Tag: CM Siddaramaiah

  • ‘ಸತ್ಯಮೇವ ಜಯತೆ’; ಸಿದ್ದರಾಮಯ್ಯ ಕುರಿತು ಬೆಳವಣಿಗೆಯ ಕುತೂಹಲ

    ‘ಸತ್ಯಮೇವ ಜಯತೆ’; ಸಿದ್ದರಾಮಯ್ಯ ಕುರಿತು ಬೆಳವಣಿಗೆಯ ಕುತೂಹಲ

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಸೈಟು ಹಂಚಿಕೆ ಅಕ್ರಮ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ ಅನುಮತಿ ನೀಡಿರುವ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಕೋಲಾಹಲಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಆಡಳಿತ ಪ್ರತಿಪಕ್ಷಗಳ ನಡುವೆ ಸಂಘರ್ಷ ಏರ್ಪಟ್ಟಿದೆ.

    ಒಂದೆಡೆ ಈ ಪ್ರಾಸಿಕ್ಯೂಷನ್ ಅನಿಮತಿಗೆ ತಡೆ ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 29ಕ್ಕೆ ಮುಂದೂಡಿದೆ. ಇನ್ನೊಂದೆಡೆ, ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಆದೇಶವನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಸತ್ಯಮೇವ ಜಯತೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಸಾಮಾಜಿಕ ಜಾಲತಾಣ ‘X’ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆಯಿಟ್ಟಿರುವ, ಈ ನೆಲದ ಕಾನೂನನ್ನು ಗೌರವಿಸುವ ಓರ್ವ ಪ್ರಜೆಯಾಗಿ ಸುಳ್ಳು ಪ್ರಕರಣದಲ್ಲಿ ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ರಾಜಕೀಯ ಪ್ರೇರಿತ ನಿರ್ಣಯದ ವಿರುದ್ಧ ಘನ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಉಚ್ಚ ನ್ಯಾಯಾಲಯವು ಈ ವಿಚಾರವನ್ನು ಆಲಿಸಿ, ಮುಂದಿನ ವಿಚಾರಣೆಯ ವರೆಗೆ ವಿಶೇಷ ನ್ಯಾಯಾಲಯಗಳು ವಿಚಾರಣೆ ಮುಂದೂಡಬೇಕು, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ನೀಡಿದೆ ಎಂದು ಹೇಳಿದ್ದಾರೆ.

    ನ್ಯಾಯಾಲಯದ ಈ ಆದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತ ನನ್ನ ಧನ್ಯವಾದ ಸಲ್ಲಿಸುತ್ತೇನೆ. ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಎಂಬುದು ನನ್ನ ದೃಢ ನಂಬಿಕೆಯಾಗಿದೆ ಎಂದಿರುವ ಸಿಎಂ, ‘ಸತ್ಯಮೇವಜಯತೆ’ ಎಂದೂ ಬರೆದುಕೊಂಡಿದ್ದಾರೆ.

  • ಸಿಎಂ ವಿರುದ್ದದ ಪ್ರಾಸಿಕ್ಯೂಷನ್; ಹೈಕೋರ್ಟ್‌ನಲ್ಲಿ ತಡೆ ಸಿಗುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು

    ಬೆಂಗಳೂರು: ಮುಡಾ ಅಕ್ರಮ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ನಿಯಮ ಪಾಲಿಸದೆ ಇದ್ದರೂ ಅನುಮತಿ ನೀಡಿದ್ದಾರೆ. ಹಾಗಾಗಿ ಈ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಪ್ರಕರಣ ವಿಚಾರಣೆಗೆ ಹೋದ ತಕ್ಷಣ ಇದಕ್ಕೆ ತಡೆಯಾಜ್ಞೆ ಸಿಗುತ್ತದೆ ಎಂದು ಬಿ.ಎಲ್. ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಲ್. ಶಂಕರ್, ರಾಜಕೀಯ ಪ್ರೇರಿತ ನಡೆಯುವುದಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಎಲ್ಲಾ ನಿಯಮಗಳನ್ನು ಪಾಲಿಸಿ ಪ್ರಕರಣಕ್ಕೆ ಅನುಮತಿ ನೀಡಿ ಎಂದು ಕೇಳಿದಾಗ ರಾಜ್ಯಪಾಲರು ಅನುಮತಿ ನೀಡಿರಲಿಲ್ಲ. ಆದರೆ ಈಗ ನಿಯಮ ಪಾಲಿಸದೆ ಇದ್ದರೂ ಅನುಮತಿ ನೀಡಿದ್ದಾರೆ ಎಂದು ದೂರಿದ್ದಾರೆ.

    ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತನಿಖೆಗೆ ಅನುಮತಿ ನೀಡಿ ಎಂದು ಈ ಹಿಂದೆ ಕೇಳಿರುವ ನಾಲ್ಕು ಪ್ರಕರಣಗಳು ನಿಮ್ಮ ಮುಂದೆ ಬಾಕಿ ಇವೆ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ್ ರೆಡ್ಡಿ ಅವರ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೇಳಿದ್ದರೂ ನೀಡಿಲ್ಲ ಎಂದವರು ಹೇಳಿದ್ದಾರೆ.

    ಮುಖ್ಯಮಂತ್ರಿಗಳ ಜೊತೆಗೆ ಇಡೀ ಕಾಂಗ್ರೆಸ್ ಪಕ್ಷ ನಿಂತಿದೆ ಎಲ್ಲಾ ಶಾಸಕರು, ಮುಖಂಡರು, ಕಾರ್ಯಕರ್ತರು ಅವರ ಪರವಾಗಿ ನಿಂತಿದ್ದೇವೆ. ಹೈಕಮಾಂಡ್ ಸಹ ಸಿದ್ದರಾಮಯ್ಯ ಅವರ ಪರವಾಗಿದೆ ಎಂದ ಅವರು, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ಅಪಾರ ಜನ ಬೆಂಬಲ ಸಿದ್ದರಾಮಯ್ಯ ಅವರಿಗೆ ಸಿಕ್ಕಿದೆ. ಕರ್ನಾಟಕದಲ್ಲಿ ಮುಂಚೂಣಿಯಲ್ಲಿರುವ ಅತಿ ಜನಪ್ರಿಯ ನಾಯಕರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ಜನಬೆಂಬಲ, ಪಕ್ಷದ ಬೆಂಬಲ ಸೇರಿದಂತೆ ಸಂವಿಧಾನದ ಮತ್ತು ಕಾನೂನಿನ ಬೆಂಬಲ ಇರುವಂತಹ ಸಿದ್ದರಾಮಯ್ಯ ಅವರನ್ನು ಅನೈತಿಕ ಮಾರ್ಗದ ಮೂಲಕ ಅಧಿಕಾರದಿಂದ ಕೆಳಕ್ಕೆ ಇಳಿಸಲು ಹುನ್ನಾರ ಮಾಡಲಾಗುತ್ತಿದೆ ಎಂದರು.

    ಈ ಹೊನ್ನಾರದ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟವನ್ನು ರೂಪಿಸುತ್ತದೆ. ಜನರ ಬಳಿಗೆ ಹೋಗಿ ಸತ್ಯವನ್ನು ತಿಳಿಸುವ ಕೆಲಸ ಮಾಡುತ್ತದೆ. ಎಲ್ಲಿಯವರೆಗೆ ನ್ಯಾಯ ಸಿಗುವುದಿಲ್ಲವೋ ಅಲ್ಲಿಯ ತನಕ ಈ ಹೋರಾಟ ಮುಂದುವರಿಯುತ್ತದೆ ಎಂದ ಬಿ.ಎಲ್.ಶಂಕರ್, ಮೂಡ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಕಿಂಚಿತ್ತು ಇಲ್ಲ. ಇದಕ್ಕೆ ಸಾಕ್ಷಿಗಳು ಇಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಪ್ರಕರಣ ವಿಚಾರಣೆಗೆ ಹೋದ ತಕ್ಷಣ ಇದಕ್ಕೆ ತಡೆಯಾಜ್ಞೆ ಸಿಗುತ್ತದೆ.

