ಬೆಂಗಳೂರು: ಮುಡಾ ಸೈಟ್ ಹಗರಣ ಇದೀಗ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಸಂಘರ್ಷವನ್ನು ಹುಟ್ಟುಹಾಕಿದೆ. ಸಿಎಂ ಸಿದ್ದರಾಮಯ್ಯ ವಿರುದ್ದ ಆರೋಪ ಕೇಳಿದ ತಕ್ಷಣ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರ ನಿಲುವಿನ ಬಗ್ಗೆ ಪ್ರದೇಶ ಕಾಂಗ್ರೆಸ್ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆರೋಪ ಕೇಳಿಬಂದ ತಕ್ಷಣ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ತಾವೇ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ದ ಮಾಡಿರುವ ಆರೋಪಗಳನ್ನು ಹಿಂಪಡೆಯುತ್ತಾರ ಹಾಗೂ ಅಶೋಕ್ ಅವರ ಭೂ ಅಕ್ರಮ ಬಗ್ಗೆ ತನಿಖೆಗೆ ಒತ್ತಾಯಿಸುತ್ತಾರ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಜಿ ಶಾಸಕರೂ ಆಗಿರುವ ರಮೇಶ್ ಬಾಬು ಅವರು ಈ ಸಂಬಂಧ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆ ಗಮನಸೆಳೆದಿದೆ. ಕರ್ನಾಟಕದಲ್ಲಿ ಜನನಾಯಕರಾಗಿ ಬೆಳೆದವರಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಒಬ್ಬರು. ಜನನಾಯಕರು ಸಂದರ್ಭಕ್ಕೆ ಪೂರಕವಾಗಿ ತಮ್ಮ ನಿಲುವು ಮತ್ತು ಹೇಳಿಕೆಗಳನ್ನು ಬದಲಾಯಿಸಿದರೆ ಅವರು ಜನನಾಯಕರಾಗುವುದಿಲ್ಲ ಎಂದು ರಮೇಶ್ ಬಾಬು ಪ್ರತಿಪಾದಿಸಿದ್ದಾರೆ.
ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಕುಮಾರ ಸ್ವಾಮಿ ಅವರೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸಿದ ಯಡಿಯೂರಪ್ಪನವರು, ಕುಮಾರಸ್ವಾಮಿ ಅವರಿಂದ ಅಧಿಕಾರ ವಂಚಿತರಾಗಿ ವಚನ ಭ್ರಷ್ಟತೆಯ ಆರೋಪ ಮಾಡಿ ಇದೇ ಕಾರಣಕ್ಕಾಗಿ ಹೋರಾಟ ಮಾಡಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರು. ತದನಂತರ ಬೇರೆಬೇರೆ ಸಂದರ್ಭಗಳಲ್ಲಿ ಜೆಡಿಎಸ್ ಪಕ್ಷದ ಮೇಲೆ, ದೇವೇಗೌಡರ ಮೇಲೆ ಮತ್ತು ಅವರ ಕುಟುಂಬದ ಮೇಲೆ ವಿಧಾನ ಮಂಡಲದ ಒಳಗಡೆ ಗುರುತರವಾದ ಆರೋಪಗಳನ್ನು ಮಾಡಿ ಆ ಆರೋಪಗಳು ಧಾಖಲೆ ಆಗಿರುತ್ತವೆ. ಆದರೆ ಮಗನ ರಾಜಕಾರಣದ ಭವಿಷ್ಯದ ಅನಿವಾರ್ಯತೆಗಾಗಿ ಜೆಡಿಎಸ್ ಪಕ್ಷ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೈ ಜೋಡಿಸಿ ಶನಿವಾರ (ಆ.3) ಪಾದಯಾತ್ರೆಗೆ ಚಾಲನೆ ನೀಡುವ ಮೂಲಕ ವರ್ತಮಾನ ಕಾಲದ ದುರಂತ ನಾಯಕರಾಗಿ ಕಾಣಿಸಿಕೊಂಡಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.
ಇದೇ ವೇಳೆ, ಕರ್ನಾಟಕದ ಜನರಿಗೆ ಕೆಲವು ಪ್ರಶ್ನೆಗಳಿಗೆ ಯಡಿಯೂರಪ್ಪ ಅವರು ಸಾರ್ವಜನಿಕವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಉತ್ತರಿಸಬೇಕಿದೆ ಎಂದಿರುವ ರಮೇಶ್ ಬಾಬು, 10 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
- ಯಡಿಯೂರಪ್ಪನವರು 2008ರಲ್ಲಿ JDS ಪಕ್ಷದ ಮೇಲೆ, ಹೆಚ್.ಡಿ.ಕುಮಾರಸ್ವಾಮಿ ಮೇಲೆ ಮಾಡಿದ್ದ ವಚನ ಭ್ರಷ್ಟತೆಯ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
- ಈ ರಾಜ್ಯದ ಸಿಎಂ ಆಗಿ 17-03-2011ರಲ್ಲಿ ವಿಧಾನ ಪರಿಷತ್ನಲ್ಲಿ ಮಾತನಾಡಿ ದೇವೇಗೌಡರು ತನ್ನ ಕುಟುಂಬದವರಿಗೆ ಮೈಸೂರಿನ ಮೂಡ’ದಲ್ಲಿ ಅಕ್ರಮವಾಗಿ 48 ನಿವೇಶನಗಳನ್ನು ನೀಡಿರುವುದಾಗಿ ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
- ಅದೇ ದಿನ ವಿಧಾನ ಪರಿಷತಿನಲ್ಲಿ ಆರೋಪ ಮಾಡಿ ಜಂತ್ ಕಲ್ ಮೈನಿಂಗ್ ನವೀಕರಣದಲ್ಲಿ ದೇವೇಗೌಡರ ಕುಟುಂಬದವರು ಪಾಲುಗರಿಕೆ ಪಡೆದಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
- ಕುಮಾರ ಸ್ವಾಮಿ ಅವರಿಗೆ ಮೂಡದಲ್ಲಿ ನಿವೇಶನ ಸಂಖ್ಯೆ. 17B(1) ವಿಸ್ತೀರ್ಣ 75X280 ಅಡಿ 1984 ರಲ್ಲಿ ಅಕ್ರಮವಾಗಿ ಹಂಚಿಕೆಯಾಗಿದೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
- 25-05-2018 ರಲ್ಲಿ ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡುವಾಗ, ಹೆಚ್. ಡಿ. ಕುಮಾರ ಸ್ವಾಮಿ ರವರು ತಾವು ಬೆಂಬಲ ವಾಪಸ್ಸು ಪಡೆದ ನಂತರ ಅಂದಿನ ಮುಖ್ಯ ಮಂತ್ರಿಯಾಗಿ 22 ಗಣಿಗಾರಿಕೆ ಗುತ್ತಿಗೆ ಅನುಮೋದನೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
- ಅದೇ ದಿನ ವಿಧಾನ ಸಭೆಯಲ್ಲಿ ಮಾತನಾಡುವಾಗ 1984 ರಲ್ಲಿ ದೇವೇಗೌಡರು ಅವರ ಕುಟುಂಬದವರಿಗೆ ಮೂಡದಲ್ಲಿ 46 ನಿವೇಶನ ಹಂಚಿಕೆ ಮಾಡಿದ್ದರು ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
- ಬಿ.ಎಸ್.ಯಡಿಯೂರಪ್ಪನವರು ಅಂದಿನ ರಾಜ್ಯಪಾಲರು ತಮ್ಮ ವಿರುದ್ದ ಬಂದ ಆರೋಪದ ಮೇಲೆ Prosecution ವಿಚಾರಣೆಗೆ ಅನುಮತಿ ನೀಡಿದ್ದನ್ನು ಕರ್ನಾಟಕ ಹೈ ಕೋರ್ಟ್ ನಲ್ಲಿ ರಿಟ್ ಪಿಟಿಷನ್ ಮುಖಾಂತರ ಪ್ರಶ್ನೆ ಮಾಡಿದ್ದು, ಹೈ ಕೋರ್ಟ್ ಇವರ ಅರ್ಜಿಯನ್ನು ಮಾನ್ಯ ಮಾಡಿ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದು, ತಪ್ಪು ಎಂದು ಹೇಳಿರುತ್ತದೆ. ಯಡಿಯೂರಪ್ಪನವರು ಈ ತೀರ್ಪುನ್ನು ಒಪ್ಪುತ್ತಾರೆಯೇ ಅಥವಾ ನಿರಾಕರಿಸುತ್ತಾರೆಯೇ?
