ ಬಂಡವಾಳ ಬಯಲಾಗಲು ಎಸ್‌ಐಟಿ ಬೇಕಿದೆ ಎಂದು ಅಶೋಕ್ ಪ್ರತಿಪಾದಿಸಿದರು.

ಅಧಿಕಾರಿಗಳು ಭಯಕ್ಕೊಳಗಾದರೆ ವಸೂಲಿ ಇನ್ನಷ್ಟು ಹೆಚ್ಚಾಗುತ್ತದೆ. ಯಾರೂ ಧೈರ್ಯ ಕಳೆದುಕೊಳ್ಳಬಾರದು ಎಂದು ಅಶೋಕ್ ಹೇಳಿದರು. ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿದೆ ಎಂಬ ಪತ್ರ ರಾಜ್ಯಪಾಲರಿಗೆ ಬಂದಿದೆ. ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಈ ಉಪಚುನಾವಣೆಯಲ್ಲಿ ಜನರು ಈ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು ಎಂದರು.

ಲೋಕಾಯುಕ್ತದಿಂದ ಸಿದ್ದರಾಮಯ್ಯನವರ ಪತ್ನಿಗೆ ನೋಟಿಸ್‌ ನೀಡಲಾಗಿದೆ. ಮೊದಲಿಗೆ ಆರೋಪಿ 1 ಗೆ ನೋಟಿಸ್‌ ನೀಡಬೇಕಿತ್ತು. ಇವೆಲ್ಲವೂ ಒಂದು ನಾಟಕ. ಇದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ದೂರುದಾರರು ಅಪೀಲು ಮಾಡಿದ್ದಾರೆ. ಆರೋಪಿ 2 ಗೆ ಮೊದಲಿಗೆ ನೋಟಿಸ್‌ ನೀಡಿದ್ದು ಏಕೆಂದು ನಮಗೂ ಅರ್ಥವಾಗುತ್ತಿಲ್ಲ ಎಂದು ಅಶೋಕ್ ಹೇಳಿದರು.