
ಬೆಂಗಳೂರು: ಕರ್ನಾಟಕದಲ್ಲಿ ಸುವರ್ಣ ಮಹೋತ್ಸವ ಆಚರಿಸಿರುವ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಜಿಡಿಸಿಆರ್‌ಐ)ಯ ಆಧುನೀಕರಣಕ್ಕೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಶಿಲಾನ್ಯಾಸ ನೆರವೇರಿಸಿದರು.
ರಾಜ್ಯ ಸಚಿವ ಸಂಪುಟದಿಂದ ಮಂಜೂರಾದ ರೂ. 40 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ನಂತರ ಮಾತನಾಡಿದ ಡಾ. ಶರಣಪ್ರಕಾಶ್ ಆರ್. ಪಾಟೀಲ್, “ಈ ಆಧುನೀಕರಣವು ಪ್ರತಿಷ್ಠಿತ ದಂತ ಕಾಲೇಜಿನ ಶ್ರೀಮಂತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು, ವಿಶ್ವ ದರ್ಜೆ ಸೌಲಭ್ಯಗಳನ್ನು ಒದಗಿಸುವುದು, ಕರ್ನಾಟಕದ ಎಲ್ಲಾ ನಾಗರಿಕರಿಗೆ ಉನ್ನತ ಮಟ್ಟದ ದಂತ ಆರೋಗ್ಯವನ್ನು ಒದಗಿಸುವುದು ನಮ್ಮ ಸರ್ಕಾರದ ಮುಖ್ಯ ಗುರಿ ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, “ಇಂತಹ ಯೋಜನೆಗಳಿಗೆ ಹೂಡಿಕೆ ಮಾಡುವ ಮೂಲಕ, ವೈದ್ಯಕೀಯ ಶ್ರೇಷ್ಠತೆ ಮತ್ತು ಕೌಶಲ್ಯ ಅಭಿವೃದ್ಧಿಯ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ನಾವು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತೇವೆ” ಎಂದು ಹೇಳಿದರು.
ದಂತ ಕೇಂದ್ರದ ಮುಂಭಾಗದಲ್ಲಿರುವ ಸಾಂಪ್ರದಾಯಿಕ ಕಲ್ಲಿನ ವಾಸ್ತುಶಿಲ್ಪವನ್ನು ಸಂರಕ್ಷಿಸುವುದರೊಂದಿಗೆ ಐಷಾರಾಮಿ ಆಧುನಿಕ ಒಳಾಂಗಣಗಳು, ಅತ್ಯಾಧುನಿಕ ಕ್ಲಿನಿಕಲ್ ಕೊಠಡಿಗಳು ಮತ್ತು ಅತ್ಯಾಧುನಿಕ ಉಪಕರಣಗಳೊಂದಿಗೆ ಹೆಚ್ಚಿನ ಸೌಲಭ್ಯ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಮೂರು ಅಂತಸ್ತಿನ ಕ್ಲಿನಿಕಲ್ ಸಂಕೀರ್ಣ ಮರು ಅಭಿವೃದ್ಧಿಪಡಿಸಲಾಗುವುದು, ವಿಶೇಷ ಚಿಕಿತ್ಸಾಲಯಗಳು ಮತ್ತು ವಿಶೇಷ ಆರೋಗ್ಯ ಕ್ಲಬ್‌ನೊಂದಿಗೆ ಚಾವಣಿಯ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಮತ್ತು ಜಿಡಿಸಿಆರ್‌ಐ ನಿರ್ದೇಶಕ ಡಾ. ಗಿರೀಶ್ ಬಿ. ಗಿರಡ್ಡಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.
