Tag: ‘ಯಕ್ಷಗಾನ ಉತ್ಸವ 2024’

  • ‘ಯಕ್ಷಗಾನ ಉತ್ಸವ-2024’: ತಾಳಮದ್ದಳೆಯಲ್ಲಿ ಆಂಜನೇಯ ಪಾತ್ರಧಾರಿಯಾಗಿ ಗಮನಸೆಳೆದ IPS ಅಧಿಕಾರಿ ಧರಣೀದೇವಿ

    ಬೆಂಗಳೂರು: ಯಕ್ಷಗಾನ ಕೇವಲ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಈ ರಂಗದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಮಹಿಳೆಯರೂ ಹಂತಹಂತವಾಗಿ ಪಾಲ್ಗೊಂಡು ಪುರುಷರಂತೆಯೇ ಸಾಧನೆ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಡಾ. ಧರಣೀದೇವಿ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.

    ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆ ಶನಿವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಯಕ್ಷಗಾನ ಉತ್ಸವ-2024 ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಯಕ್ಷಗಾನದಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಪ್ರೋತ್ಸಾಹಿಸಬೇಕಿದೆ ಎಂದು ಪ್ರತಿಪಾದಿಸಿದರು.

    ಸ್ವತಃ “ಶರಸೇತು ಬಂಧ” ಎಂಬ ಮಹಿಳಾ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಆಂಜನೇಯನ ಪಾತ್ರವಹಿಸಿ ಅರ್ಥಗಾರಿಕೆ ಮಾಡಿದ ಧರಣೀದೇವಿ ಅವರು, ಭಾಗವತಿಕೆಯಲ್ಲಿ, ಚೆಂಡೆ ವಾದನದಲ್ಲಿ, ಮುಮ್ಮೇಳ ಕಲಾವಿದರಾಗಿ ಬಹಳ ಹಿಂದಿನಿಂದಲೂ ಮಹಿಳೆಯರು ಅವರದೇ ಛಾಪು ಮೂಡಿಸಿದ್ದಾರೆ. ಬಣ್ಣದ ವೇಷದಲ್ಲೂ ತೊಡಗಿಸಿಕೊಂಡು, ಆಯಾ ಪಾತ್ರಕ್ಕೆ ಅನುಗುಣವಾದ ಧ್ವನಿಯನ್ನೂ ನೀಡಿ ಪಾತ್ರಕ್ಕೆ ನ್ಯಾಯ ಒದಗಿಸಿದ ನಿದರ್ಶನಗಳು ಇವೆ ಎಂದು ಹೇಳಿದರು.

    ಯಕ್ಷಗಾನದ ಬೇರು ಆಳವಾಗಿದೆ ಹಾಗೂ ಎಂದಿಗೂ ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ. ಹಾಗಾಗಿ ಯಕ್ಷಗಾನವನ್ನು ಉಳಿಸಿಕೊಳ್ಳಬೇಕು, ಯಕ್ಷಗಾನ ಅವನತಿಯತ್ತ ಸಾಗುತ್ತಿದೆ ಎಂಬಂತಹ ಮಾತುಗಳಿಗೆ ಆಸ್ಪದವಿಲ್ಲ. ಯಕ್ಷಗಾನ ವಿಶ್ವದೆಲ್ಲೆಡೆ ಪಸರಿಸಿದ್ದು, ಈ ಕಲೆ ಯಾವ ಕಾಲಕ್ಕೂ ಪ್ರಸ್ತುತ ಎಂದು ಧರಣೀದೇವಿ ವಿಶ್ಲೇಷಿಸಿದರು.

    ಶರಸೇತು ಬಂಧ ತಾಳಮದ್ದಲೆಯಲ್ಲಿ ಭಾಗವಹಿಸಿದ ಅವರು, ಹನುಮಂತನ ತನ್ನ ಪಾತ್ರ ಪರಿಚಯ ಮಾಡುತ್ತಾ, ವಾಯುಪುತ್ರ, ರಾಮಭಕ್ತ ಎಂಬ ಹೆಸರುಗಳಿವೆ. ಆದರೆ ತಾನು ತನ್ನ ತಾಯಿಯ ಹೆಸರಿನಿಂದಲೂ ಗುರುತಿಸಿಕೊಂಡು ಅಂಜನಾ ಸುತ ಅಥವಾ ಆಂಜನೇಯ ಎಂದೂ ಹೆಸರಿದೆ ಎಂದು ಹೇಳುವ ಮೂಲಕ ತನ್ನ ಕರಾವಳಿಯ ತಾಯಿಯ ಕುಟುಂಬದ ಆಧಾರಿತ ಅಳಿಯಕಟ್ಟು ಸಂಪ್ರದಾಯವನ್ನು ಪರೋಕ್ಷವಾಗಿ ನೆನಪಿಸಿದರು.

    ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ ನಿರ್ದೇಶಕಿ ಕೆ. ಗೌರಿ ಮಾತನಾಡಿ, ಸಂಸ್ಥೆ 25 ವರ್ಷಗಳಿಂದ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ತರಬೇತಿ ನೀಡುತ್ತಾ ಬೆಳೆಯುತ್ತಿದೆ. ಈಗ ವಿದ್ಯಾರ್ಥಿವೇತನ ಮೂಲಕ 12 ಮಹಿಳೆಯರಿಗೆ ಯಕ್ಷಗಾನ ತರಬೇತಿ ನೀಡುವ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.

