
ಭುವನೇಶ್ವರ: ಒಡಿಶಾದ ಧೆಂಕಾನಾಲ್ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ವೇಳೆ ಭಾರಿ ಭೂ ಕುಸಿತ ಸಂಭವಿಸಿ ಹಲವು ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಧೆಂಕಾನಾಲ್ ಜಿಲ್ಲೆಯ ಮೊಟಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಸಮೀಪ ಶನಿವಾರ ಕಾರ್ಮಿಕರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವೇಳೆ, ದೊಡ್ಡ ಪ್ರಮಾಣದ ಬಂಡೆಗಳು ಏಕಾಏಕಿ ಕುಸಿದು ಬಿದ್ದಿವೆ. ಘಟನೆ ಸಮಯದಲ್ಲಿ ಗಣಿಯಲ್ಲಿ ಹಲವರು ಕಾರ್ಯನಿರತರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಭೂ ಕುಸಿತದ ಮಾಹಿತಿ ದೊರಕಿದ ತಕ್ಷಣ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯ ಮುಂದುವರಿದಿದೆ.
ಘಟನೆಯ ಸಂಪೂರ್ಣ ವಿವರಗಳು ಮತ್ತು ಸಾವಿನ ನಿಖರ ಸಂಖ್ಯೆಯನ್ನು ಅಧಿಕಾರಿಗಳು ಇನ್ನಷ್ಟೇ ದೃಢಪಡಿಸಬೇಕಿದೆ.
