Wednesday, June 25

ಭಾರತದಲ್ಲಿ HMPV ಸೋಂಕು ಬಗ್ಗೆ ಸದ್ಯಕ್ಕೆ ಆತಂಕ ಇಲ್ಲ, ಆದರೆ ಮುನ್ನೆಚ್ಚರಿಕೆ ಅಗತ್ಯ

ನವದೆಹಲಿ: ಚೀನಾದಲ್ಲಿ ತಲ್ಲಣ ಸೃಷ್ಟಿಸಿರುವ ಹೆಚ್ಎಂಪಿವಿ ಸೋಂಕು ಬಗ್ಗೆ ಭಾರತದಲ್ಲಿ ಆತಂಕವಿಲ್ಲ ಎಂದು ಸರ್ಕಾರ ಹೇಳಿದೆ. ಚೀನಾದಲ್ಲಿ ಹೆಚ್ಎಂಪಿವಿ ಸೋಂಕು ವ್ಯಾಪಕವಾಗಿದ್ದು, ಇದರ ಹಿನ್ನೆಲೆಯಲ್ಲಿ ಭಾರತದಲ್ಲೂ ಉಸಿರಾಟ ಸಂಬಂಧಿ ಆರೋಗ್ಯ ಸಮಸ್ಯೆಗಳ ಮೇಲೆ ನಿಗಾ ವಹಿಸಲಾಗಿದೆ. ಆದರೆ, ಸದ್ಯಕ್ಕೆ ಭಾರತದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶಕರಾದ ಡಾ.ಅತುಲ್ ಗೋಯಲ್ ತಿಳಿಸಿದ್ದಾರೆ.

ಹೆಚ್ಎಂಪಿವಿ ವೈರಸ್ ಶೀತದಂತಹ ಲಕ್ಷಣಗಳನ್ನು ಹೊಂದಿದ್ದು, ಮಕ್ಕಳು ಹಾಗೂ ವೃದ್ಧರಲ್ಲಿ ಜ್ವರ ಕಾಣಿಸಿಕೊಳ್ಳಬಹುದು ಎಂದಿರುವ ಅವರು, ಭಾರತದಲ್ಲಿ 2024ರ ಡಿಸೆಂಬರ್ ನಲ್ಲಿ ಉಸಿರಾಟ ಸಂಬಂಧಿ ಸಮಸ್ಯೆಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗಿಲ್ಲ ಎಂದಿದ್ದಾರೆ. ಹೀಗಿರುವಾಗ ಹೆಚ್ಎಂಪಿವಿ ಸೋಂಕು ಬಗ್ಗೆ ಆತಂಕ ಪಡಬೇಕಿಲ್ಲ. ಒಂದೊಮ್ಮೆ ಸಮಸ್ಯೆ ಉಲ್ಬಣಿಸಿದರೂ ನಮ್ಮ ಆಸ್ಪತ್ರೆಗಳಲ್ಲಿ ಅದಕ್ಕೆ ಬೇಕಾದಷ್ಟು ವ್ಯವಸ್ಥೆಗಳು ಲಭ್ಯವಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಡಾ.ಅತುಲ್ ಗೋಯಲ್ ಅವರು ಸಲಹೆ ನೀಡಿದ್ದಾರೆ.