    ಯಕ್ಷಗಾನ ಉತ್ಸವ 2024

    ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಸಂಸ್ಥೆಯ ವತಿಯಿಂದ ‘ಯಕ್ಷಗಾನ ಉತ್ಸವ-2024’ ಗುರುಗಳಾದ ಶ್ರೀನಿವಾಸ ಸಾಸ್ತಾನ ಮತ್ತು ಕೆ. ಗೌರಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಯಕ್ಷಗಾನ ವೇಷಭೂಷಣ ಹಾಗೂ ಮುಖವರ್ಣಿಕೆ ಕಮ್ಮಟ ಕಾರ್ಯಕ್ರಮವನ್ನು ‘ತುಳುವರೆಂಕುಲು’ ಕಾರ್ಯದರ್ಶಿ, ಮಟ್ಟಿ ರಾಮಚಂದ್ರ ರಾವ್ ಉದ್ಘಾಟಿಸಿದರು. ಅತಿಥಿಗಳಾಗಿ ಖ್ಯಾತ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಸಂಪನ್ಮೂಲ ವ್ಯಕ್ತಿಗಳಾಗಿ ರಾಜೇಶ್ ಆಚಾರ್, ಶಂಕರ್ ಹೊಸೂರು, ಉಮೇಶ್ ರಾಜ್, ಸಂಸ್ಥೆಯ ಯಕ್ಷಗಾನ ಗುರು ಮತ್ತು ನಿರ್ದೇಶಕರು ಕೆ. ಗೌರಿ ಉಪಸ್ಥಿತರಿದ್ದರು.

    ಇದೇ ವೇಳೆ, ಸಂಸ್ಥೆಯ ಕಲಾವಿದೆಯರಿಂದ ಯಕ್ಷಗಾನದ ಕಥಾಭಾಗದ ಮೊದಲು ನಡೆಯುವ ರಂಗಕ್ರಿಯೆಯಾದ ಯಕ್ಷಗಾನ ಪೂರ್ವರಂಗ ಪ್ರದರ್ಶನ, ಕುಶಲವ ಕಾಳಗ, ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರಸಂಗ ಕಾರ್ಯಕ್ರಮ ಗಮನಸೆಳೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ನಾವುಡ, ವಿಶ್ವನಾಥ ಶೆಟ್ಟಿ, ವಿನಯ್ ರಾಜೀವ್ ಶೆಟ್ಟಿ, ನರಸಿಂಹ ಆಚಾರ್, ಸಂಪತ್ ಆಚಾರ್ಯ, ಸುಬ್ರಹ್ಮಣ್ಯ ಗಾಣಿಗ ಐರೋಡಿ, ಕಾರ್ತಿಕ್ ಧಾರೇಶ್ವರ್. ಮುಮ್ಮೇಳದಲ್ಲಿ ಕಲಾವಿದೆಯರಾಗಿ ಕೆ ಗೌರಿ, ಆಶಾ ರಾಘವೇಂದ್ರ, ಅನ್ನಪೂರ್ಣೇಶ್ವರಿ ಕಟೀಲು, ಶ್ವೇತಾ ನವೀನ್, ಲಕ್ಷ್ಮೀ ರಾವ್, ಶಶಿಕಲಾ, ಸುಮಾ ಅನಿಲ್ ಕುಮಾರ್, ಮನಸ್ವಿ, ಚೈತ್ರ ಕೋಟ, ಚೈತ್ರ ಭಟ್, ದೀಕ್ಷಾ ಭಟ್, ಸೌಜನ್ಯ ನಾವುಡ, ರಕ್ಷಾ ಅನಂತ್, ಸಹನಾ ಅನಿಲ್ ಕುಮಾರ್, ಧೃತಿ ಅಮ್ಮೆಂಬಳ, ಸಹನ್ಯ ಚಿನ್ಮಯಿ, ಕೃತಿ ಅಮ್ಮೆಂಬಳ, ಗಗನ ಅನಿಲ್ ಕುಮಾರ್, ಯಾದ್ವಿಯುತಿ, ಸಾನ್ವಿ, ಸಹನಾ, ಶ್ರೀನಿಧಿ, ಮಹಾಲಕ್ಷ್ಮಿ ವಿವಿಧ ಪಾತ್ರಗಳಲ್ಲಿ ಮಿಂಚಿದರು.

    ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ || ಧರಣೀ ದೇವಿ ಮಾಲಗಿತ್ತಿ, ಅಶ್ವಿನಿ ಆಚಾರ್, ಸಾವಿತ್ರಿ ಶಾಸ್ತ್ರಿ ಇವರ ಅರ್ಥಗಾರಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ- ಶರಸೇತು ಬಂಧ ನಡೆಯಿತು. ತಾಳಮದ್ದಳೆಯಲ್ಲಿ ಹಿಮ್ಮೇಳ ಕಲಾವಿದರಾಗಿ ಕುಮಾರಿ ಅನರ್ಘ್ಯ ಟಿ.ಪಿ, ಪೃಥ್ವಿ ಬಡೆಕ್ಕಿಲ, ಶಿಖಿನ್ ಶರ್ಮ ಭಾಗವಹಿಸಿದರು.