ಯಾದಗಿರಿ ಪಿಎಸ್​ಐ ಪರಶುರಾಮ್ ಅನುಮಾನಸ್ಪದ ಸಾವು; ಪ್ರಭಾವಿ ಶಾಸಕರ ಕೈವಾಡ ದಲಿತ ಸಂಘಟನೆಗಳ ಆಕ್ರೋಶ

ಯಾದಗಿರಿ: ಸೈಬರ್ ಕ್ರೈಮ್ ಠಾಣೆಯ ಪಿಎಸ್​ಐ ಪರಶುರಾಮ (34) ಎಂಬವರು ಶುಕ್ರವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಪ್ರಭಾವಿಗಳಿಂದ ಹಣಕ್ಕಾಗಿ ಒತ್ತಡ ಹೇರಲಾಗಿದ್ದು ಇದರಿಂದ ನೊಂದಿದ್ದ ಪಿಎಸ್​ಐ ಪರಶುರಾಮ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪಿಎಸ್​ಐ ಪರಶುರಾಮ

ಕಳೆದ ಮೂರು ವರ್ಷಗಳಿಂದ ಯಾದಗಿರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು ತಮ್ಮ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪಿಎಸ್​ಐ ಪರಶುರಾಮ ಪತ್ನಿ ಶ್ವೇತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪಿಎಸ್​ಐ ಸಾವಿಗೆ ಕಾಂಗ್ರೆಸ್​ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಪುತ್ರ ಪಂಪಣ್ಣಗೌಡ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಪಿಎಸ್​ಐ ಪರಶುರಾಮ ಅವರು ಯಾದಗಿರಿ ನಗರ ಠಾಣೆಗೆ ವರ್ಗಾವಣೆಗಾಗಿ ಸ್ಥಳೀಯ ನಾಯಕರು 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 30 ಲಕ್ಷ ರೂ. ನೀಡಿ ವರ್ಗಾವಣೆಯಾಗಿದ್ದರು. ಆದರೆ, ಒಂದು ವರ್ಷದೊಳಗೆ ಅವರನ್ನು ಯಾದಗಿರಿ ಸೈಬರ್​ ಕ್ರೈಮ್​ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಪಿಎಸ್​ಐ ಪರಶುರಾಮ್ ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ.

ಈ ನಡುವೆ, ಪಿಎಸ್​ಐ ಸಾವಿಗೆ ಕಾರಣರಾಗಿರುವ ಶಾಸಕ ಚನ್ನಾರೆಡ್ಡಿ ಪಾಟೀಲ್​ಆವರನ್ನು ಬಂಧಿಸುವಂತೆ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.