Tuesday, March 10

ಲೆಬನಾನ್‌ನಲ್ಲಿ 700 ಕ್ಕೂ ಹೆಚ್ಚು ಹೆಜ್ಬೊಲ್ಲಾ ತಾಣಗಳ ಮೇಲೆ ಇಸ್ರೇಲ್ ದಾಳಿ

ಜೆರುಸಲೆಮ್: ನಡೆಯುತ್ತಿರುವ ಸಂಘರ್ಷದಲ್ಲಿ ಸುಮಾರು 1,900 ಇರಾನಿನ ಸೈನಿಕರು ಹಾಗೂ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (Israel Defense Forces) ತಿಳಿಸಿದೆ. ಈ ಮಾಹಿತಿ ಮಿಲಿಟರಿ ವಕ್ತಾರ ಎಫೀ ಡೆಫ್ರಿನ್ ಅವರು ಸೋಮವಾರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಮುಂಜಾನೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು, ದೇಶದಲ್ಲಿ ಇರಾನಿನ ದಾಳಿಯಿಂದ ಮೃತಪಟ್ಟ ನಾಗರಿಕರ ಸಂಖ್ಯೆ 12ಕ್ಕೆ ಏರಿದೆ ಎಂದು ಹೇಳಿದರು. ಇದೇ ವೇಳೆ ಹೆಜ್ಬೊಲ್ಲಾ (Hezbollah) ಉಗ್ರಗಾಮಿಗಳೊಂದಿಗೆ ಲೆಬನಾನ್ನಲ್ಲಿ ನಡೆದ ಹೋರಾಟದಲ್ಲಿ ಇಬ್ಬರು ಇಸ್ರೇಲಿ ಸೈನಿಕರೂ ಸಾವನ್ನಪ್ಪಿದ್ದಾರೆ.

ಇಸ್ರೇಲ್ ಆರೋಗ್ಯ ಸಚಿವಾಲಯ (Israel Health Ministry)ದ ಪ್ರಕಾರ, ಇರಾನ್ ಮೇಲೆ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡೆಸಿದ ದಾಳಿಗಳು ಆರಂಭವಾದ ಬಳಿಕ ಇಸ್ರೇಲ್‌ನಲ್ಲಿ ಒಟ್ಟು 2,238 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ 91 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಸ್ರೇಲ್ ವಾಯುಪಡೆ ಸೋಮವಾರವೂ ತನ್ನ ದಾಳಿಗಳನ್ನು ಮುಂದುವರೆಸಿದ್ದು, ಟೆಹ್ರಾನ್, ಇಸ್ಫಹಾನ್ ಹಾಗೂ ದಕ್ಷಿಣ ಇರಾನ್ ಪ್ರದೇಶಗಳಲ್ಲಿ ಗುರಿಗಳನ್ನು ಹೊಡೆದಿದೆ ಎಂದು ಡೆಫ್ರಿನ್ ಹೇಳಿದರು.

ಫೆಬ್ರವರಿ 28ರಂದು ಆರಂಭವಾದ ಅಮೆರಿಕ–ಇಸ್ರೇಲ್ ಸಂಯುಕ್ತ ದಾಳಿಗಳ ನಂತರ, ಇಸ್ರೇಲ್ ಯುದ್ಧವಿಮಾನಗಳು ಇರಾನ್‌ನ ಆರು ಮಿಲಿಟರಿ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡಿವೆ. ಕುಡ್ಸ್ ಫೋರ್ಸ್ (Quds Force) ಬಳಕೆ ಮಾಡುತ್ತಿದ್ದ 16 ಸರಕು ವಿಮಾನಗಳನ್ನು ನಾಶಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ವಿಮಾನಗಳನ್ನು ಪ್ರದೇಶದಲ್ಲಿರುವ ಇರಾನ್ ಮಿತ್ರಪಕ್ಷಗಳಿಗೆ ಶಸ್ತ್ರಾಸ್ತ್ರ ಮತ್ತು ಹಣ ಸಾಗಿಸಲು ಬಳಸಲಾಗುತ್ತಿತ್ತು ಎನ್ನಲಾಗಿದೆ.

ಇದೇ ವೇಳೆ ಬೈರುತ್ನಲ್ಲಿ ಇಸ್ರೇಲ್ ವೈಮಾನಿಕ ದಾಳಿಗಳು ಮುಂದುವರಿದಿದ್ದು, ಹೆಜ್ಬೊಲ್ಲಾ ಬಳಸುತ್ತಿದ್ದ 35 ಎತ್ತರದ ಕಟ್ಟಡಗಳನ್ನು ಗುರಿಯಾಗಿಸಲಾಗಿದೆ. ಲೆಬನಾನ್‌ನಲ್ಲಿ 700 ಕ್ಕೂ ಹೆಚ್ಚು ಹೆಜ್ಬೊಲ್ಲಾ ತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಡೆಫ್ರಿನ್ ಹೇಳಿದ್ದಾರೆ.

ಇಸ್ರೇಲ್ ದಾಳಿಗಳು “ಅಗತ್ಯವಿರುವವರೆಗೆ” ಮುಂದುವರಿಯುತ್ತವೆ ಎಂದು ಅವರು ತಿಳಿಸಿದ್ದಾರೆ.

ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರನ್ನು ಗುರಿಯಾಗಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಡೆಫ್ರಿನ್ ನೇರ ಉತ್ತರ ನೀಡದೇ, “ಬೆದರಿಕೆ ಒಡ್ಡುವ ಯಾರನ್ನಾದರೂ ನಾವು ಹೊಡೆಯುತ್ತೇವೆ” ಎಂದು ಹೇಳಿದರು.