Wednesday, January 28

ಧಾರವಾಡ: ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿದ ಕ್ರಮಕ್ಕೆ ಎಸ್‌ಯುಸಿಐ(ಸಿ) ಖಂಡನೆ

ಬೆಂಗಳೂರು: ಧಾರವಾಡದಲ್ಲಿ ಉದ್ಯೋಗ ಹಕ್ಕೊತ್ತಾಯಗಳಿಗಾಗಿ ನಡೆದಿದ್ದ ಶಾಂತಿಯುತ ಧರಣಿಯನ್ನು ಪೊಲೀಸ್ ಬಂಧನದ ಮೂಲಕ ಹತ್ತಿಕ್ಕಿದ ರಾಜ್ಯ ಸರ್ಕಾರದ ಕ್ರಮವನ್ನು ಎಸ್‌ಯುಸಿಐ (ಕಮ್ಯುನಿಸ್ಟ್) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಪಕ್ಷದ ರಾಜ್ಯ ಸಮಿತಿಯಿಂದ ಬಿಡುಗಡೆಗೊಂಡ ಪತ್ರಿಕಾ ಹೇಳಿಕೆಯಲ್ಲಿ, ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ವಯೋಮಿತಿಯನ್ನು ಐದು ವರ್ಷ ಹೆಚ್ಚಿಸುವುದು, ನೇಮಕಾತಿ ಪರೀಕ್ಷೆಗಳ ಶುಲ್ಕವನ್ನು ಕಡಿತಗೊಳಿಸುವುದು, ಭ್ರಷ್ಟಾಚಾರ ತಡೆಗಟ್ಟುವುದು, ನೇಮಕಾತಿ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ಸೌಲಭ್ಯ ಒದಗಿಸುವಂತೆ ಉದ್ಯೋಗಾಕಾಂಕ್ಷಿಗಳು ಮುನ್ನಡೆಸಿದ್ದ ಹೋರಾಟಕ್ಕೆ ಸರ್ಕಾರ ನೀಡಿದ ಪ್ರತಿಕ್ರಿಯೆ “ಅಮಾನವೀಯ” ಎಂದು ಆರೋಪಿಸಲಾಗಿದೆ.

ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನದಂದು (ಡಿಸೆಂಬರ್ 10) ಯುವಕರ ಧ್ವನಿಯನ್ನು ನಿಗ್ರಹಿಸಲು ಸರ್ಕಾರ ಮುಂದಾಗಿರುವುದು ವಿರೋಧಾಭಾಸದ ಉದಾಹರಣೆಯಾಗಿದೆ ಎಂದು ಹೇಳಿಕೆಯು ಟೀಕಿಸಿದೆ. ಉದ್ಯೋಗ ಹಕ್ಕಿಗಾಗಿ ಯುವಕರು ಹಲವಾರು ಬಾರಿ ಮನವಿ ಮತ್ತು ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನಸೆಳೆಯಲು ಪ್ರಯತ್ನಿಸಿದ್ದು, ಅವರ ಹೋರಾಟವನ್ನು ಪೊಲೀಸ್ ಬಲದಿಂದ ಹತ್ತಿಕ್ಕುವುದು ಜನರಾಜ್ಯ ವಿರೋಧಿ ಕ್ರಮವೆಂದು ಎಸ್‌ಯುಸಿಐ(ಸಿ) ಅಭಿಪ್ರಾಯಪಟ್ಟಿದೆ.

ಪೊಲೀಸರ ಬೆದರಿಕೆಗಳಿಗೆ ಮಣಿಯದೆ ಹೋರಾಟ ನಡೆಸಿದ ಉದ್ಯೋಗಾಕಾಂಕ್ಷಿಗಳಿಗೆ ಪಕ್ಷ ಕ್ರಾಂತಿಕಾರಿ ಅಭಿನಂದನೆ ಸಲ್ಲಿಸಿದೆ. ಬಿಜೆಪಿ ಪರ್ಯಾಯವೆಂದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವೇ ಇಂತಹ ದಮನಕಾರಿ ಕ್ರಮಕ್ಕೆ ಮುಂದಾಗುತ್ತಿರುವುದು ಶೋಚನೀಯ ಎನ್ನುತ್ತದೆ.

ಶಾಂತಿಯುತ ಪ್ರತಿಭಟನೆ ಸಂವಿಧಾನಾತ್ಮಕ ಹಕ್ಕು ಎಂಬುದನ್ನು ರಾಜ್ಯ ಸರ್ಕಾರಕ್ಕೆ ಯುವಜನರು ಪಾಠ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿಕೆಯಲ್ಲಿ ವ್ಯಂಗ್ಯವಾಡಿ, ಬಂಧಿತ ಹೋರಾಟಗಾರರನ್ನು ತಕ್ಷಣ ಬೇಷರತ್ ಬಿಡುಗಡೆ ಮಾಡಬೇಕು, ಸರ್ಕಾರಗಳು ಉದ್ಯೋಗಾಕಾಂಕ್ಷಿಗಳೊಂದಿಗೆ ಮಾತುಕತೆ ನಡೆಸಿ ನ್ಯಾಯಯುತ ಆಗ್ರಹಗಳಿಗೆ ಸ್ಪಂದಿಸಬೇಕೆಂದು ಎಸ್‌ಯುಸಿಐ(ಸಿ) ಒತ್ತಾಯಿಸಿದೆ.