Sunday, December 7

ಗುತ್ತಿಗೆದಾರರಿಗೆ ಬೆದರಿಕೆ ಆರೋಪ; ಶಾಸಕ ಮುನಿರತ್ನ 2 ದಿನ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಗುತ್ತಿಗೆದಾರರಿಗೆ ಜೀವ ಬೆದರಿಕೆ ಒಡ್ಡಿದ ಹಾಗೂ ಜಾತಿ ನಿಂದನೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೋರ್ಟ್ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಕೋಲಾರದಲ್ಲಿ ಮುನಿರತ್ನ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಕಳೆದ ರಾತ್ರಿ ಬೆಂಗಳೂರಿಗೆ ಕರೆತಂದು 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ.

ಶನಿವಾರ ಪೊಲೀಸರು ಮುನಿರತ್ನ ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ಸಮೀಪ ನಂಗಲಿ ಗ್ರಾಮದ ಬಳಿ ಬಂಧಿಸಿದ್ದರು. ರಾತ್ರಿ ಬೆಂಗಳೂರು ತಲುಪುತ್ತಿದ್ದಂತೆಯೇ ಆರೋಗ್ಯ ತಪಾಸಣೆ ನಡೆಸಿ, ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು.

ಪ್ರಕರಣದ ಬಗ್ಗೆ ವಿಚಾರಣೆ ಅಗತ್ಯವಿರುವುದರಿಂದ ಒಂದು ವಾರ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಧೀಶರನ್ನು ಕೋರಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಆದೇಶಿಸಿದರು.