
ಬೆಂಗಳೂರು: “ವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಮಾತಿನ ಶಕ್ತಿಯೇ ವಿಶ್ವದ ಶಕ್ತಿ). ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ನಾಯಕರನ್ನು ನೆನಪಿಸಿದಂತಿದೆ. “ನ್ಯಾಯಾಧೀಶರಾಗಲಿ, ರಾಷ್ಟ್ರಪತಿಗಳಾಗಲಿ, ನಾನಾಗಲೀ, ಯಾರೇ ಆಗಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆದು ಸಾಗಬೇಕು” ಎಂಬ ಅವರ ಮಾತು ಪ್ರಸಕ್ತ ಸನ್ನಿವೇಶದಲ್ಲಿ ಅನೇಕಾನೇಕ ವಿಶ್ಲೇಷಣೆಗೆ ಎಡೆಮಾಡಿಕೊಟ್ಟಿದೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಮಾತನಾಡಿದರು. ನಾನು ಏನೇ ಮಾಡಿದರೂ, ಮಾತನಾಡಿದರೂ ಮಾಧ್ಯಮಗಳು ಬೇರೆ ರೀತಿ ಚರ್ಚೆ ಮಾಡುತ್ತವೆ ಎಂದ ಡಿಕೆಶಿ, “ನಾನು ಬೇರೆ ವಿಚಾರವಾಗಿ ಮಾತನಾಡಲು ಹೋಗುವುದಿಲ್ಲ. ನಾನು ಏನೇ ಹೇಳಿದರೂ ಅದನ್ನು ಬೇರೆ ರೀತಿ ತಿರುಗಿಸಿ ಅರ್ಧ ಗಂಟೆ ಚರ್ಚೆ ಮಾಡುತ್ತಾರೆ. ನಾನು ಇಂದಿರಾ ಗಾಂಧಿ ಅವರ ಕಾರ್ಯಕ್ರಮದ ವೇಳೆ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿದೆ. ಅದರ ಮೇಲೆ ಅರ್ಧ ಗಂಟೆ ಚರ್ಚೆ ಮಾಡಿದರು. ನಂತರ ವಿಶ್ವ ಮೀನುಗಾರಿಕೆ ದಿನದ ಕಾರ್ಯಕ್ರಮದಲ್ಲಿ ನನಗೆ ಗಾಳ ಹಾಕಿ ಮೀನು ಹಿಡಿಯುವುದು ಗೊತ್ತು ಎಂದು ಹೇಳಿದ್ದನ್ನು ಮತ್ತೊಂದು ರೀತಿ ಚರ್ಚೆ ಮಾಡಿದರು. ನಾನು ಆ ಕಡೆ ನೋಡಿದರೆ ಒಂದು ರೀತಿ, ಈ ಕಡೆ ನೋಡಿದರೆ ಒಂದು ರೀತಿ, ದಿಟ್ಟಿಸಿ ನೋಡಿದರೆ ಮತ್ತೊಂದು ಅರ್ಥ, ನಕ್ಕರೆ ಮಗದೊಂದು ಅರ್ಥ ಕಲ್ಪಿಸುತ್ತಿದ್ದಾರೆ. ಅವರಿಗೂ ಒಳ್ಳೆಯ ಟಿಆರ್ ಪಿ ಸಿಗುತ್ತಿದೆ. ನೀವುಗಳು ಟಿಆರ್ ಪಿಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದೀರಿ” ಎಂದು ಚಟಾಕಿ ಹಾರಿಸಿದರು.
224 ಕ್ಷೇತ್ರಗಳಲ್ಲಿ ಲೀಗಲ್ ಬ್ಯಾಂಕ್ ಸ್ಥಾಪಿಸಲು ನಿರ್ದೇಶನ
“ಎರಡು ತಿಂಗಳ ಹಿಂದೆ ದೆಹಲಿಯಲ್ಲಿ ಎಐಸಿಸಿ ಕಾನೂನು ಘಟಕದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಂದು ರಾಹುಲ್ ಗಾಂಧಿ ಅವರು ಮನದಾಳದ ಮಾತುಗಳನ್ನಾಡಿದ್ದರು. ನೀವೆಲ್ಲರೂ ಅದನ್ನು ಕೇಳಬೇಕು. ಮತಕಳ್ಳತನ ನಡೆಯುತ್ತಿರುವ ಸಧ್ಯದ ಪರಿಸ್ಥಿತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಬ್ಲಡ್ ಬ್ಯಾಂಕ್ ಮಾದರಿಯಲ್ಲಿ ಲೀಗಲ್ ಬ್ಯಾಂಕ್ ಸ್ಥಾಪಿಸಬೇಕು ಎಂದು ಕರೆ ನೀಡಿದರು. ನಾನು ರಾಜ್ಯ ಕಾನೂನು ಘಟಕದ ಅಧ್ಯಕ್ಷರಾದ ಧನಂಜಯ ಅವರಿಗೆ ಆರು ತಿಂಗಳು ಕಾಲಾವಕಾಶ ನೀಡಿದ್ದು, 224 ಕ್ಷೇತ್ರಗಳಲ್ಲಿ ಕನಿಷ್ಠ 10 ವಕೀಲರಿರುವ ಲೀಗಲ್ ಬ್ಯಾಂಕ್ ಅನ್ನು ಸ್ಥಾಪಿಸಬೇಕು ಎಂದು ನಿರ್ದೇಶನ ನೀಡಿದ್ದೇನೆ. ಈ ವಕೀಲರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಆಚಾರ ವಿಚಾರ ರಕ್ಷಣೆಗೆ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಸಮಿತಿ ರಚಿಸಬೇಕು” ಎಂದು ತಿಳಿಸಿದರು.
“ವಕೀಲರು ಏನೇ ವಾದ ಮಾಡಿದರೂ ಸಂವಿಧಾನ ಪುಸ್ತಕ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮೇಲೆ ಮಂಡಿಸುತ್ತಾರೆ. ಇದೆಲ್ಲವನ್ನು ಕೊಟ್ಟಿರುವುದು ಕಾಂಗ್ರೆಸ್ ಪಕ್ಷ. ಇದನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಲೀಗಲ್ ಬ್ಯಾಂಕ್ ಸ್ಥಾಪಿಸಬೇಕಿದೆ” ಎಂದರು.
ಕಾನೂನು ಘಟಕದವರಿಗೆ ಸೂಕ್ತ ಸ್ಥಾನಮಾನ:
“ಕಾನೂನು ಘಟಕದವರಿಗೆ ಸೂಕ್ತ ಸ್ಥಾನ ಮಾನ ನೀಡಬೇಕು ಎಂಬ ನಿಮ್ಮ ಬೇಡಿಕೆಯನ್ನು ನಾನು ಒಪ್ಪುತ್ತೇನೆ. ಪಕ್ಷ ಇದ್ದರೆ ಸರ್ಕಾರ, ಪಕ್ಷವೇ ಇಲ್ಲದಿದ್ರೆ ಸರ್ಕಾರ ಇಲ್ಲ. ಕಾರ್ಯಕರ್ತರು ಬಲಿಷ್ಠವಾಗಿದ್ದರೆ ನಾವು ಬಲಿಷ್ಠವಾಗಿರುತ್ತೇವೆ. ಕೆಪಿಸಿಸಿ ಆಸ್ತಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರ ಪಟ್ಟಿಯನ್ನು ಕೊಡಿ. ಈ ಆಸ್ತಿಗಳನ್ನು ಕಾನೂನು ಸಮಿತಿಗೆ ಸೇರಿಸಲು ನಾನು ಸಿದ್ಧನಿದ್ದೇನೆ. ಆದರೆ ಅವರು ಇದನ್ನು ಸೇವೆಯಂತೆ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ನನ್ನ ವಿರುದ್ಧ ಪಕ್ಷದ ನಾಯಕರ ವಿರುದ್ಧ ಅವಹೇಳನವಾಗಿ ಪೋಸ್ಟ್ ಮಾಡುತ್ತಾರೆ. ಇಂತಹ ವಿಚಾರಗಳನ್ನು ಸರಿಯಾಗಿ ನಿಭಾಯಿಸಬೇಕು” ಎಂದು ತಿಳಿಸಿದರು.
“ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್ ಅವರು ಕಾನೂನು ಘಟಕದ ಬಗ್ಗೆ ಚರ್ಚೆ ಮಾಡಿದರು. ನಾನು ನನ್ನ ಇಲಾಖೆಗಳಲ್ಲಿರುವ ನ್ಯಾಯಾಲಯ ಪ್ರಕರಣಗಳ ಬಗ್ಗೆ ಪರಿಶೀಲನೆ ಮಾಡಿದೆ. ಸುಮಾರು 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಕೆಲವು ಪ್ರಕರಣಗಳಲ್ಲಿ ವಕೀಲರು ಅರ್ಜಿದಾರರ ಜೊತೆ ರಾಜಿ ಮಾಡಿಕೊಂಡು ಭೂಸ್ವಾಧೀನ ಪ್ರಕ್ರಿಯೆಯಲ್ಲಿ 10 ಲಕ್ಷ ಪರಿಹಾರ ನಿಗದಿಯಾಗಿದ್ದರೆ, ನ್ಯಾಯಾಲಯದಲ್ಲಿ ಅರ್ಜಿದಾರರಿಗೆ 8-10 ಕೋಟಿ ಪರಿಹಾರ ನೀಡುವಂತೆ ತೀರ್ಪು ಬರುವಂತೆ ಮಾಡಿದ್ದಾರೆ. ಈ ರೀತಿ ಆದರೆ ಸರ್ಕಾರದ ಗತಿ ಏನು? ಈ ರೀತಿ ಕರ್ತವ್ಯ ಲೋಪ ಎಸಗಿದ ವಕೀಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳಲ್ಲಿ ನಮ್ಮ ಪರ ವಾದ ಮಾಡುವ ವಕೀಲರು ಮಂಡಿಸುವ ವಾದಗಳನ್ನು ದಾಖಲು ಮಾಡುವ ವ್ಯವಸ್ಥೆ ತರಲಾಗಿದೆ. ಈ ವಿಚಾರದಲ್ಲಿ ಜವಾಬ್ದಾರಿ ಹೊತ್ತುಕೊಳ್ಳದವರನ್ನು ಬದಲಿಸಬೇಕು ಎಂದು ಹೇಳಿದ್ದೇನೆ. ಸಂವಿಧಾನ ಬಳಸಿಕೊಂಡರೆ ನಾಯಕರಾಗಬಹುದು, ಮಾರಿಕೊಂಡರೆ ಗುಲಾಮರಾಗುತ್ತೀರಿ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ” ಎಂದರು.
