Saturday, December 6

“ಏಳು ವರ್ಷಗಳ ಹಿಂದೆ ಖರೀದಿಸಿದ ನನ್ನ ಸ್ವಂತ ವಾಚ್”; ದುಬಾರಿ ಕೈಗಡಿಯಾರ ಬಗ್ಗೆ ಡಿಕೆಶಿ ಸ್ಪಷ್ಟನೆ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರಿಸಿರುವ ದುಬಾರಿ ಗಡಿಯಾರಗಳ ಕುರಿತು ಉಂಟಾಗಿರುವ ವಿವಾದಕ್ಕೆ ಡಿಕೇಶಿ ಮಂಗಳೂರಿನಲ್ಲಿ ಬುಧವಾರ ಸ್ಪಷ್ಟನೆ ನೀಡಿದರು.

“ಇದು ನನ್ನ ಸ್ವಂತ ಕೈಗಡಿಯಾರ. ನಾನು ಅದನ್ನು ಏಳು ವರ್ಷಗಳ ಹಿಂದೆ ನನ್ನ ಕ್ರೆಡಿಟ್ ಕಾರ್ಡ್ ಮೂಲಕ 24 ಲಕ್ಷ ರೂ. ನೀಡಿ ಖರೀದಿಸಿದ್ದೇನೆ. ಬೇಕಿದ್ದರೆ ನೀವು ನನ್ನ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನೇ ಪರಿಶೀಲಿಸಬಹುದು. ನನ್ನ ಚುನಾವಣಾ ಪ್ರಮಾಣ ಪತ್ರದಲ್ಲೂ ಈ ವಿವರವನ್ನು ತಿಳಿಸಿದ್ದೇನೆ” ಎಂದು ಉಪಮುಖ್ಯಮಂತ್ರಿ ಹೇಳಿದರು.

ಸಮಾಜವಾದಿ ಮುಖ್ಯಮಂತ್ರಿಯೇ ದುಬಾರಿ ಗಡಿಯಾರ ಧರಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಮುಖ್ಯಮಂತ್ರಿಗಳಿಗೆ ತಮ್ಮ ಇಷ್ಟದ ಗಡಿಯಾರ ಧರಿಸುವ ಹಕ್ಕಿದೆ. ಅದನ್ನು ಖರೀದಿಸುವ ಸಾಮರ್ಥ್ಯವೂ ಅವರಿಗೆ ಇದೆ. ಜನರು ಗಡಿಯಾರಗಳ ಬಗ್ಗೆ ಅನವಶ್ಯಕ ಕುತೂಹಲ ತೋರಿಸುತ್ತಿದ್ದಾರೆ. ನನ್ನ ತಂದೆಗೆ ಏಳು ಗಡಿಯಾರಗಳಿದ್ದವು. ಅವರು ನಿಧನರಾದ ನಂತರ ಅವನ್ನು ಯಾರು ಧರಿಸಬೇಕು? ನಾನು ಅಥವಾ ನನ್ನ ಸಹೋದರ” ಎಂದು ಪ್ರತಿಕ್ರಿಯಿಸಿದರು.