
ಬೆಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಹಾಗೂ ಜನಪ್ರಿಯ ಕಾರ್ಮಿಕ ಮುಖಂಡರಾದ ಎಚ್.ವಿ. ಅನಂತ ಸುಬ್ಬರಾವ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಸುದೀರ್ಘ ನಾಲ್ಕು ದಶಕಗಳ ಕಾಲ ಕಾರ್ಮಿಕ ಮುಖಂಡರಾಗಿ ಅನೇಕ ಚಳವಳಿಗಳನ್ನು ಮುನ್ನಡೆಸಿದ್ದ ಹೋರಾಟಗಾರ ಅನಂತ ಸುಬ್ಬರಾವ್ ನನಗೂ ಆತ್ಮೀಯರಾಗಿದ್ದರು. ಅವರ ದಣಿವರಿಯದ ಹೋರಾಟದ ಛಲ ಮತ್ತು ಸೈದ್ಧಾಂತಿಕ ಬದ್ಧತೆ ಹೋರಾಟಗಾರರಿಗೆ ಒಂದು ಮಾದರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಅವರ ನಿರ್ಗಮನದಿಂದ ಸಮಾಜಕ್ಕೆ, ಮುಖ್ಯವಾಗಿ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿರುವ ಸಿಎಂ, ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
