Saturday, December 6

‘ವಿಶ್ವಶಾಂತಿ’ಯೇ ಫ್ರಾನ್ಸಿಸ್ ಮಂತ್ರ..! ‘ನಾರಾಯಣಗುರುಗಳ ಸಂದೇಶ ಪ್ರಸ್ತುತ’ ಎಂದು ಪೋಪ್ ಪ್ರತಿಪಾದಿಸಿದ್ದರು

ಮಂಗಳೂರು: ‘ವಿಶ್ವಶಾಂತಿ’ಯೇ ಪೋಪ್ ಫ್ರಾನ್ಸಿಸ್ ಅವರ ಮಂತ್ರವಾಗಿತ್ತು. ಅವರು ‘ನಾರಾಯಣಗುರುಗಳ ಸಂದೇಶ ಪ್ರಸ್ತುತ’ ಎಂದು ಪ್ರತಿಪಾದಿಸಿದ್ದರು ಎಂದು ಬಿಲ್ಲವ ಸಮುದಾಯದ ಮುಖಂಡರೂ ಆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ ಸ್ಮರಿಸಿದ್ದಾರೆ.

ಪೋಪ್ ಫ್ರಾನ್ಸಿಸ್ ನಿಧನಕ್ಕೆ ಶೋಕ ವ್ಯಕ್ತ ಪಡಿಸಿರುವ ಪದ್ಮರಾಜ್, ಕ್ರೈಸ್ತ ಸಮುದಾಯದ ಪ್ರಭಾವಿ ಧರ್ಮಗುರು ಹಾಗೂ ರೋಮನ್ ಕೆಥೊಲಿಕ್ ಚರ್ಚ್ ಮುಖ್ಯಸ್ಥರೂ ಆಗಿರುವ ಪೋಪ್ ಫ್ರಾನ್ಸಿಸ್ ಅವರು ವಿಶ್ವ ಶಾಂತಿಗಾಗಿ ನೀಡಿರುವ ಕೊಡುಗೆ ಅಪಾರ ಎಂದು ಬಣ್ಣಿಸಿದ್ದಾರೆ.


ವ್ಯಾಟಿಕನ್ ನಗರದ ಶಿವಗಿರಿ ಮಠದಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಭೆಯಲ್ಲಿ ಪೋಪ್ ಅವರು ತಮ್ಮ ಆಶೀರ್ವಚನದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳನ್ನು ಸ್ಮರಿಸಿದ್ದರು. ರಾಷ್ಟ್ರಗಳು ಮತ್ತು ವ್ಯಕ್ತಿಗಳ ನಡುವೆ ಅಸಹಿಷ್ಣುತೆ ಮತ್ತು ದ್ವೇಷ ಹೆಚ್ಚುತ್ತಿರುವ ಈ ಕಾಲದಲ್ಲಿ ಗುರುಗಳ ಸಂದೇಶವು ಬಹಳ ಪ್ರಸ್ತುತ. ಪ್ರತಿಯೊಬ್ಬ ಮಾನವರೂ ಒಂದೇ ಕುಟುಂಬ ಎಂದು ಪ್ರತಿಪಾದಿಸಿದ ಸಂತರಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಅಗ್ರಸ್ಥಾನದಲ್ಲಿ ಬರುತ್ತಾರೆ ಎಂದು ಪ್ರತಿಪಾದಿಸಿದ್ದರು. ಈ ಪ್ರಪಂಚದಲ್ಲಿ ಎಲ್ಲರೂ ಸಹೋದರರು ಎಂದು ಅಭಿಪ್ರಾಯ ಪಟ್ಟಿದ್ದರು ಎಂದು ನೆನಪಿಸಿದ್ದಾರೆ.

ವಿಶ್ವಗುರುವಾಗಿ ಅವರು ಕಳೆದ ಹನ್ನೆರಡು ವರ್ಷಗಳಲ್ಲಿ ಅನೇಕ ಸುಧಾರಣೆಗಳನ್ನು ಕೈಗೊಂಡಿದ್ದರು. ಈ ಧರ್ಮಗುರುವಿನ ನಿಧನದಿಂದ ಶೋಕಸಾಗರದಲ್ಲಿ ಮುಳುಗಿರುವ ಎಲ್ಲರಿಗೂ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೋಶಾಧಿಕಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ದ ಕೋಶಾಧಿಕಾರಿಯೂ ಆದ ಪದ್ಮರಾಜ್ ಆರ್. ಪೂಜಾರಿ ಪ್ರಾರ್ಥಿಸಿದ್ದಾರೆ.