“ಪವಿತ್ರ ತೀರ್ಥೋದ್ಭವ” ಹಿನ್ನೆಲೆ; ತಲಕಾವೇರಿ ಜಾತ್ರೆಗೆ ಸರ್ಕಾರದಿಂದ 75 ಲಕ್ಷ ರೂ ಬಿಡುಗಡೆ

ಬೆಂಗಳೂರು: ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ”, ತಲಕಾವೇರಿ ಜಾತ್ರೆಗೆ ರೂ.75 ಲಕ್ಷ ರೂಪಾಯಿ ಹಣವನ್ನು ಧಾರ್ಮಿಕ ದತ್ತಿ ಇಲಾಖೆ ಬಿಡುಗಡೆ ಮಾಡಿದೆ. ಮುಜರಾಯಿ ಸಚಿವ  ರಾಮಲಿಂಗಾ ರೆಡ್ಡಿ ಅವರ ಆದೇಶದಂತೆ ಈ ಹಣ ಬಿಡುಗಡೆ ಮಾಡಲಾಗಿದೆ.

ಕೊಡಗು ಜಿಲ್ಲೆ, ‌ಮಡಿಕೇರಿ ತಾಲ್ಲೂಕು, ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಸ್ಥಾನದಲ್ಲಿ ಪ್ರತಿ ವರ್ಷದ ರೂಢಿ ಸಂಪ್ರದಾಯದಂತೆ ಈ ವರ್ಷ:17.10.2024 ರಂದು “ಶ್ರೀ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ” ಜಾತ್ರೆಯು ನಡೆಯಲಿದೆ. ಕಳೆದ ವರ್ಷದಿಂದ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅನುದಾನ ನೀಡಲಾಗುತ್ತಿದೆ. ಸದರಿ ಜಾತ್ರಾ ಮಹೋತ್ಸವಕ್ಕೆ ಈ ಹಿಂದೆ ಎಂದೂ ಕೂಡ ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿರುವುದಿಲ್ಲ.

ಕೊಡಗು ಜಿಲ್ಲೆಯ ಶಾಸಕರಾದ ಡಾ. ಮಂಥರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರು ತಲಕಾವೇರಿ ಜಾತ್ರೆಗೆ ಹಣ ಬಿಡುಗಡೆ ಮಾಡಿ ವ್ಯವಸ್ಥಿತ ಜಾತ್ರೆ ನಡೆಸಲು ಹಾಗೂ ಆಗಮಿಸುವ ಭಕ್ತಾಧಿಗಳಿಗೆ ಸಮಗ್ರ ಸೌಲಭ್ಯ ಕಲ್ಪಿಸಲು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಲ್ಲಿ ಮನವಿ ಮಾಡಿದ್ದರು. ಅದರಂತೆ ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಅನುಕೂಲವಾಗುವಂತೆ ಸಾರಿಗೆ ಹಾಗೂ ಮುಜರಾಯಿ ಸಚಿವರು ರೂ.75.00 ಲಕ್ಷಗಳ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದು ಮುಜರಾಯಿ ಇಲಾಖೆಯ ಮೂಲಗಳು ತಿಳಿಸಿವೆ.

ಕಳೆದ ವರ್ಷ ‌ಕೂಡ ಸದರಿ‌ ಜಾತ್ರಾ ಮಹೋತ್ಸವಕ್ಕೆ ರೂ.80 ಲಕ್ಷ ಅನುದಾನವನ್ನು ಸಚಿವರು ಬಿಡುಗಡೆ ಮಾಡಿದ್ದರು. ಈ ಬಾರಿಯೂ ಸರ್ಕಾರ ಸಕಾಲದಲ್ಲೇ ಹಣಬಿಡುಗಡೆ ಮಾಡಿರುವ ಬಗ್ಗೆ ಕಾವೇರಿ ತವರಿನ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.‌