- ಯಡಿಯೂರಪ್ಪನರು ತಮ್ಮ ಪ್ರಕರಣದಲ್ಲಿ ಅರ್ಜಿದಾರರಾದ ಬಾಲರಾಜ್ ಮತ್ತು ಶಿರಾಜಿನ್ ಭಾಷಾ ರವರನ್ನು ಬಳಸಿಕೊಂಡು ಹೆಚ್.ಡಿ.ದೇವೇಗೌಡರು ತಮ್ಮ ವಿರುದ್ಧ ದೂರು ದಾಖಲಿಸಿದ್ದರು ಎಂದು ಅನೇಕ ಸಂಧರ್ಭಗಳಲ್ಲಿ ಆರೋಪ ಮಾಡಿದ್ದರು. ಯಡಿಯೂರಪ್ಪನವರು ಈ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರೆಯೇ?
- ಯಡಿಯೂರಪ್ಪನವರು ಪಾದಯಾತ್ರೆಯ ಉದ್ಘಾಟನೆಗೆ ತಮ್ಮ ಪ್ರಕರಣದ ದೂರುದಾರರಾದ ಬಾಲರಾಜ್ ಮತ್ತು ಶಿರಾಜಿನ್ ಭಾಷರವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ತಮ್ಮ ಪಕ್ಷದ ಹೈ ಕಮಾಂಡ್ ನಿಂದ ಯಾವುದೇ ನಿರ್ಬಂಧ ಇತ್ತೇ?
- ಮೂಡ ಪ್ರಕರಣದಲ್ಲಿ ಪಾದಯಾತ್ರೆ ಉದ್ಘಾಟಿಸಿದ ಯಡಿಯೂರಪ್ಪನವರು ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ ಬಿ. ಎಂ. ಕಾವಲು ಗ್ರಾಮದ ಸುಮಾರು 2500 ಎಕರೆ ಅಕ್ರಮ ಭೂಮಿ ಹಂಚಿಕೆ ಆರೋಪದ ಸಂಬಂಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ತನಿಖೆಗೆ ಒತ್ತಾಯಿಸುವರೇ?
ಯಡಿಯೂರಪ್ಪನವರು ಈ ರಾಜ್ಯದ ಒಬ್ಬ ಜನನಾಯಕರಾಗಿದ್ದು, ಸದನದ ಒಳಗಡೆ ಅವರು ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಮೇಲೆ ಆರೋಪಗಳನ್ನು ಮಾಡಿದ್ದು, ಇವುಗಳು ಅಧಿಕೃತ ದಾಖಲೆಗಳಾಗಿ ಉಳಿದುಕೊಂಡಿರುತ್ತವೆ. ಮಾನ್ಯ ಯಡಿಯೂರಪ್ಪನವರು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಅವರ ನಾಯಕತ್ವಕ್ಕೆ ಅನುಗುಣವಾಗಿ ಮೇಲಿನ 10 ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ರಮೇಶ್ ಬಾಬು ಹೇಳಿದ್ದಾರೆ.