  • ಬೆಂಗಳೂರಿನಲ್ಲಿ ಭೂಸ್ವಾದೀನಪಡಿಸಿದರೆ ಎಕರೆಗೆ 12.1 ಕೋ.ರೂ., ಮೈಸೂರಿನಲ್ಲಿ 62 ಕೋ.ರೂ.; ಇದು ಹೇಗೆ ಸಾಧ್ಯ?

    ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ಭೂಸ್ವಾದೀನಪಡಿಸಿದರೆ ಎಕರೆಗೆ 12.1 ಕೋಟಿ ರೂಪಾಯಿ, ಮೈಸೂರಿನಲ್ಲಿ 62 ಕೋಟಿ ರೂಪಾಯಿ.  ಇದು ಹೇಗೆ ಸಾಧ್ಯ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕ, ಮಾಜಿ ಸಚಿವ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.

    ಮುಡಾ ಹಗರಣ ಕುರಿತಂತೆ ಸಿಎಂ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ ಹೇಳಿಕೆ ಬಿಡುಗಡೆ ಮಾಡಿರುವ ಸುರೇಶ್ ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮೈಸೂರಿನಲ್ಲಿ “ಜನಾಂದೋಲನ” ನಡೆಯುತ್ತಿರುವ ಈ ಸಂದರ್ಭದಲ್ಲಿ ಅತ್ಯಂತ ಮಹತ್ವದ ಕೋರಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.

    ಕೆಐಎಡಿಬಿ ಬೆಂಗಳೂರು ಉತ್ತರ ತಾಲೂಕಿನ ಹೆಬ್ಬಾಳ ಮತ್ತು ಹೆಬ್ಬಾಳ ಅಮಾನಿಕೆರೆ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಪ್ರತಿ ಎಕರೆ ಭೂಮಿಗೆ 12.10 ಕೋಟಿ ರೂ. ದರ ನಿಗದಿಪಡಿಸಿದೆ.ಇದು ಮಾರುಕಟ್ಟೆ ದರಕ್ಕಿಂತ ತುಂಬಾ ಕಡಿಮೆ ಎಂದು ಭಾವಿಸುತ್ತೇನೆ. ಆದರೆ ತಮ್ಮ ಮೈಸೂರಿನ ಹೊರವಲಯದ ಕೆಸರೆ ಗ್ರಾಮದಲ್ಲಿ 3.16 ಎಕರೆ ಜಮೀನಿನ ಬೆಲೆ 62 ಕೋಟಿ ರೂಪಾಯಿ ಎಂಬುದು ನಿಮ್ಮ ಹೇಳಿಕೆಯಿಂದಲೇ ತಿಳಿದುಬಂದಿದೆ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ

    ಮುಖ್ಯಮಂತ್ರಿಯ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ಭೂಸ್ವಾಧೀನದ ಎಲ್ಲಾ ಪ್ರಕರಣಗಳಲ್ಲಿ ಭೂಸ್ವಾಧೀನಕ್ಕೆ ಪರಿಹಾರವನ್ನು ಹೆಚ್ಚಿಸಬೇಕುಬೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಎಲ್ಲಾ ರೀತಿಯ (ಬಿಡಿಎ, ನೀರಾವರಿ, ಮೆಟ್ರೋ, ಹೆದ್ದಾರಿ…) ಭೂಸ್ವಾಧೀನ ಪ್ರಕರಣಗಳಲ್ಲಿ ಪರಿಹಾರವನ್ನು ನಿಗದಿಪಡಿಸುವಾಗ ಸರ್ಕಾರವು ಕೆಸರೆ ಗ್ರಾಮದ 62 ಕೋಟಿ ರೂ ಗಳನ್ನೇ ಮಾನದಂಡ ದರವಾಗಿ ಇರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿರುವ ಸುರೇಶ್ ಕುಮಾರ್, ಮುಖ್ಯಮಂತ್ರಿಗಳಿಗೆ ಅನ್ವಯಿಸುವ ದರ ಶ್ರೀಸಾಮಾನ್ಯನಿಗೂ ಅನ್ವಯಿಸಬೇಕಲ್ಲವೇ? ಇದಕ್ಕೆ ಸಾಮಾಜಿಕ ನ್ಯಾಯವೆಂದು ಹೇಳುತ್ತಾರೆ ಎಂದು ಅಭಿಪ್ರಾಯ ಮುಂದಿಟ್ಟಿದ್ದಾರೆ..

  • ಬೆಂಗಳೂರಿನಲ್ಲಿ DL ಹೊಂದಿರದ ಚಾಲಕರ ಅವಾಂತರ..!  ಅವಘಡಗಳಿಗೆ ಬ್ರೇಕ್ ಹಾಕಿ ಎಂದು ಸಿಎಂಗೆ ರಮೇಶ್ ಬಾಬು ಪತ್ರ

    ಬೆಂಗಳೂರಿನಲ್ಲಿ DL ಹೊಂದಿರದ ಚಾಲಕರ ಅವಾಂತರ..!  ಅವಘಡಗಳಿಗೆ ಬ್ರೇಕ್ ಹಾಕಿ ಎಂದು ಸಿಎಂಗೆ ರಮೇಶ್ ಬಾಬು ಪತ್ರ

    ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯಲ್ಲಿ ಚಾಲನಾ ಪರವಾನಿಗಿ (DL ) ಇಲ್ಲದೆ ಲಾರಿ ಚಾಲಕರು ಅಪಘಾತಗಳನ್ನು ಎಸಗುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಗಮನಸೆಳೆದಿದೆ.

    07-08-2024 ರಂದು ಬೆಂಗಳೂರಿನ ಡಾಬಸ್ ಪೇಟೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗರ್ಭಿಣಿ ಮಹಿಳೆ ಮತ್ತು ಗರ್ಭದೊಳಗೆ ಇದ್ದ ಮಗು ಮೃತ ಪಟ್ಟಿದ್ದು, ಟಿಪ್ಪರ್ ಲಾರಿಯ ಚಾಲಕ ಪರಾರಿಯಾಗಿರುತ್ತಾನೆ. ಒಂದು ವಾರದ ಹಿಂದೆ ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಇಂಜಿನಿಯರ್‌ಗಳು ಮೃತ ಪಟ್ಟಿದ್ದು, ಬಿಬಿಎಂಪಿ ಕಸದ ಲಾರಿ ಚಾಲಕ ಪರಾರಿಯಾಗಿರುತ್ತಾನೆ. ಇತ್ತೀಚಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಬಹುತೇಕ ಲಾರಿ ಚಾಲಕರ ಚಾಲನಾ ಪರವಾನಿಗಿ ಇರುವುದಿಲ್ಲ ಎಂದು ರಮೇಶ್ ಬಾಬು ಅವರು ತಮ್ಮ ಪತ್ರದಲ್ಲಿ ಸರ್ಕಾರದ ಗಮನಸೆಳೆದಿದ್ದಾರೆ.

    ಬೆಂಗಳೂರಿನಲ್ಲಿ ಕಸ ಸಾಗಾಣೆ ಮಾಡುವ ಲಾರಿಗಳು, ವಾಣಿಜ್ಯ ಚಟುವಟಿಕೆಗಳಿಗೆ ಮತ್ತು ಕಟ್ಟಡ ಕಾಮಗಾರಿಗಳ ಸಾಗಾಣೆಗೆ ಬಳಸಿಕೊಳ್ಳುವ ಬಹುತೇಕ ಲಾರಿಗಳ ಚಾಲಕರಿಗೆ, ಕಟ್ಟಡ ಮತ್ತು ಇತರೆ ಕಾಮಗಾರಿಗಳಲ್ಲಿ ಬಳಕೆಯಾಗುತ್ತಿರುವ ಟ್ರ್ಯಾಕ್ಟರ್ ಗಳ ಚಾಲಕರು ಚಾಲನಾ ಅನುಮತಿ ಪತ್ರವನ್ನೇ ಹೊಂದಿಲ್ಲ ಎಂದವರು ದೂರಿದ್ದಾರೆ.

