Wednesday, March 18

‘ಕೆಡಿ ದಿ ಡೆವಿಲ್’ ಹಾಡು ವಿರುದ್ಧ ದೂರು

ಬೆಂಗಳೂರು : ‘ಕೆಡಿ ದಿ ಡೆವಿಲ್’ (KD The Devil) ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡು ಬಿಡುಗಡೆಯಾಗುತ್ತಿದ್ದಂತೆಯೇ ಭಾರೀ ವಿವಾದಕ್ಕೆ ಗುರಿಯಾಗಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ (Dhruva Sarja) ಅಭಿನಯದ ಈ ಚಿತ್ರಕ್ಕೆ ಆರಂಭದಲ್ಲೇ ಅಡೆತಡೆ ಎದುರಾಗಿದ್ದು, ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್ (YouTube) ಸೇರಿದಂತೆ ಎಲ್ಲ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

ಹಾಡಿನ ಸಾಹಿತ್ಯ ಮಾತ್ರವಲ್ಲದೆ ನೃತ್ಯ ಸಂಯೋಜನೆಯ ಮೇಲೂ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೃಶ್ಯಗಳು ಅಸಭ್ಯವಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಕೇಳಿಬಂದಿದೆ.

ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಕರ್ನಾಟಕ ರಾಜ್ಯ ಮಹಿಳಾ ಆಯೋಗ (Karnataka State Women Commission) ಚಿತ್ರರಂಗದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಹಾಗೂ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ (Central Board of Film Certification)ಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Nagalakshmi Chaudhary), “ಇಂತಹ ಹಾಡುಗಳು ಸಮಾಜದಲ್ಲಿ ಮಹಿಳೆಯರ ಬಗ್ಗೆ ಹಗುರ ಮನೋಭಾವ ಮೂಡಿಸುತ್ತವೆ. ಹಾಡಿನ ಆರಂಭದ ಸಾಲುಗಳನ್ನೇ ಕೇಳಲು ಸಾಧ್ಯವಾಗಲಿಲ್ಲ,” ಎಂದು ಹೇಳಿದ್ದಾರೆ.

ಇನ್ನೊಂದೆಡೆ ವಕೀಲರು ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ (CBFC) ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting)ಕ್ಕೆ ದೂರು ಸಲ್ಲಿಸಿದ್ದು, ಅಪ್ರಾಪ್ತ ವಯಸ್ಕರಿಗೂ ಹಾಡು ಲಭ್ಯವಿರುವ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita) ಮತ್ತು ಪೋಕ್ಸೋ ಕಾಯಿದೆ (POCSO Act) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಇದೇ ವೇಳೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (National Human Rights Commission) ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.