Saturday, December 6

ಬಿಜೆಪಿಯಲ್ಲಿ ಒಬ್ಬರಾದರೂ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿದ್ದಾರೆಯೇ? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಒಮ್ಮೆಯಾದರೂ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದಿದೆಯೇ? ಬಿಜೆಪಿಯಲ್ಲಿ ಒಬ್ಬರಾದರೂ ಪೂರ್ಣಾವಧಿಯ ಮುಖ್ಯಮಂತ್ರಿಯಾಗಿದ್ದಾರೆಯೇ? ಕುದುರೆ ವ್ಯಾಪಾರವಿಲ್ಲದೆ ಬಿಜೆಪಿ ಸರ್ಕಾರ ರಚಿಸಿದ್ದಿದೆಯೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಬೆಳವಣಿಗೆ ಬಿಜೆಪಿ ನಾಯಕ್ರು ಮಾಡುತ್ತಿರುವ ಟೀಕೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಮೊದಲ ಅವಧಿಯ ಅಧಿಕಾರದಲ್ಲಿ 3 ಮುಖ್ಯಮಂತ್ರಿಗಳನ್ನು ಬದಲಿಸಿ, ಎರಡನೇ ಅಧಿಕಾರಾವಧಿಯಲ್ಲಿ 2 ಮುಖ್ಯಮಂತ್ರಿಗಳನ್ನು ಬದಲಿಸಿದ ಹಾಗೂ ಆಪರೇಷನ್ ಕಮಲವೆಂಬ ಕರ್ನಾಟಕ ರಾಜಕಾರಣದ ಕರಾಳ ಅದ್ಯಾಯವನ್ನು ಆರಂಭಿಸಿದ ಬಿಜೆಪಿ ಪಕ್ಷದವರಿಗೆ ಕಾಂಗ್ರೆಸ್ ಹೆಸರೆತ್ತುವುದಕ್ಕೆ ನೈತಿಕತೆಯೂ ಇಲ್ಲ, ಅರ್ಹತೆಯೂ ಇಲ್ಲ ಎಂದಿದ್ದಾರೆ.

“ಹೈಕಮಾಂಡ್ ಕಪ್ಪ“ದ ಬಗ್ಗೆ ಬಹಳ ಆಸಕ್ತಿಯಿಂದ ಮಾತನಾಡುವ ಬಿಜೆಪಿ, ಯಡಿಯೂರಪ್ಪನವರು ಹೈಕಮಾಂಡಿಗೆ ಎಷ್ಟು ಕಪ್ಪ ಕೊಟ್ಟು ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರು? ಜಗದೀಶ್ ಶೆಟ್ಟರ್, ಸದಾನಂದಗೌಡರು, ಬಸವರಾಜ್ ಬೊಮ್ಮಯಿಯವರು ಎಷ್ಟೆಷ್ಟು ಬಿಡ್ ಕೂಗಿ ಮುಖ್ಯಮಂತ್ರಿಗಳಾದರು ಎಂಬ ಪ್ರಶ್ನೆಗಳಿಗೆ ಉತ್ತರಿಸುವುದೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಈ ಪ್ರಶ್ನೆಗಳು ನಮ್ಮದಲ್ಲ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಎಂಬುದು “ಪೇಮೆಂಟ್ ಸೀಟ್“ ಎಂದು ಯತ್ನಾಳ್ ಅವರೇ ಹೇಳಿದ್ದರು. ಮಂತ್ರಿಗಿರಿಗೆ 70ರಿಂದ 80 ಕೋಟಿ ವಸೂಲಿಯಾಗಿತ್ತು ಎಂಬ ಸತ್ಯವನ್ನೂ ಬಿಜೆಪಿಯವರೇ ಬಹಿರಂಗಪಡಿಸಿದ್ದರು ಎಂದವರು ಬೊಟ್ಟು ಮಾಡಿದ್ದಾರೆ.

ಬಿಜೆಪಿಯವರ ಈ ಎಲ್ಲಾ ವಿಚಾರಗಳು ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿದಿವೆ, ಜನತೆಗೆ ಉತ್ತರಿಸುವ ನೈತಿಕತೆ ತೋರಲಿ ಎಂದವರು ಪ್ರತಿಪಾದಿಸಿದ್ದಾರೆ.