    ಕುಡಿದು ವಾಹನಗಳನ್ನು ಚಾಲನೆ ಮಾಡುವುದು, ಅತೀ ವೇಗದ ಚಾಲನೆ, ರಸ್ತೆ ನಿಯಮಗಳ ಉಲ್ಲಂಘನೆ ಮತ್ತು ಕಡಿಮೆ ವೇತನ ನೀಡಿ ಅಸಮರ್ಥ ಚಾಲಕರನ್ನು ಬಳಸಿಕೊಳ್ಳುವ ಕಾರಣಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪದೇ ಪದೇ ರಸ್ತೆ ಅಪಘಾತಗಳು ನಡೆಯುತ್ತಿದ್ದು, ಅಪಘಾತಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ. ಹಾಗಾಗಿ ತಾವು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಲಾರಿ ಮತ್ತು ಸರಕು ಸಾಗಾಣಿಕೆಯ ಹಾಗೂ ಕಸದ ಲಾರಿಗಳ ಚಾಲಕರ ಚಾಲನಾ ಪತ್ರವನ್ನು (DL) ಕಡ್ಡಾಯವಾಗಿ ಮತ್ತು ನಿರಂತರವಾಗಿ ತಪಾಸಣೆ ಮಾಡಲು ಸೂಚಿಸಬೇಕಾಗಿ ರಮೇಶ್ ಬಾಬು ಆಗ್ರಹಿಸಿದ್ದಾರೆ. ಲೈಸನ್ಸ್ ಇಲ್ಲದೆ ವಾಹನ ಚಾಲನೆ ಮಾಡುವ ಚಾಲಕರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಒತ್ಗಾಯಿಸಿದ್ದಾರೆ.

  • ಮುಡಾ ಹಗರಣ; ಇದೀಗ ರಾಜಭವನ-ಸರ್ಕಾರ ನಡುವೆ ಸಂಘರ್ಷ; ರಾಜ್ಯಪಾಲರ ಶೋಕಾಸ್ ನೊಟೀಸ್ ಹಿಂಪಡೆಯುವಂತೆ ಒತ್ತಾಯಿಸಲು ಸಂಪುಟ ತೀರ್ಮಾನ

    ಮುಡಾ ಹಗರಣ; ಇದೀಗ ರಾಜಭವನ-ಸರ್ಕಾರ ನಡುವೆ ಸಂಘರ್ಷ; ರಾಜ್ಯಪಾಲರ ಶೋಕಾಸ್ ನೊಟೀಸ್ ಹಿಂಪಡೆಯುವಂತೆ ಒತ್ತಾಯಿಸಲು ಸಂಪುಟ ತೀರ್ಮಾನ

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಮುಡಾ ಹಗರಣ ವಿಚಾರದಲ್ಲಿ ಈವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ನಡೆಯುತ್ತಿದ್ದ ಸಂಘರ್ಷ ಇದೀಗ ರಾಜಭವನ-ಸರ್ಕಾರ ನಡುವಿನ ಕಲಹದತ್ತ ತಿರುಗಿದಂತಿದೆ.

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಕುರಿತಂತೆ ಪ್ರಾಸಿಕ್ಯೂಷನ್ ಅನುಮತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಹಿನ್ನೆಲೆ ರಾಜ್ಯಪಾಲರು ಸಿಎಂಗೆ ನೀಡಿರುವ ನೊಟೀಸ್ ಇದೀಗ ವಿದ್ಯಮಾನಗಳ ಕೇಂದ್ರಬಿಂದುವಾಗಿದ್ದು, ಈ ವಿಚಾರದಲ್ಲಿ ಇಂದು (ಆ.1) ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರವೊಂದು ರಾಜಭವನ ಮತ್ತು ಸರ್ಕಾರದ ನಡುವಿನ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಂತಿದೆ.

    ಅಷ್ಟಕ್ಕೂ ಸಂಪುಟದ ತೀರ್ಮಾನ ಏನು..?

