ಪೊಳಲಿ ‘ಫಲ್ಗುಣಿ ಸೇತುವೆ’ ಸಮಸ್ಯೆಗೆ ಮುಕ್ತಿ ಎಂದು? ಸರ್ಕಾರವನ್ನು ಎಚ್ಚರಿಸಲು ಹೋರಾಟದ ಅಸ್ತ್ರ.. ಮಂಗಳವಾರ ಭಾರೀ ಪ್ರತಿಭಟನೆಗೆ ಕರೆ

ಮಂಗಳೂರು: ಪುರಾಣ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಫಾಲ್ಗುಣಿ ಸೇತುವೆ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ. ರಾಜ್ಯ ಸರ್ಕಾರದ ತಾತ್ಸಾರ ವಿರುದ್ದ ಸಾರ್ವಜನಿಕರು ಸಿಡಿದೆದ್ದಾರೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಅಡ್ಡೂರು-ಪೊಳಲಿ ನಡುವೆ ಸಂಪರ್ಕ ಕಲ್ಪಿಸಿರುವ ಫಲ್ಗುಣಿ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಘನ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಘನವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದನ್ನು ಬಿಟ್ಟರೆ, ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಊರ ಜನರ ಆಕ್ರೋಶ. ಇದೀಗ ಸರ್ಕಾರವನ್ನು ಹಾಗೂ ಅಧಿಕಾರಿಗಳನ್ನು ಎಚ್ಚರಿಸಲು ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಈ ಸಂಬಂಧ ಪೊಳಲಿಯಲ್ಲಿ ನಡೆದ ವಿವಿಧ ಸಂಘಟನೆಗಳ ಪ್ರಮುಖರ ಸಭೆ ವಿದ್ಯಮಾನಗಳ ಕೇಂದ್ರಬಿಂದುವಾಯಿತು.‌

ಪೊಳಲಿ–ಅಡ್ಡೂರಿನ ಪಲ್ಗುಣಿ ನದಿಯ ಸೇತುವೆ ಬಿರುಕು ಬಿಟ್ಟ ಕಾರಣಕ್ಕೆ ಘನ ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು. ಸಂಬಂಧಪಟ್ಟ ಇಲಾಖೆ ಸೇತುವೆಯ ಸಾಮರ್ಥ್ಯವನ್ನು ಯಂತ್ರ ಮೂಲಕ ಪರಿಶೀಲನೆ ನಡೆಸಿ ಎರಡು ತಿಂಗಳಾದ್ರೂ ಏನಾಗಿದೆ ಎಂಬ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಇದರಿಂದ ತೊಂದರೆಗೆ ಒಳಗಾಗಿರುವ ಅಮ್ಮುಂಜೆ , ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಮತ್ತು ಸುತ್ತಮುತ್ತಲಿನ ಜನರ ಉಪಸ್ಥಿತಿಯಲ್ಲಿ ಭಾನುವಾರ ಸಭೆ ನಡೆದಿದೆ.

ಜನರ ಸಮಸ್ಯೆಗೆ ಸ್ಪಂದಿಸ ಸರ್ಕಾರದ ಹಾಗೂ ಅಧಿಕಾರಿಗಳ ನಿಲುವು ಖಂಡಿಸಿ ಅಕ್ಟೋಬರ್ 15 ರಂದು ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪೊಳಲಿಯ ರಾಮಕೃಷ್ಣ ತಪೋವನ ರಾಜರಾಜೇಶ್ವರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯನಂದ ಸ್ವಾಮೀಜಿ , ಪೊಳಲಿ ಅಡ್ಡೂರು ಫಲ್ಗುಣಿ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ್ ನಾವಡ, ಚಂದ್ರಹಾಸ್ ಪಲ್ಲಿಪಾಡಿ, ಜಯರಾಮಕೃಷ್ಣ ಪೊಳಲಿ, ನೂಯಿ ಬಾಲಕೃಷ್ಣ ರಾವ್, ಅಬೂಬಕ್ಕರ್ ಅಮ್ಮುಂಜೆ ಸಹಿತ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು. ಹೋರಾಟ ಯಶಸ್ವಿಗಾಗಿ ಸಾರ್ವಜನಿಕರ ಬೆಂಬಲ ಕೋರಿದರು.