
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಪೌಷ್ಟಿಕ, ಗುಣಮಟ್ಟದ ಆಹಾರ ಪೂರೈಕೆಗೆ ನಮ್ಮ ಆದ್ಯತೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಮ್ಮ ಸರ್ಕಾರದ ಪ್ರಮುಖ ಆಶಯವಾದ ‘ಸಶಕ್ತ ಮತ್ತು ಆರೋಗ್ಯವಂತ ಕರ್ನಾಟಕ’ ನಿರ್ಮಾಣದ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ ಎಂದಿರುವ ಅವರು, ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅತ್ಯುತ್ತಮ ದರ್ಜೆಯ ಆಹಾರವನ್ನು ಒದಗಿಸುವ ಉದ್ದೇಶದಿಂದ ಇಸ್ಕಾನ್ (ISKCON) ಸಂಸ್ಥೆಯ ಮೂಲಕ ಪೌಷ್ಟಿಕ ಆಹಾರ ಪೂರೈಸಲು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಅವರು ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಧಾರವಾಡ ಜಿಲ್ಲಾ ಆಸ್ಪತ್ರೆ ಹಾಗೂ ಬೆಂಗಳೂರಿನ ಯಲಹಂಕ, ಕೆ.ಆರ್. ಪುರ ಮತ್ತು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಈ ಸುಧಾರಿತ ಆಹಾರ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ.
ರೋಗಿಗಳ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಜನರಲ್ ಡಯಟ್, ಥೆರಪಿಟಿಕ್ ಡಯಟ್, ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ ವಿಶೇಷ ಆಹಾರ ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ಪೌಷ್ಟಿಕ ಆಹಾರವನ್ನು ನೀಡಲಾಗುವುದು.
ಶುದ್ಧತೆ ಮತ್ತು ಗುಣಮಟ್ಟಕ್ಕೆ ಹೆಸರಾಗಿರುವ ಇಸ್ಕಾನ್ ಸಂಸ್ಥೆಯ ಮೂಲಕ ಈ ಸೇವೆಯನ್ನು ಒದಗಿಸಲಾಗುತ್ತಿದ್ದು, ಇದಕ್ಕಾಗಿ ₹2,83,47,000/- ಅನುದಾನವನ್ನು ಮೀಸಲಿಡಲಾಗಿದೆ.
ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಸೇರಿದಂತೆ ದಿನದ ವಿವಿಧ ಅವಧಿಗಳಲ್ಲಿ ಸಮತೋಲಿತ ಆಹಾರವನ್ನು ವೈಜ್ಞಾನಿಕ ದರ ಪಟ್ಟಿಯ ಆಧಾರದ ಮೇಲೆ ಪೂರೈಸಲಾಗುವುದು.
ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೂ ಗುಣಮಟ್ಟದ ಚಿಕಿತ್ಸೆಯ ಜೊತೆಗೆ ಶಕ್ತಿವರ್ಧಕ ಆಹಾರ ಸಿಗುವಂತೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