    ರಾಜ್ಯಪಾಲರು ನೀಡಿರುವ ನೊಟೀಸ್ ಸಿದ್ದರಾಮಯ್ಯ ಅವರನ್ನು ಆತಂಕಕ್ಕೀಡು ಮಾಡಿದರೆ, ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೂ ಮುಜುಗರದ ಪರಿಸ್ಥಿತಿಯನ್ನು ತಂದೊಡ್ಡಿದೆ. ಇಂದು ವೇಳೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದೇ ಆದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡುವ ಪರಿಸ್ಥಿತಿಯೂ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಜಾಣ ನಡೆ ಅನುಸರಿಸಿರುವ ಸಿದ್ದರಾಮಯ್ಯ ಇಂದಿನ ಸಂಪುಟ ಸಭೆಯ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಿ.ಕೆ‌.ಶಿವಕಮಾರ್ ಅವರಿಗೆ ಬಿಟ್ಟುಕೊಟ್ಟರು.

    ಡಿ.ಕೆ.ಶಿ.ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ರಾಜ್ಯಪಾಲರು ನೀಡಿರುವ ನೊಟೀಸ್​ ಹಿಂಪಡೆಯುವಂತೆ ಒತ್ತಾಯಿಸುವ ಹಾಗೂ ಈ ಬಗ್ಗೆ ಕಾನೂನು ಹೋರಾಟ ನಡೆಸಲು ಸಂಪುಟ ನಿರ್ಣಯ ಕೈಗೊಂಡಿತು.

    ಮೊಟ್ಟೆ ಹಗರಣಕ್ಕೆ ಸಂಬಂಧಿಸಿದಂತೆ ದೂರು ನೀಡಿ ಮೂರು ತಿಂಗಳಾದರೂ ರಾಜ್ಯಪಾಲರು ಕ್ರಮ ಕೈಗೊಂಡಿರಲಿಲ್ಲ. ಹಿಂದೆ ಬಿಜೆಪಿಯವರ ವಿರುದ್ದ ಖಾಸಗಿ ದೂರು ದಾಖಲಾದಾಗ ಪ್ರಾಸಿಕ್ಯುಷನ್‌ಗೂ ಅನುಮತಿ ನೀಡಿಲ್ಲ, ಶೋಕಾಸ್ ನೊಟೀಸ್ ಕೂಡ ನೀಡಿರಲಿಲ್ಲ. ಈ ಹಿಂದೆ ಬಿಜೆಪಿ ನಾಯಕರ ವಿರುದ್ದ ಅನೇಕ ದೂರುಗಳು ಸಲ್ಲಿಕೆಯಾಗಿದ್ದು, ಆ ದೂರುಗಳ ಬಗ್ಗೆ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಈಗ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ.

    ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ತರಾತುರಿಯಲ್ಲಿ ನೋಟೀಸ್ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿರುವುದರಿಂದ ಈ ನೊಟೀಸ್​ ಹಿಂಪಡೆಯುವಂತೆ ರಾಜ್ಯಪಾಲರನ್ನು ಒತ್ತಾಯಿಸಲು ಸಚಿವ ಸಂಪುಟ ನಿರ್ಧಾರಿಸಿದೆ.

    ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ರಾಜಣ್ಣ, 20 ವರ್ಷಗಳ ಹಿಂದೆಯೇ ಸಿಎಂ ಪತ್ನಿ ಕಾನೂನು ಪ್ರಕಾರವಾಗಿಯೇ ಮುಡಾ ಸೈಟ್​​ ಪಡೆದುಕೊಂಡಿದ್ದಾರೆ.ಯ ಹೀಗಿದ್ದರೂ ರಾಜಕೀಯ ಪ್ರೇರಿತವಾಗಿ ವಿವಾದ ಎಬ್ಬಿಸಲಾಗಿದೆ ಎಂದರು. ಈಗ ಗವರ್ನರ್ ಗೆಹ್ಲೋಟ್​ ಮುಂದೆ‌ ಎಷ್ಟು ಅರ್ಜಿಗಳು ಇವೆ?. ಇದು ರಾಜಕೀಯ ಪ್ರೇರಿತ ಹಾಗಾಗಿ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೊಟೀಸ್ ಹಿಂಪಡೆಯಲು ಒತ್ತಾಯಿಸುವ ತೀರ್ಮಾನಿಸಲಾಯಿತು ಎಂದು ತಿಳಿಸಿದರು.