
ಕಲಬುರಗಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಸಾಮಾಜಿಕ ಆರ್ಥಿಕ ಹಾಗೂ ಸಮಾಜಿಕ ನ್ಯಾಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿ ನಗರದ ಪೂಜ್ಯ ಬಸವರಾಜಪ್ಪ ಅಪ್ಪಾ ಸ್ಮರಣಾರ್ಥ ಭವನದಲ್ಲಿ ನಡೆದ 935 ಪಾಲಿಕೆಯ ಪೌರಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಪಾಲಿಕೆಯಿಂದ ನೇರ ವೇತನ ಪಾವತಿ ಆದೇಶ ಪತ್ರ ವಿತರಣೆ, ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಪತ್ರ ಹಾಗೂ ಕ್ರೋಮ್ ಬುಕ್ ವಿತರಣೆ, ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿದ ಅವರು, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವರು ಸಾಂಕೇತಿಕ ವಾಗಿ ನೇಮಕಾತಿ ಪತ್ರ ವಿತರಿಸಿದರು. ಜೊತೆಗೆ ಹೊಲಿಗೆ ಯಂತ್ರ ಹಾಗೂ ತ್ರಿಚಕ್ರ ವಾಹನಗಳ ವಿತರಣೆ ಮಾಡಿದರು.
ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ಸರ್ಕಾರ ಬದ್ಧತೆಯಿಂದಾಗಿ ನಾವು ಇಂದು ನಿಮಗೆಲ್ಲ ನೇಮಕಾತಿ ಆದೇಶ ವಿತರಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಇಲ್ಲಿಂದ ನೀವೆಲ್ಲ ಮಹಾನಗರ ಪಾಲಿಕೆಯ ನೌಕರರಾಗಿರುತ್ತೀರಿ.ಇದು ಅತ್ಯಂತ ಸಂತೋಷದ ಕ್ಷಣವಾಗಿದೆ” ಎಂದು ಸಚಿವರು ಹೇಳಿದರು.
“ಪೌರಕಾರ್ಮಿಕರು ಇದ್ದರೆ ನಗರವೆಲ್ಲ ಸ್ವಚ್ಛತೆಯಿಂದ ಇರಲು ಸಾಧ್ಯವಾಗುತ್ತದೆ. ನಿಮ್ಮೆಲ್ಲ ಕಷ್ಟಗಳ ನಡುವೆ ನಗರವನ್ನು ಸ್ವಚ್ಛವಾಗಿಡಲು ಕೆಲಸ ಮಾಡುತ್ತಿದ್ದೀರಿ ನಿಮಗೆಲ್ಲ ಧನ್ಯವಾದಗಳು ಎಂದು ಕೊಂಡಾಡಿದ ಸಚಿವರು 64 ಗ್ರಾಮಸೇವಕರ ನೇಮಕಾತಿ ಮಾಡಿ ಗ್ರಾಮ ಸೇವಕರಿಗೆ ತಂತ್ರಾಂಶ ದಾಖಲಿಸಲು ಅನುಕೂಲವಾಗಲೆಂದು 154 ಕ್ರೊಮ್ ಬುಕ್ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇದೇ ಮೊದಲಬಾರಿಗೆ ಇಂತಹ ಸೌಲಭ್ಯ ಒದಗಿಸಲಾಗಿದೆ” ಎಂದರು.
ಪೌರಕಾರ್ಮಿಕರಿಗೆ ಭವನ ನಿರ್ಮಾಣ ಮಾಡುವಂತೆ ಇದಕ್ಕೂ ಮುನ್ನ ಮಾತನಾಡಿ ಕಮಕನೂರು ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ನಗರದಲ್ಲಿ ಸಿಎ ಸೈಟ್ ಒದಗಿಸಿದರೆ ತಾವು ಅನುದಾನ ನೀಡುವುದಾಗಿ ಎಂದು ಘೋಷಿಸಿದ ಪ್ರಿಯಾಂಕ್ ಖರ್ಗೆ, ಶಾಸಕರು ಹಾಗೂ ಸಂಸದರು ಕೂಡಾ ಅನುದಾನ ಒದಗಿಸಲಿ ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಕಲಬುರಗಿ ಯನ್ನು ಸ್ಮಾರ್ಟ್ ಸಿಟಿ ಮಾಡಲು ನಿರಾಕರಿಸಿತು. ಆದರೆ ರಾಜ್ಯ ಸರಕಾರ ಕಲಬುರಗಿ ಯನ್ನು ಮುಂದಿನ 25 ವರ್ಷಕ್ಕೆ ಹೇಗಿರಬೇಕೋ ಹಾಗೆ ಸುಂದರ ನಗರವನ್ನಾಗಿ ಮಾಡಲು IIHS ( Indian Institute for Human Settlements) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಈಗಾಗಲೇ ನೀಲನಕ್ಷೆ ತಯಾರಿಸಲಾಗಿದ್ದು ಮುಂದಿನ ಮೂರು ವರ್ಷದಲ್ಲಿ ನವ ಕಲಬುರಗಿ ನಿರ್ಮಾಣ ಮಾಡಲಾಗುವುದು ಎಂದರು.
ಇದರ ಜೊತೆಗೆ 23 ಸರ್ಕಲ್ ಗಳ ಮರುನಿರ್ಮಾಣ, 31 ಉದ್ಯಾನವನ ಅಭಿವೃದ್ದಿ ಹಾಗೂ 4 ಕೆರೆಗಳನ್ನು ಅಭಿವೃದ್ದಿಪಡಿಸಲಾಗುವುದು. ನಗರದ ಎಲ್ಲ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು ಕಲಬುರಗಿ ಯಲ್ಲಿ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು.
ನಗರದ ವಾಜಪೇಯಿ ಬಡಾವಣೆಯಲ್ಲಿ “ನೈಸ್” ( NICE- Nagavi Institute of Competitive Exams) ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು ಮುಂದಿನ ಜುಲೈ ಕೊನೆಯ ವಾರದಲ್ಲಿ ಉದ್ಘಾಟನೆ ಮಾಡಲಾಗುವುದು. ಮೊದಲಿಗೆ 500 ಜನ ಐಎಎಸ್, ಕೆ ಎ ಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಮುಂದೆ 2000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು.