
ಬೆಂಗಳೂರು: ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಆರ್ಟಿಇ (RTE) ಅಡಿಯಲ್ಲಿ ದಾಖಲಾದ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. 2025-26ನೇ ಸಾಲಿನ ಮೊದಲ ಹಾಗೂ ಎರಡನೇ ಕಂತಿನ ಬಾಕಿ ಶುಲ್ಕಕ್ಕಾಗಿ ಆನ್ಲೈನ್ ಮೂಲಕ ಬೇಡಿಕೆ ಸಲ್ಲಿಸಲು ಮಾರ್ಚ್ 31, 2026ರವರೆಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ.
ಈ ಮೊದಲು ಫೆಬ್ರವರಿ 28, 2026ಕ್ಕೆ ಅಂತ್ಯಗೊಂಡಿದ್ದ ಅರ್ಜಿ ಸಲ್ಲಿಕೆ ಗಡುವನ್ನು ಇದೀಗ ಒಂದು ತಿಂಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. 2025-26ನೇ ಸಾಲಿನಲ್ಲಿ ಆರ್ಟಿಇ ಸೀಟುಗಳ ಅಡಿಯಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿರುವ ಎಲ್ಲಾ ಖಾಸಗಿ ಅನುದಾನರಹಿತ ಶಾಲೆಗಳಿಗೆ ಈ ವಿಸ್ತರಣೆ ಅನ್ವಯಿಸುತ್ತದೆ.
ಇದೇ ವೇಳೆ, ಇದು ಅಂತಿಮ ಅವಕಾಶವಾಗಿದ್ದು, ಇದರ ಬಳಿಕ ಯಾವುದೇ ಕಾರಣಕ್ಕೂ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಈಗಾಗಲೇ ಮೊದಲ ಕಂತಿನ ಬೇಡಿಕೆ ಸಲ್ಲಿಸದ ಶಾಲೆಗಳು ಹಾಗೂ ಎರಡನೇ ಕಂತಿನ ಮರುಪಾವತಿ ನಿರೀಕ್ಷೆಯಲ್ಲಿರುವ ಶಾಲೆಗಳು ತಂತ್ರಾಂಶದ ಮೂಲಕ ತಕ್ಷಣ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಉಪನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಶಾಲೆಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಶಾಲೆಗಳು ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ವಿಫಲವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
