
ಬೆಂಗಳೂರು: ಕೋಗಿಲು ಬಡಾವಣೆಯ ಅಕ್ರಮ ಒತ್ತುವರಿದಾರರಿಗೆ ಪುನರ್ವಸತಿ ನೀಡುವುದೇ ರಾಜ್ಯ ಸರ್ಕಾರದ ನೀತಿಯಾದರೆ, ರಾಜ್ಯದಾದ್ಯಂತ ತೆರವುಗೊಂಡ ಎಲ್ಲಾ ಒತ್ತುವರಿಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆಯೇ? ಎಂದು ಪ್ರತಿಪಕ್ಷ ಬಿಜೆಪಿ ಪ್ರಶ್ನಿಸಿದೆ.
ರಾಜಕಾಲುವೆ ನುಂಗಿದ ಪ್ರಭಾವಿ ಬಿಲ್ಡರ್ಗಳ ಮೇಲೂ ಇದೇ ‘ಮಾನವೀಯತೆ’ ತೋರುತ್ತೀರಾ? ಮನೆ ಕಳೆದುಕೊಂಡು ಬೀದಿಗೆ ಬಿದ್ದ ಸಾವಿರಾರು ಬಡ ಕನ್ನಡಿಗರಿಗಿಲ್ಲದ ನ್ಯಾಯ, ವಲಸಿಗರಿಗೆ ಮಾತ್ರವೇಕೆ? ಎಂದು ಬಿಜೆಪಿ ಮಾಧ್ಯಮದಲ್ಲಿ ಪ್ರಶ್ನೆಗಳ ಸುರಿಮಳೆಗೈದಿದೆ.
ಕನ್ನಡಿಗರ ಹಿತ ಕಾಯಬೇಕಾದ ಸರ್ಕಾರಕ್ಕೆ ನೆರೆಯ ರಾಜ್ಯದವರ ಒತ್ತಡವೇ ದೊಡ್ಡದಾಯಿತೇ? ದಶಕಗಳಿಂದ ಸ್ವಂತ ಸೂರಿಲ್ಲದೆ ಕಾಯುತ್ತಿರುವ ಲಕ್ಷಾಂತರ ಬಡ ಕನ್ನಡಿಗರನ್ನು ಕಡೆಗಣಿಸಿ, ಕಾನೂನುಬಾಹಿರವಾಗಿ ಒತ್ತುವರಿ ಮಾಡಿದವರಿಗೆ ‘ವಿಶೇಷ ಆತಿಥ್ಯ’ ನೀಡುತ್ತಿರುವುದು ನಾಚಿಕೆಗೇಡು ಎಂದಿರುವ ಬಿಜೆಪಿ, ತಕ್ಷಣವೇ ಈ ವಿಶೇಷ ಪುನರ್ವಸತಿ ತೀರ್ಮಾನವನ್ನು ಹಿಂಪಡೆಯಿರಿ. ಕಾನೂನು ಎಲ್ಲರಿಗೂ ಒಂದೇ ಆಗಿರಲಿ ಮತ್ತು ನಮ್ಮ ನೆಲದ ಬಡವರಿಗೆ ವಸತಿ ಯೋಜನೆಗಳಲ್ಲಿ ಮೊದಲ ಆದ್ಯತೆ ಸಿಗಲಿ ಎಂದು ಸಲಹೆ ಮಾಡಿದೆ.
