Sunday, February 22

ಚಿಲಕೂರು ಸುರಂಗ: ಚಿತ್ತ ಸೆಳೆವ ‘ಶ್ರೀ ನಾರಾಯಣ ಗುರು’ ದೃಶ್ಯ ರೂಪ

ತಿರುವನಂತಪುರಂ: ಒಳನಾಡಿನ ಸಂಚರಣೆಯನ್ನು ಪುನರುಜ್ಜೀವನಗೊಳಿಸುವ ಹಾಗೂ ಜಲಆಧಾರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವರ್ಕಲಾದ ಐತಿಹಾಸಿಕ ಚಿಲಕೂರು ಸುರಂಗ ಮಾರ್ಗ ನವೀಕರಿಸಲಾಗಿದೆ. ಅಕ್ಕುಳಮ್–ಚೆಟ್ಟುವ ಜಲಮಾರ್ಗ ಯೋಜನೆಯ ಭಾಗವಾದ ಈ ಸುರಂಗ ಮಾರ್ಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.

ಇದು ಕೇರಳದ ಒಳನಾಡಿನ ಜಲಮಾರ್ಗಗಳ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಸರ್ಕಾರ ತಿಳಿಸಿದೆ.

ಹಿಂದಿನ ತಿರುವಾಂಕೂರು ಕಾಲಘಟ್ಟದಲ್ಲಿ ನಿರ್ಮಿಸಲಾದ ಸುಮಾರು 350 ಮೀಟರ್ ಉದ್ದದ ಈ ಸುರಂಗ ಮಾರ್ಗ ದಕ್ಷಿಣ ಕೇರಳದ ಭಾಗಗಳಲ್ಲಿ ಪ್ರಯಾಣಿಕರು ಹಾಗೂ ಸರಕು ಸಾಗಣೆಗೆ ಪ್ರಮುಖ ಒಳನಾಡು ಮಾರ್ಗವಾಗಿತ್ತು. ಈಗ ಅದನ್ನು ಪುನಃ ಸಂಚಾರಯೋಗ್ಯ ಸ್ಥಿತಿಗೆ ತರಲಾಗಿದ್ದು, ಕಾರ್ಯನಿರ್ವಹಣೆಯ ಜಲಮಾರ್ಗ ಹಾಗೂ ಪ್ರವಾಸೋದ್ಯಮ ಆಕರ್ಷಣೆಯಾಗಿ ಗಮನಸೆಳೆದಿದೆ.

ನವೀಕರಣ ಕಾಮಗಾರಿಯನ್ನು ಕೇರಳ ಸರ್ಕಾರ ಮತ್ತು ಕೊಚ್ಚಿನ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (CIAL) ಸಂಯುಕ್ತ ಸಂಸ್ಥೆಯಾದ ಕೇರಳ ವಾಟರ್ವೇಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕೈಗೊಂಡಿದೆ. ಸುರಂಗದ ಐತಿಹಾಸಿಕ ಸ್ವರೂಪವನ್ನು ಕಾಪಾಡಿಕೊಳ್ಳುವಂತೆ ಎಚ್ಚರಿಕೆಯಿಂದ ಪುನಃಸ್ಥಾಪನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಘಾಟನೆ ಸಂದರ್ಭದಲ್ಲಿ ಸುರಂಗದೊಳಗೆ ಬೆಳಕು–ಧ್ವನಿ ಪ್ರದರ್ಶನ ಹಾಗೂ ವಿದ್ಯುತ್ ದೋಣಿ ಸವಾರಿಯನ್ನು ಪರಿಚಯಿಸಲಾಗಿದೆ. ಸುಮಾರು ₹4.5 ಕೋಟಿ ವೆಚ್ಚದಲ್ಲಿ ರೂಪುಗೊಂಡ ಈ ಪ್ರದರ್ಶನವು ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಜೀವನ ಹಾಗೂ ವರ್ಕಲಾದೊಂದಿಗೆ ಅವರ ಸಂಬಂಧವನ್ನು ದೃಶ್ಯ ರೂಪದಲ್ಲಿ ಪರಿಚಯಿಸುತ್ತದೆ.

ಸುಧಾರಿತ ಪ್ರೊಜೆಕ್ಷನ್ ಮತ್ತು ಮ್ಯಾಪಿಂಗ್ ತಂತ್ರಜ್ಞಾನ ಬಳಸಿ ಸುರಂಗದೊಳಗೆ ತಲ್ಲೀನಗೊಳಿಸುವ ಅನುಭವ ಒದಗಿಸಲಾಗುತ್ತದೆ. ಪ್ರವಾಸಿಗರು ಕೊಚ್ಚಿ ಮೂಲದ ಸ್ಟಾರ್ಟ್‌ಅಪ್ ವಿನ್ಯಾಸಗೊಳಿಸಿದ 20 ಆಸನಗಳ ವಿದ್ಯುತ್ ದೋಣಿಯಲ್ಲಿ ಸುರಂಗದ ಮೂಲಕ ಸಂಚರಿಸಲಿದ್ದಾರೆ. ಬ್ಯಾಟರಿ ಶಕ್ತಿಯಿಂದ ಕಾರ್ಯನಿರ್ವಹಿಸುವ ಈ ದೋಣಿಗಳು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿವೆ.

ಯೋಜನೆಯ ಭಾಗವಾಗಿ ದೋಣಿ ಜೆಟ್ಟಿ ಹಾಗೂ ಬೀಚ್ ಪಾರ್ಕ್ ಪ್ರದೇಶದಲ್ಲೂ ಪೂರಕ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಸುಮಾರು 280 ಕಿಮೀ ವ್ಯಾಪ್ತಿಯ ಅಕ್ಕುಳಮ್–ಚೆಟ್ಟುವ ಜಲಮಾರ್ಗವು ಪಶ್ಚಿಮ ಕರಾವಳಿ ಕಾಲುವೆ ನವೀಕರಣ ಯೋಜನೆಯ ಪ್ರಮುಖ ಭಾಗವಾಗಿದ್ದು, ಪ್ರವಾಸೋದ್ಯಮದ ಜೊತೆಗೆ ಒಳನಾಡು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿಗೂ ಸಹಾಯಕವಾಗಲಿದೆ ಎಂದು ಸರ್ಕಾರ ತಿಳಿಸಿದೆ.