
ಇರಾನ್ ಕ್ಷಿಪಣಿ ದಾಳಿ: ಅಮೆರಿಕ ಹಾಗೂ ಗಲ್ಫ್ ರಾಷ್ಟ್ರಗಳ ತೀವ್ರ ಖಂಡನೆ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಂಡಿರುವ ನಡುವೆಯೇ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಅಮೆರಿಕ ಮತ್ತು ಆರು ಗಲ್ಫ್ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ಈ ದಾಳಿಗಳನ್ನು “ವಿವೇಚನಾರಹಿತ, ಅಜಾಗರೂಕ ಹಾಗೂ ಪ್ರಾದೇಶಿಕ ಸ್ಥಿರತೆಗೆ ಅಪಾಯಕಾರಿ ಉಲ್ಬಣ” ಎಂದು ಕರೆಯಲಾಗಿದೆ.ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಯುನೈಟೆಡ್ ಸ್ಟೇಟ್ಸ್, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರಗಳು ಇರಾನ್ ನಡೆಸಿದ ದಾಳಿಗಳನ್ನು ಖಂಡಿಸಿವೆ.ದಾಳಿಗಳು ಬಹ್ರೇನ್, ಇರಾಕ್ – ಅದರಲ್ಲೂ ಕುರ್ದಿಸ್ತಾನ್ ಪ್ರದೇಶ – ಜೋರ್ಡಾನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಹಲವು ಸಾರ್ವಭೌಮ ಪ್ರದೇಶಗಳನ್ನು ತಲುಪಿರುವುದಾಗಿ ಹೇಳಿಕೆ ಉಲ್ಲೇಖಿಸಿದೆ. “ನಾಗರಿಕ ಪ್ರದೇಶಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿರುವುದು ಅಂತರರಾಷ್ಟ್ರೀಯ ಮಾನದಂಡಗಳ ನೇರ ಉಲ್ಲಂಘನೆ,” ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
...









